»   » ಸಾಯೋ ರೈತರಿಗೆ ದುಡ್ಡು ಬೇಡ -ಅಂಬಿ

ಸಾಯೋ ರೈತರಿಗೆ ದುಡ್ಡು ಬೇಡ -ಅಂಬಿ

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಮೈಸೂರು : ರೈತರ ಪ್ರಾಣವನ್ನು ಕೇವಲ ಒಂದು ಲಕ್ಷ ರುಪಾಯಿಯಿಂದ ಅಳೆಯುವುದನ್ನು ಸರ್ಕಾರ ಮೊದಲು ನಿಲ್ಲಿಸಲಿ ಎಂದು ನಟ ಹಾಗೂ ಸಂಸದ ಅಂಬರೀಶ್‌ ಅಭಿಪ್ರಾಯ ಪಟ್ಟಿದ್ದಾರೆ.

ಲಲಿತ ಮಹಲ್‌ ಅರಮನೆಯಲ್ಲಿ ಬುಧವಾರ (ಸೆ.17) ‘ಗೌಡ್ರು’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸುದ್ದಿಗಾರರ ಜೊತೆ ಅಂಬರೀಶ್‌ ಮಾತಾಡುತ್ತಿದ್ದರು. ಸರ್ಕಾರವೇನೋ ಒಳ್ಳೆ ಉದ್ದೇಶದಿಂದಲೇ 1 ಲಕ್ಷ ರುಪಾಯಿ ಪರಿಹಾರ ಕೊಡುತ್ತಿದೆ. ಆದರೆ ಹಣ ಸಿಗುತ್ತೆ ಅಂತ ಮಗನೇ ಅಪ್ಪನನ್ನು ಕೊಲ್ಲುವ ಕಾಲ ಇದರಿಂದ ಬಂದಿದೆ. ಹಾಗಾಗಿ ಹಣದ ಬದಲು ರೈತರಿಗೆ ದವಸ ಧಾನ್ಯ ಕೊಡಬಹುದು ಎಂಬುದು ಅಂಬಿ ಸಲಹೆ.

ಅಂಬಿಯ ಗಮನವನ್ನು ಸುದ್ದಿಗಾರರು ತಮ್ಮ ಪ್ರಶ್ನೆಗಳತ್ತ ಸೆಳೆದಾಗ...

ಪ್ರಶ್ನೆ 1- ಕಾವೇರಿ ವಿವಾದ ನಡೆದಾಗ ನೀವು ಸಂಸತ್ತಿನಲ್ಲಿ ಆ್ಯಬ್‌ಸೆಂಟ್‌. ರಾಜ್ಯದ ಪರವಾಗಿ ಅಲ್ಲಿ ಹೋರಾಟ ಮಾಡಬಹುದಾಗಿತ್ತಲ್ಲವೆ?
ಅಂಬಿ : ನಾನು 14 ಅಧಿವೇಶನಗಳಲ್ಲಿ ಭಾಗವಹಿಸಿದ್ದೆ. ಅಲ್ಲಿ ಬರೀ ಹಗರಣಗಳ ಕುರಿತ ಗದ್ದಲ, ಸಭಾತ್ಯಾಗ ನಡೆಯಿತಷ್ಟೆ. ಬೇರೆ ಚರ್ಚೇನೇ ನಡೆಯಲಿಲ್ಲ. ನಾನು ಹೋಗದಿದ್ದಾಗ ಕಾವೇರಿ ಚರ್ಚೆ ನಡೆದಿದೆ. ಅದಕ್ಕೇನು ಮಾಡೋಕಾಗುತ್ತೆ. ಮೂರು ಅಧಿವೇಶನಕ್ಕೆ ಹೋಗದಿದ್ದುದನ್ನೇ ನೀವು ದೊಡ್ಡದು ಮಾಡುತ್ತೀರಿ.

ಪ್ರಶ್ನೆ 2- ಜಯಲಲಿತಾ ಮತ್ತೆ ನೀರಿಗೆ ಕಿರಿಕ್ಕು ಮಾಡಿ, ದಸರಾ ಉತ್ಸವಕ್ಕೇ ಅಡ್ಡಿಯಾದರೆ?
ಅಂಬಿ : ದಯವಿಟ್ಟು ಯಾರೂ ದಸರಾ ಉತ್ಸವ ನಿಲ್ಲಿಸದಿರಲಿ ಎಂಬುದು ನನ್ನ ಆಶಯ. ರೈತ ಮುಖಂಡ ಪುಟ್ಟಣ್ಣಯ್ಯ ದಸರಾ ಬೇಡ ಅಂತ ದನಿಯೆತ್ತಿದ್ದಾರೆ. ದಸರಾ ಅದ್ಧೂರಿಯಾಗಿ ನಡೆಯುವುದು ನಮ್ಮ ಸಂಸ್ಕೃತಿಗೆ ಸಂಬಂಧಪಟ್ಟ ವಿಷಯ. ನಾವು ಅಯ್ಯಪ್ಪನ ನೋಡಲು ಹೋಗುವಂತೆ ತಮಿಳರು ಚಾಮುಂಡೇಶ್ವರಿಯನ್ನು ನೋಡೋಕೆ ಇಲ್ಲಿಗೂ ಬರುತ್ತಾರೆ. ವಿನಾ ಕಾರಣ ಸಾಂಸ್ಕೃತಿಕ ಉತ್ಸವಕ್ಕೆ ಅಡ್ಡಿ ತರಬಾರದು.

ಪ್ರಶ್ನೆ 3- ಜಯಲಲಿತಾ ಮತ್ತೆ ಕಾವೇರಿ ನೀರು ಕೇಳುತ್ತಿದ್ದಾರಲ್ಲ?
ಅಂಬಿ : ಒಪ್ಪಂದ ಇದೆಯಲ್ಲ, ಅದಕ್ಕೇ ಕೇಳುತ್ತಿದ್ದಾರೆ. ಇಲ್ಲಿ ನೀರಿಲ್ಲ ಅಂತ ಅವರಿಗೂ ಗೊತ್ತು. ಆದರೆ ಈಗಿನಿಂದಲೇ ಕೇಳಿದರೇನೇ ಸಿಗೋದು ಅನ್ನೋದು ಅವರ ಲೆಕ್ಕಾಚಾರ. ಹರಿಯುವ ನೀರನ್ನು ಯಾರೂ ನಿಲ್ಲಿಸೋಕಾಗಲ್ಲ. ಬೇಕಾದಕ್ಕಿಂತ ಹೆಚ್ಚು ನೀರಿಗೆ ಕಟ್ಟೆ ಹಾಕೋಕೂ ಆಗೋಲ್ಲ. ನಮ್ಮಲ್ಲಿ ಬೆಳೆಗೆ ಹಾಗಿರಲಿ, ಕುಡಿಯಲೂ ನೀರಿಲ್ಲ. ಬೇಕಾದರೆ ಅವರೇ ಬಂದು ನೋಡಲಿ.

ಪ್ರಶ್ನೆ 4- ನೀವು ರಾಜೀನಾಮೆ ಕೊಟ್ಟದ್ದು ಏನಾಯಿತು?
ಅಂಬಿ : ದಯವಿಟ್ಟು ರಾಜಕೀಯದ ಬಗ್ಗೆ ಪ್ರಶ್ನೆ ಕೇಳಬೇಡಿ.

ಸುದ್ದಿಗಾರರು ರಾಜಕೀಯದ ಬೇರುಗಳ ತಡಕಲು ಶುರುವಿಟ್ಟೊಡನೆ ಅಂಬಿ ಕಾಲಿಗೆ ಬುದ್ಧಿ ಹೇಳಿದರು.

ಅಂಬರೀಶ್‌ ನಿಲುವಿಗೆ ನಿಮ್ಮ ಪ್ರತಿಕ್ರಿಯೆ ?

ಪೂರಕ ಓದಿಗೆ-
ಸೋನಿಯಾ ಭಕ್ತ ಅಂಬರೀಷ
ಅಂಬಿ ಹುಟ್ಟು ಹಬ್ಬದಲ್ಲಿ ಮೀನು ಹಿಡಿದವರು


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada