»   » ಕತ್ತಿ ಝಳಪಿಸಿರುವ ರೇಖಾ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

ಕತ್ತಿ ಝಳಪಿಸಿರುವ ರೇಖಾ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

Posted By: Staff
Subscribe to Filmibeat Kannada

ಸುದೀಪನಿಂದ ಸಂದಾಯವಾಗಬೇಕಿದ್ದ 25 ಸಾವಿರ ರುಪಾಯಿ ಸಂಭಾವನೆ ಸಂದಿತೋ ಇಲ್ಲವೋ, ಸ್ಪರ್ಶ ಚಿತ್ರದ ಉದ್ದನೆ ಹುಡುಗಿ ರೇಖಾ ಮತ್ತೆ ಬಣ್ಣ ಹಚ್ಚೋಕೆ ಶುರುವಿಟ್ಟುಕೊಂಡಿದ್ದಾರೆ.

ಒಂದೊಮ್ಮೆ ನಿವೃತ್ತಿ ಘೋಷಿಸಿ, ಅದೇನಾಯಿತೋ ಕೆಲವೇ ದಿನಗಳಲ್ಲಿ ಆ ಮಾತನ್ನು ವಾಪಸ್ಸು ಪಡೆದು, ಕಾಲ್‌ಶೀಟ್‌ ಕೊಡಲು ಮುಂದಾದರೂ ರೇಖಾಳನ್ನು ಕ್ಯಾರೆ ಅನ್ನಲಿಲ್ಲ. 'ಮೆಜೆಸ್ಟಿಕ್ಕು" ಕೂಡ ದರ್ಶನನಿಗೆ ಬ್ರೇಕು ಕೊಟ್ಟಿತೇ ವಿನಃ ರೇಖಾಳಿಗೆ ಅದರಲ್ಲಿ ಸಿಕ್ಕ ಸ್ಕೋಪು ಅಷ್ಟಕ್ಕಷ್ಟೆ. ಈ ನಡುವೆ 'ಬಾನಲ್ಲು ನೀನೆ ಭುವಿಯಲ್ಲು ನೀನೆ" ಸಿನಿಮಾದಲ್ಲಿ ರೇಖಾ ನಟಿಸಿದ್ದು ಬಹುತೇಕರಿಗೆ ಗೊತ್ತೇ ಆಗಲಿಲ್ಲ !
ಈಗ ರೇಖಾ ಅಲ್ಪ ವಿರಾಮ ಮುಗಿದಿದ್ದು, 'ಈ ಟಚ್ಚಲಿ ಏನೋ ಇದೆ" ಮತ್ತು 'ಪ್ರೇಮಾಭಿಷೇಕ" ಎಂಬ ಸಿನಿಮಾಗಳು ಕೈಗೆ ಸಿಕ್ಕಿವೆ. ಹೊಸಬರ ದಂಡು 'ಪ್ರೇಮಾಭಿಷೇಕ"ದ ವಿಶೇಷ. ರವಿಚಂದ್ರ ಹಾಗೂ ರಮೇಶ್‌ ಎಂಬ ಸಾಫ್ಟ್‌ವೇರ್‌ ಎಂಜಿನಿಯರುಗಳು ಈ ಸಿನಿಮಾಗೆ ದುಡ್ಡು ಹಾಕುತ್ತಿದ್ದಾರೆ. 'ಸೊಂಟದ ಇಸ್ಯ" ಹಾಡು ಬರೆದ ಚಿತ್ರ ಸಾಹಿತಿ ಕಂ ಸಂಭಾಷಣೆಗಾರ ಡಾ.ನಾಗೇಂದ್ರ ಪ್ರಸಾದ್‌ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳಲಿದ್ದಾರೆ.

ಸಿನಿಮಾ ಆಫರ್‌ ಸಿಗದ ಬಿಡುವಿನ ಸಮಯವನ್ನು ರೇಖಾ ಹೇಗೆ ಕಳೆವರು? ಅದನ್ನು ಈವರೆಗೆ ರೇಖಾ ಸೀಕ್ರೇಟ್‌ ಆಗೇ ಇಟ್ಟಿದ್ದರು. ಈಗ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಅವರನ್ನು ನೋಡಿ ಅಭಿಮಾನಿಗಳು ದಂಗು. ಯಾಕೆಂದರೆ, ರೇಖಾ ಕತ್ತಿವರಸೆ ಆಡಿ, ಪದಕ ಗೆಲ್ಲಲು ಅಲ್ಲಿದ್ದಾರೆ !

ಚಾರಣ, ರೋಯಿಂಗು, ಥ್ರೋ ಬಾಲಲ್ಲಿ ಒಂದು ಕೈ ನೋಡಿರುವ ರೇಖಾ ಈಗ ಕತ್ತಿವರಸೆಯನ್ನು ಆಯ್ದುಕೊಂಡಿರುವುದು ಯಾಕೆ? ಸಿನಿಮಾದವರ ಕಾಟಕ್ಕೂ, ಈ ವರಸೆಗೂ ಏನಾದರೂ ಸಂಬಂಧವಿದೆಯಾ ಅಂತ ಕೇಳಿದರೆ, ರೇಖಾ ಕೆನ್ನೆ ಕೆಂಪಗೆ ಮಾಡಿಕೊಂಡು ನಗುತ್ತಾರೆ.

English summary
Rekha is participating in National Games being held at Hyderabad

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada