»   » ಹಳೇ ಬಾಟಲಿ, ಮದ್ಯವೂ ಹಳತು ; ಇದು ಉಪ್ಪಿ ರಕ್ತ ಕಣ್ಣೀರು!

ಹಳೇ ಬಾಟಲಿ, ಮದ್ಯವೂ ಹಳತು ; ಇದು ಉಪ್ಪಿ ರಕ್ತ ಕಣ್ಣೀರು!

Posted By: Staff
Subscribe to Filmibeat Kannada

ಹಳೇ ಬಾಟಲಿಯಲ್ಲಿ ಹಳೆಯದೇ ಮದ್ಯ ! ಇದು ಉಪೇಂದ್ರ ಅಭಿನಯಿಸುತ್ತಿರುವ 'ರಕ್ತ ಕಣ್ಣೀರು" ಹೊಸ ಚಿತ್ರದ ಸ್ಲೋಗನ್‌! ಉಪೇಂದ್ರ ಹುಟ್ಟುಹಬ್ಬದ ಕಾಣಿಕೆಯಾಗಿ, ಸೆ.18 ರಂದು ಕಂಠೀರವ ಸ್ಟುಡಿಯೋದಲ್ಲಿ ರಕ್ತ ಕಣ್ಣೀರು ಸೆಟ್ಟೇರಿದೆ.

ಎಚ್‌ಟೂಒ, ಸೂಪರ್‌ ಸ್ಟಾರ್‌ ಹಾಗೂ ನಾಗರಹಾವು ಚಿತ್ರಗಳ ಹ್ಯಾಟ್ರಿಕ್‌ ಸೋಲಿನಿಂದ ಕಂಗಾಲಾಗಿದ್ದ ಉಪೇಂದ್ರ 'ರಕ್ತ ಕಣ್ಣೀರು" ಚಿತ್ರದ ಮೂಲಕ ಪುನರಪಿ ಜನನಂ ನಿರೀಕ್ಷೆಯಲ್ಲಿದ್ದಾರೆ. ಏಕೆಂದರೆ- ಪೈಪ್‌ಲೈನ್‌ನಲ್ಲಿರುವ ಚಿತ್ರಗಳಾದ 'ಹಾಲಿವುಡ್‌" ಹಾಗೂ 'ನಾನು ನಾನೇ" ಸಿನಿಮಾಗಳ ಬಗೆಗೆ ಉದ್ಯಮದಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತಿಲ್ಲ.

ಸತತ ಸೋಲಿನಿಂದ ಕಂಗೆಟ್ಟಿರುವ ಉಪೇಂದ್ರ 'ರಕ್ತ ಕಣ್ಣೀರು" ಚಿತ್ರದ ಬಗ್ಗೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಆ ಕಾರಣದಿಂದಲೇ ಹಳೆಯ ಜಗಳವನ್ನು ಮರೆತು, ಹಳೆಯ ಗೆಳೆಯ ಗುರುಕಿರಣ್‌ ಅವರೊಂದಿಗೆ ರಾಜಿಯಾಗಿದ್ದಾರೆ. ರಾಜಕೀಯ, ಗೋಲಿಬಾರ್‌ ಖ್ಯಾತಿಯ ಶಿವಮಣಿ ಚಿತ್ರವನ್ನು ನಿರ್ದೇಶಿಸುತ್ತಿರುವುದು ಇನ್ನೊಂದು ವಿಶೇಷ.

'ರಕ್ತ ಕಣ್ಣೀರು" ತಮಿಳಿನ ಜನಪ್ರಿಯ ನಾಟಕ. 1952 ರಲ್ಲಿ ಮೊದಲ ಪ್ರದರ್ಶನ ಕಂಡ ಈ ನಾಟಕ ಆನಂತರ ಪ್ರದರ್ಶನದಲ್ಲಿ ದಾಖಲೆಯನ್ನೇ ಸ್ಥಾಪಿಸಿದೆ. ನಾಟಕವನ್ನು ರಚಿಸಿರುವ ಎಂ.ಆರ್‌.ರಾಧಾ ಅವರೇ ಚಿತ್ರಕತೆಯನ್ನೂ ಬರೆದಿದ್ದಾರೆ. ಕೃಷ್ಣಕುಮಾರ್‌ ಛಾಯಾಗ್ರಹಣ, ಶಶಿ ಸಂಕಲನ ಚಿತ್ರಕ್ಕಿದೆ. ರಮ್ಯಕೃಷ್ಣ ಹಾಗೂ ಸಾಕ್ಷಿ ಶಿವಾನಂದ್‌, ಉಪೇಂದ್ರನಿಗೆ ನಾಯಕಿಯರು. ಅಂದಹಾಗೆ, ವೃಷಭಾದ್ರಿ ಪ್ರೊಡಕ್ಷನ್ಸ್‌ನಲ್ಲಿ ತಯಾರಾಗುತ್ತಿರುವ 'ರಕ್ತ ಕಣ್ಣೀರು" ಚಿತ್ರದ ನಿರ್ಮಾಪಕರು ಮುನಿರತ್ನ!

English summary
Rakta Kanneeru : A unique Birthday gift for Upendra

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada