»   » ವಿಷ್ಣುಗೆ ಜನ್ಮದಿನದ ಶುಭಾಶಯಗಳು

ವಿಷ್ಣುಗೆ ಜನ್ಮದಿನದ ಶುಭಾಶಯಗಳು

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಮುಪ್ಪಿನ ಮನೆಗೆ ಹತ್ತಿರಾಗುತ್ತಿರುವಂತೆ ಆತ್ಮವಿಮರ್ಶೆ, ಬೇರುಗಳ ತಡಕುವಿಕೆ, ಸಂಸ್ಕೃತಿಯ ಆರಾಧನೆ, ತತ್ತ್ವ ಚಿಂತನೆ ಇವೆಲ್ಲ ವ್ಯಾಪಕವಾಗುತ್ತವೆ ಅಂತ ಒಂದೊಮ್ಮೆ ಕವಿ ಪ್ರೊ.ರಾಮಚಂದ್ರ ಶರ್ಮರು ಹೇಳಿದ್ದರು. ನಟ ವಿಷ್ಣುವರ್ಧನ್‌ ವರಸೆಗಳನ್ನು ನೋಡಿದರೆ ಈ ಮಾತು ನಿಜ ಅನ್ನಿಸುತ್ತದೆ. ಇವತ್ತು (ಸೆ.18) ವಿಷ್ಣುವರ್ಧನ್‌ಗೆ 53 ತುಂಬಿ 54ಕ್ಕೆ ಬಿದ್ದಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಇತ್ತೀಚೆಗೆ ಕಮಲ ಹಾಸನ್‌ ಮತ್ತು ಕೋಕಿಲಾ ಮೋಹನ್‌ ಅಕ್ಕಿ ದಾನ ಮಾಡುವ ಮೂಲಕ ನೆರೆಯ ನಾಡಿನಲ್ಲಿ ಸುದ್ದಿ ಮಾಡಿದ್ದರು. ನಮ್ಮ ವಿಷ್ಣುವರ್ಧನ್‌ ಹಾಗೂ ಅವರ ಸುತ್ತಲ ನಿರ್ಮಾಪಕರು ಕಟ್ಟಿಕೊಂಡಿರುವ ಸ್ನೇಹಲೋಕ ಕೂಡ ಬಡ ರೈತರ ಮನೆಗಳಿಗೆ ಅನ್ನ ಕೊಡುವ ದೊಡ್ಡ ಯೋಜನೆಗೆ 1 ಲಕ್ಷ ರುಪಾಯಿ ಹವಿಸ್ಸನ್ನು ಸಲ್ಲಿಸಿರುವುದು ಮೆಚ್ಚತಕ್ಕ ವಿಷಯ. ತಮ್ಮ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚೆಯೇ ವಿಷ್ಣು , ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ರಚಿಸಿರುವ ಪರಿಹಾರ ನಿಧಿಗೆ 1 ಲಕ್ಷ ರುಪಾಯಿ ಧನ ಸಹಾಯ ಮಾಡಿಬಂದರು.

ಇತ್ತೀಚೆಗೆ ವಿಷ್ಣು ಪುರುಸೊತ್ತಾಗಿ ಮಾತಿಗೆ ಕೂತರೆ ಗಂಟೆಗಟ್ಟಲೆ ಭಾಷಣ ಕೊಚ್ಚುತ್ತಾರೆ. ಹೆಂಗಸರಿಗೆ ಗೌರವ ಕೊಡಿ, ಸಂಸ್ಕೃತಿಗೆ ಅವಮಾನ ಮಾಡಬೇಡಿ, ಕೂಡಿ ಬಾಳಿ, ಬೇರೆಯವರಿಗೆ ತೊಂದರೆ ಮಾಡಬೇಡಿ, ಒಗ್ಗಟ್ಟೇ ಬಲಕಟ್ಟು, ನಮ್ಮ ಮಣ್ಣಿನ ವಾಸನೆಯ ಮರೆಯಬೇಡಿ, ಯಾರದ್ದೂ ಕಾಲೆಳೆಯಬೇಡಿ- ಹೀಗೆ ಪಂಚತಂತ್ರಗಳ ತರಾವರಿ ಸೂತ್ರಗಳನ್ನು ಅವರು ಪುಂಖಾನುಪುಂಖವಾಗಿ ದಣಿಯದಂತೆ ಹೇಳುವಂಥವರಾಗುತ್ತಾರೆ. ತಮ್ಮ ರೀಮೇಕ್‌ ಚಿತ್ರಗಳನ್ನೂ ಅವರು ಸಂಸ್ಕೃತಿಯ ಹೂರಣ ಅಂತಲೇ ಸಮರ್ಥಿಸಿಕೊಳ್ಳುತ್ತಾರೆ. ಗೆಳೆಯ ನಿರ್ಮಾಪಕರಿಗೆ ಸರತಿಯ ಮೇರೆಗೆ ಕಾಲ್‌ಷೀಟ್‌ ಕೊಡುತ್ತಾರೆ.

ಇಂತಿಪ್ಪ ವಿಷ್ಣು ಬಗ್ಗೆ ಸುರೇಶ್‌ ಎಂಬ ಅಭಿಮಾನಿ ಧಾರಾವಾಹಿಯಾಂದನ್ನೇ ತೆಗೆಯುತ್ತಿದ್ದಾರೆ. ಅದರಲ್ಲಿ ವಿಷ್ಣು ನಿಜ ಜೀವನ ದರ್ಶನ ಇರುತ್ತದೆ ಅನ್ನೋದು ತರೆ ಅಭಿಮಾನಿಗಳಿಗೆ ಬೋನಸ್ಸು. ಲೇಟೆಸ್ಟ್‌ ಚಿತ್ರ ‘ಹೃದಯವಂತ’ ಅಕ್ಟೋಬರ್‌ 2ನೇ ತಾರೀಕು ತೆರೆ ಕಾಣಲಿದೆ. ಅದರ ಬೆನ್ನಿಗೇ ‘ಕದಂಬ’ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ. ಆಮೇಲೂ ವಿಷ್ಣು ಸುಮಾರು 2 ವರ್ಷ ಕಾಲಕ್ಕಾಗುವಷ್ಟು ಕಾಲ್‌ಷೀಟ್‌ ಕೊಡಬೇಕಾಗುವಂತೆ ಗೆಳೆಯ ನಿರ್ಮಾಪಕರ ಸರತಿ ಸಾಲು ನಿಂತಿದೆ.

ಸರ್ವಶ್ರೇಷ್ಠ, ಏಕಮೇವಾದ್ವಿತೀಯ, ಸ್ತ್ರೀ ಗೌರವಿ, ಅಜಾತಶತ್ರು, ಸರ್ವಾಂತರ್ಯಾಮಿ, ವಿದ್ವಜ್ಜನ, ಪರೋಪಕಾರಿ- ಹೀಗೆಲ್ಲಾ ವಿಷ್ಣು ಸಹಸ್ರನಾಮ ಪಠಿಸಿ ನಿರ್ಮಾಪಕ ವಿಜಯಕುಮಾರ್‌ ಪತ್ರಿಕೆಗಳ ಮೂಲಕ ವಿಷ್ಣುವರ್ಧನ್‌ಗೆ ಬರ್ತಡೇ ವಿಷಸ್‌ ಹೇಳಿರುವ ಪರಿ ಉತ್ಪ್ರೇಕ್ಷೆಯಾಯಿತೇನೋ. ಅದು ಒತ್ತಟ್ಟಿಗಿರಲಿ.

ವಿಷ್ಣು ಸ್ಫುರದ್ರೂಪಿ. ಮಾತು ಸ್ಪಷ್ಟವಾಗಿದೆ. ನಟನಾ ಕಲೆ ಸಿದ್ಧಿಸಿದೆ. ಚಿತ್ರರಂಗದಲ್ಲಿ ಮೊಗೆದು ತುಂಬಿಕೊಂಡಿರುವ ಅನುಭವವಿದೆ. ಮೇಲಾಗಿ ಸ್ಥಿತಿವಂತ. ಸಂಸ್ಕೃತಿಯ ಬಗ್ಗೆ ಭಾರೀ ಕಳಕಳಿ ಇಟ್ಟುಕೊಂಡಿರುವ ಮನುಷ್ಯ. ಈ ಅನುಕೂಲಗಳಿಗೆ ಸಾಮ್ಯತೆಯಿರುವ ಕಮಲ ಹಾಸನ್‌ ಪಕ್ಕದ ನಾಡಿನಲ್ಲಿ ಒಂದಾದ ನಂತರ ಒಂದು ಸ್ವಂತ ಸಿನಿಮಾ ನಿರ್ಮಿಸಿ, ಸೋತು ಗೆದ್ದಿರುವ ಉದಾಹರಣೆಗಳಿವೆ. ವಿಷ್ಣು ಕೂಡ ಒಂದು ಚೆಂದದ ಸ್ವಮೇಕ್‌ ಸಿನಿಮಾವನ್ನು ನಿರ್ಮಿಸುವ ಮನಸ್ಸು ಮಾಡಲಿ.

ಉಪೇಂದ್ರ ಹುಟ್ಟುಹಬ್ಬಕ್ಕೆ ರಕ್ತ ಕಣ್ಣೀರು

ನಟ ಉಪೇಂದ್ರ ಕೂಡ ತಮ್ಮ ಹುಟ್ಟುಹಬ್ಬವನ್ನು ಸೆ.18ರಂದು ಆಚರಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ , ಅವರ ಅಭಿನಯದ ರಕ್ತ ಕಣ್ಣೀರು ಚಿತ್ರ ತೆರೆ ಕಂಡಿದೆ. ಕುಟುಂಬ ಚಿತ್ರದ ಭರ್ಜರಿ ಯಶಸ್ಸಿನಿಂದಾಗಿ ರಕ್ತ ಕಣ್ಣೀರು ಚಿತ್ರ ಗಾಂಧಿನಗರದಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X