»   » ಈ ಹಿನ್ನೆಲೆಯಲ್ಲಿ ವಿಷ್ಣುವರ್ಧನ್‌ ಜೊತೆ ಮಾತುಕತೆ...

ಈ ಹಿನ್ನೆಲೆಯಲ್ಲಿ ವಿಷ್ಣುವರ್ಧನ್‌ ಜೊತೆ ಮಾತುಕತೆ...

By: ಶಾಮಿ
Subscribe to Filmibeat Kannada

*

ಕ್ಷಣ ಕಾಲ ಮೌನ. ಇದ್ದಕ್ಕಿದ್ದಂತೆ ಮುಗುಮ್ಮು. ಇದೇನು ಹಮ್ಮೋ ಬಿಮ್ಮೋ, ಗರಮ್ಮೋ? ವಿಷ್ಣುವರ್ಧನ್‌ ಮಾತುಗಳ ಬಗ್ಗೆ ಏಕ್‌ದಂ ಒಂದು ನಿರ್ಧಾರಕ್ಕೆ ಬರುವುದೇ ಕಷ್ಟ . ಆದರೆ ಅವರು ಫಿಲಸಾಫಿಕಲ್‌ ಅಂತ ಕಿಂಚಿತ್ತೂ ಅನುಮಾನವಿಲ್ಲದೆ ಹೇಳಬಹುದು. ಕೇಳುವ ಪ್ರಶ್ನೆಗಳಿಗೆ ಯೋಚಿಸಿ ಯೋಚಿಸಿಯೇ ಉತ್ತರ ಕೊಡುವ ಅವರ ಮಾತಿಗೆ ಸೆಳಕಿರುತ್ತದೆ. ಅವರ ಈಚಿನ ಸಿನಿಮಾಗಳು ಕೊಡುವ ನೀತಿ ಪಾಠದ ಸ್ವರೂಪ ಇರುತ್ತದೆ. ನಮೂನೆಗೆ ಅವರ ಈ ಮಾತು ಕೇಳಿ- ಹಿಂದಿನ ದಾರಿ ಮರೆತಿದ್ದೇವೆ, ಮುಂದೆ ದಾರಿ ಕಾಣುತ್ತಿಲ್ಲ. ಒಂದು ಚಿತ್ರ ಮುಗಿದ ನೆಮ್ಮದಿಯಿರಲ್ಲ. ಇನ್ನೊಂದು ಚಿತ್ರ ಮಾಡೋಕೆ ಧೈರ್ಯ ಸಾಲದು. ...

ಮಗಳ ಮದುವೆ ಮಾಡಿಕೊಟ್ಟಿರಿ. ಈಗ ಒಂಟಿತನ ನಿಮ್ಮನ್ನು ಕಾಡುತ್ತದೆಯೇ ಎಂದು ಕೇಳಿದರೆ- ಹೌದು ಅಂದರೆ ಹೌದು, ಅಲ್ಲ ಅಂದರೆ ಅಲ್ಲ ಅನ್ನುತ್ತಾರೆ ವಿಷ್ಣು. ಅಳಿಯ ಅನಿರುದ್ಧ ಇದೀಗ ತಳವೂರುತ್ತಿದ್ದಾನೆ. ತಮಿಳುನಾಡಿನಿಂದಲೂ ಆಫರ್‌ ಬರುತ್ತಿದೆ. ಇದರ ಬಗ್ಗೆ ವಿಷ್ಣು ಅವರಿಗೂ ನೆಮ್ಮದಿಯಿದೆ. ಅಳಿಯನ ಬಗ್ಗೆ ಪ್ರಚಂಡ ವಿಶ್ವಾಸವಿದೆ. ಅದಕ್ಕೇ ಅವರು ಹೇಳೋದು- ಮಗಳು, ಅಳಿಯ ಅವರದ್ದೇ ಆದ ಭವಿಷ್ಯ ಕಂಡುಕೊಳ್ಳುತ್ತಾರೆ.

ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಹೊಸಬರದ್ದೇ ಕಾರುಬಾರು. ಅದನ್ನು ವಿಷ್ಣು ಎಂಜಾಯ್‌ ಮಾಡುತ್ತಿದ್ದಾರೆ. ಈ ಬದಲಾವಣೆಯನ್ನೂ ಅವರು ಹೇಳುವುದು ಫಿಲಸಾಫಿಕಲ್‌ ಧಾಟಿಯಲ್ಲೇ- ಹೊಸ ಗಿಡ ಮೊಳಕೆಯಾಡೆದರೆ, ಮರಗಳು ಸರಿದು ಜಾಗ ಬಿಡುವುದಿಲ್ಲವೇ. ಹಾಗೇ ನಾವು ಹೊಸಬರ ಏಳಿಗೆ ಕಂಡು ಸಂತೋಷ ಪಡಬೇಕು. ಈ ಬದಲಾವಣೆಯೇ ಹೀಗೆ. ಓಡೋರೆಲ್ಲ ನಡೆಯೋದಕ್ಕೆ ಶುರುಮಾಡುತ್ತಾರೆ. ಆದರೆ ಸೆಕ್ಯೂರ್‌ ಆಗೋದು ಇವತ್ತಿನ ಪರಿಸ್ಥಿತಿಯಲ್ಲಿ ಸುಲಭವಲ್ಲ. ಜನಗಳ ಮನಸ್ಸಲ್ಲಿ ಜಾಗ ತಗೊಳೋದು ಹುಡುಗಾಟ ಅಲ್ಲ. ಹೊಸದಕ್ಕೆ ಸ್ವಾಗತ ಎಲ್ಲಾ ಕಡೆ ಇದ್ದೇ ಇದೆ. ನಮ್ಮ ಹೊಸ ಹುಡುಗರು ಜನರ ಮನಸ್ಸಲ್ಲಿ ಜಾಗವನ್ನೂ ತಗೋತಾರೆ ಅನ್ನೋ ಭರವಸೆ ನನ್ನದು.

ಬಿಡುವೇ ಇಲ್ಲದೆ ದುಡಿಯುತ್ತಿರುವ ವಿಷ್ಣು ಸದ್ಯಕ್ಕೆ ರಿಟೈರ್ಡ್‌ ಆಗುವ ಮಾತೇ ಇಲ್ಲ. ಅವರದ್ದು ಸ್ನೇಹ ಲೋಕ. ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅನ್ನುವುದು ಅವರ ಜಾಯಮಾನ. ಆ ಕಾರಣಕ್ಕೇ ವಿಜಯಕುಮಾರ್‌ ಒಟ್ಟಿಗಿನ ಮೂವತ್ತು ವರ್ಷಗಳ ಸ್ನೇಹಕ್ಕೆ ಬೆಲೆ ಕೊಟ್ಟು ಸಿಂಹಾದ್ರಿ ಸಿಂಹದಲ್ಲಿ ನಟಿಸಿರುವುದು. ಕೊಬ್ರಿ ಮಂಜನ ಜಮೀನ್ದಾರ ಮಾಧ್ಯಮಗಳ ಸಪೋರ್ಟ್‌ ಇಲ್ಲದೆಯೂ ಗೆದ್ದ. ಸಿಂಹಾದ್ರಿಯ ಸಿಂಹ ತೆರೆ ಕಾಣುವ ಮೊದಲೇ ಐದು ಕೋಟಿ ರುಪಾಯಿ ದುಡ್ಡು ತಂದು ಕೊಟ್ಟಿದೆ.

ಬದುಕಿನ ಬಗ್ಗೆ ಇತ್ತೀಚೆಗೆ ವಿಷ್ಣು ಸತ್ಯವೊಂದನ್ನು ಕಂಡುಕೊಂಡಿದಾರೆ. ಇದಕ್ಕೆ ಕಾರಣಕರ್ತ ವಜ್ರಮುನಿ. ಈಚೆಗೆ ವಜ್ರಮುನಿ ಅವರನ್ನು ನೋಡಲು ವಿಷ್ಣು ಹೋಗಿದ್ದಾಗ, ವಜ್ರಮುನಿ ಕಣ್ಣು ತುಂಬಿಕೊಂಡು ಹೇಳಿದ್ದು- 'ಆಕೆ ನನ್ನನ್ನು ಉಳಿಸಿಕೊಂಡು ಬಿಟ್ಟಳು". ಆಕೆ ಎಂದರೆ ವಜ್ರಮುನಿ ಹೆಂಡತಿ. ವಜ್ರಮುನಿ ಮಾತು ಕೇಳಿ ಥಟ್ಟನೆ ವಿಷ್ಣುಗೆ ಹೊಳೆದದ್ದು- ಪ್ರತಿಯಾಬ್ಬನಿಗೂ ಮೂವರು ತಾಯಿಯರಿರುತ್ತಾರೆ. ಹೆತ್ತಮ್ಮ, ಹೆಂಡತಿ ಮತ್ತು ಮಗಳು! ಅಂದಹಾಗೆ, ಈ ಕಾನ್ಸೆಪ್ಟು ಸಿಂಹಾದ್ರಿಯ ಸಿಂಹದಲ್ಲಿ ಹಾಸುಹೊಕ್ಕು. ಸಾಹಸಿಂಹ ಇದರಲ್ಲಿ ನರಸಿಂಹ ಉರುಫ್‌ ನರಸಿಂಹೇಗೌಡ. ಅಂಬಿ ಕೊಟ್ಟಿರುವ ಮೆಚ್ಚುಗೆಯ ಸರ್ಟಿಫಿಕೇಟ್‌ ಬಗ್ಗೆ ಕೇಳಿದರೆ, ಮುಂದೆ ವಿಷ್ಣು ಸಾಹಸಸಿಂಹನಿಂದ ನರಸಿಂಹನಾಗಿ ಬದಲಾದರೂ ಆದಾರು.

ಪೊದೆಮೀಸೆ ಇಟ್ಟುಕೊಂಡ ವಿಷ್ಣು ಸಕ್ಸೆಸ್‌ನ ಗುಟ್ಟೇನು?
ಮರೆಯಾಗುತ್ತಿರುವ ಜೀವನ ಮೌಲ್ಯಗಳು, ಸಂಬಂಧಗಳ ಬಿಗುವು, ಭಾವನೆಗಳನ್ನು ಸಿನಿಮಾದ ಮೂಲಕ ಕೊಡುವುದು ಸಾಧ್ಯ. ಹಿಂದೆ ಕಂಡದ್ದನ್ನು, ಈಗ ಮರೆಯಾಗುತ್ತಿರುವುದನ್ನು ಜನ ಸಿನಿಮಾದಲ್ಲಿ ನೋಡಿ ಒಪ್ಪಿಕೊಳ್ಳುತ್ತಾರೆ. ಯಾರೇ ಆಗಲಿ ನೇಚರ್‌ ಅಥವಾ ಹೆಂಗಸರ ಹತ್ತಿರ ಇರಬೇಕು. ಆಗ ಬದುಕು ಸಾರ್ಥಕ....

ವಾಟ್‌ ನೆಕ್ಸ್ಟ್‌? ಒಂದು ಸಣ್ಣ ಬ್ರೇಕ್‌ ನಂತರ ಬಹು ವರ್ಷಗಳ ಇನ್ನೊಬ್ಬ ಮಿತ್ರ ನಿರ್ಮಾಪಕನಿಗೆ ವಿಷ್ಣು ಕಾಲ್‌ಶೀಟ್‌. ಸೋ, ವಿಷ್ಣು ಸ್ಟಿಲ್‌ ನಾಟೌಟ್‌!

English summary
An interview with Vishnuvardhan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada