»   » ಹುಟ್ಟಿದ ಹಬ್ಬದದಿನ ದುರಂತ ನಾಯಕಿ ಕಲ್ಪನಾ ನೆನಪು!

ಹುಟ್ಟಿದ ಹಬ್ಬದದಿನ ದುರಂತ ನಾಯಕಿ ಕಲ್ಪನಾ ನೆನಪು!

Subscribe to Filmibeat Kannada


ಏನೇ ಆಗಲಿ, ಮಿನುಗುತಾರೆ ಕಲ್ಪನಾ ಇನ್ನು ಸ್ವಲ್ಪ ದಿನ ನಮ್ಮ ಜೊತೆ ಇರಬೇಕಿತ್ತು.  • ಕೇಶವಸುತ
ಕನ್ನಡ ಚಿತ್ರರಂಗದ ದುರಂತ ನಾಯಕಿಯರಲ್ಲಿ ಕಲ್ಪನಾ ಸಹಾ ಒಬ್ಬರು! ಇಂದು ಅವರನ್ನು ನೆನೆಯಲೊಂದು ನೆಪ ಸಿಕ್ಕಿದೆ. ಬದುಕಿದ್ದಷ್ಟು ವರ್ಷ, ಚಿತ್ರರಸಿಕರ ರಂಜಿಸಿದವರು ಕಲ್ಪನಾ. ಇಂದು(ಜು.18) ಅವರು ನಮ್ಮೊಂದಿಗೆ ಇದ್ದಿದ್ದರೆ, ಸಂಭ್ರಮದ ಹ್ಯಾಪಿ ಬರ್ತ್‌ ಡೇ ಹೇಳಬಹುದಿತ್ತು.. ಆ ಅವಕಾಶ ನಮಗೆನಿಮಗೆ ಇಲ್ಲ ಬಿಡಿ.

ಬೆಳ್ಳಿಮೋಡ, ಶರಪಂಜರ, ಎರಡು ಕನಸು ಮತ್ತಿತರ ಚಿತ್ರಗಳಲ್ಲಿನ ಪಾತ್ರಗಳು ಕಲ್ಪನಾಗೆ ದುರಂತ ನಾಯಕಿ ಎಂಬ ಬಿರುದನ್ನೇ ಕೊಟ್ಟಿದ್ದವು.

ಬಾಳಸಂಗಾತಿಯಾಗಲು ಆತ ಬಂದೇ ಬರುತ್ತಾನೆ.. ನನ್ನನ್ನು ಆತ ಮದುವೆಯಾಗುತ್ತಾನೆ ಎಂಬ ಕಲ್ಪನಾರ ಕನಸು, ಕಲ್ಪನೆಯೇ ಆಯಿತು. ಮುರಿದ ಮನಸ್ಸು, ಆತ್ಮಹತ್ಯೆಗೆ ಪ್ರೇರಣೆ ನೀಡಿತು. ಕೈ ಬೆರಳಿನಲ್ಲಿದ್ದ ವಜ್ರದ ಉಂಗುರ , ಸಾವಿಗೆ ನೆರವು ನೀಡುವುದಾಗಿ ಹೇಳಿತು! ನೆರವನ್ನು ಕಲ್ಪನಾ ನಿರಾಕರಿಸಲಿಲ್ಲ. ಆ ಮೂಲಕ ಬದುಕಿಗೆ ಮಧ್ಯದಲ್ಲಿ ಫುಲ್‌ಸ್ಟಾಪ್ ಇಟ್ಟು, ನಿಜ ಬದುಕಿನಲ್ಲೂ ಕಲ್ಪನಾ ದುರಂತ ನಾಯಕಿಯೇ ಆದರು ಎನ್ನುತ್ತಾರೆ ಕೆಲವರು. ಕಲ್ಪನಾಗೆ ಕೈಕೊಟ್ಟವರು ಯಾರು? ಉತ್ತರಿಸಲು ಅವರಿಲ್ಲ..

ಸ್ತ್ರೀ ನಾಟಕ ಮಂಡಳಿ ಮುಖಾಂತರ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಮಿನುಗುತಾರೆ. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಕೃಷ್ಣಮೂರ್ತಿ ಮತ್ತು ಜಾನಕಮ್ಮ ದಂಪತಿಗಳ ಮಗಳಾದ ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಅವರ ಅಭಿನಯಕ್ಕೆ ವೇದಿಕೆ ಕಲ್ಪಿಸಿದ್ದು ; ರಂಗಭೂಮಿಯ ಗುಡಿಗೇರಿ ಬಸವರಾಜು.

ಸಾಕುಮಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಕೃಷ್ಣಗಾರುಡಿ, ಸಂಸಾರ ನೌಕೆ, ಬೆಳ್ಳಿ ಮೋಡ, ನಾಂದಿ, ಬಂಗಾರದ ಹೂ, ಗೆಜ್ಜೆಪೂಜೆ, ಶರಪಂಜರ, ಉಯ್ಯಾಲೆ, ಸರ್ವಮಂಗಳ ಹೀಗೆ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 3ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು.

ತಮ್ಮ ಹೃದಯಸ್ಪರ್ಶಿ ಅಭಿನಯದಿಂದಾಗಿಯೇ, ಕಲ್ಪನಾ ಇಂದಿಗೂ ಮಿನುಗುತಾರೆ ಆಗಿಯೇ ಉಳಿದಿದ್ದಾರೆ. ಮುದ್ದಿನ ಗಿಣಿಯೇ ಬಾರೋ...., ಅರೆರೆರೇ ಗಿಣಿರಾಮ.. ಮತ್ತಿತರ ಹಾಡುಗಳು ಟೀವಿಯಲ್ಲಿ ಬಂದಾಗಲೆಲ್ಲಾ ಕಲ್ಪನಾ ಕಣ್ಮುಂದೆ ನಿಲ್ಲುತ್ತಾರೆ. ಏನೇ ಆಗಲಿ, ಕಲ್ಪನಾ ಇನ್ನು ಸ್ವಲ್ಪ ದಿನ ನಮ್ಮ ಜೊತೆ ಇರಬೇಕಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada