»   » ದುಡ್ಡೇ ದೊಡ್ಡಪ್ಪ, ಬೆಳವಾಡಿಗೆ ಸತ್ಯ ಅರ್ಥವಾಯಿತಪ್ಪ !

ದುಡ್ಡೇ ದೊಡ್ಡಪ್ಪ, ಬೆಳವಾಡಿಗೆ ಸತ್ಯ ಅರ್ಥವಾಯಿತಪ್ಪ !

Posted By: Staff
Subscribe to Filmibeat Kannada

'ಏನೇ ವಿಚಾರಗಳಿರಲಿ, ಯೋಜನೆಗಳಿರಲಿ, ವಿಟಾಮಿನ್‌ ಎಂ ಇಲ್ಲದೇ ಇದ್ದರೆ ಅವು ಜಾರಿಯಾಗುವುದಿಲ್ಲ. ಕಾಂಚಾಣ ಕುರುಡಾದರೂ, ಅದು ಜಗತ್ತನ್ನು ಆಳುತ್ತಿರುವುದು ಸತ್ಯ" ಎನ್ನುವ ಸತ್ಯ ಸಿನಿಮಾ ನಿರ್ದೇಶಕ, ರಂಗ ಕಲಾವಿದ ಪ್ರಕಾಶ್‌ ಬೆಳವಾಡಿಗೆ ಕೊನೆಗೂ ಅರ್ಥವಾಗಿದೆಯಂತೆ.

'ನನ್ನ ಜೀವನದುದ್ದಕ್ಕೂ ನಾನು ಪ್ರಸಿದ್ಧನಾಗಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ಯಾವಾಗ ಈ ಟು ಸ್ಟ್ರೀಮ್ಸ್‌ ಎಂಬ ಕಂಪೆನಿಯನ್ನು ಕಟ್ಟಿದೆನೋ ಕಾಸಿನ ಸಂಕಟ, ಮುಗ್ಗಟ್ಟು ಎಂದರೆ ಏನೆಂಬುದು ಗೊತ್ತಾಯಿತು..." ಸ್ಟಂಬ್ಲ್‌ ಚಿತ್ರ ನಿರ್ದೇಶನ ಮುಗಿಸಿ ಈಗಷ್ಟೇ ರಿಲ್ಯಾಕ್ಸ್‌ ಆಗುತ್ತಿರುವ ಪ್ರಕಾಶ್‌ ಬೆಳವಾಡಿ ತಮಗೆ ಎದುರಾಗಿರುವ ಹಣದ ಮುಗ್ಗಟ್ಟನ್ನು ಬಣ್ಣಿಸುವುದು ಹೀಗೆ.

ಸ್ಟಂಬ್ಲ್‌ ಚಿತ್ರ ವಿಮರ್ಶಕರ ಹೃದಯ ಗೆದ್ದಿದೆ. ಮುಂಬಯಿ ಚಿತ್ರ ಉತ್ಸವದಲ್ಲಿ ಚಿತ್ರವನ್ನು ವೀಕ್ಷಿಸಿದ ವಿಮರ್ಶಕರು ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ಹೊಗಳಿದರು. ಚಿತ್ರದಲ್ಲಿ ವಾಸ್ತವತೆಯ ಅಂಶವಿದೆ. ಆದ್ದರಿಂದ ವೀಕ್ಷಕರೂ ಉತ್ಸಾಹದಿಂದ ನೋಡಿದರು ಎನ್ನುವಾಗ ಬೆಳವಾಡಿ ಮುಖದಲ್ಲಿ ಸಾಧನೆಯ ಸಂಭ್ರಮ; ಮರುಕ್ಷಣದಲ್ಲೇ ಮುಖವನ್ನಾವರಿಸುವ ವಿಷಾದಛಾಯೆ.

ಸ್ಟಂಬ್ಲ್‌ ಖುಷಿಗೆ ಅನಂತ್‌ನಾಗ್‌ ಅಡ್ಡೆಯಾದ ಹೋಟೆಲ್‌ ಅಶೋಕದಲ್ಲೋ, ಲೀಲಾ ಪ್ಯಾಲೇಸ್‌ನಲ್ಲೋ ಪಾರ್ಟಿ ಇಟ್ಟುಕೊಳ್ಳುವ ಮೂಡ್‌ ಬೆಳವಾಡಿಗಿಲ್ಲ . ಯಾಕೆಂದರೆ ಜೇಬು ಪೂರ್ತಿ ಖಾಲಿ. ಮತ್ತೆ ನಾಲ್ಕು ದಿಕ್ಕಿನಲ್ಲೂ ಸಾಲ.

ಸಿನೆಮಾದವರಿಗೆ ಸಾಲ ಕೊಟ್ಟರೆ ಅದು ಮತ್ತೆ ವಾಪಾಸು ಬರುವ ಗ್ಯಾರಂಟಿ ಇಲ್ಲ ಎಂಬ ಮಾತು ಬೆಳವಾಡಿಗೆ ಅಪ್ಲೈ ಆಗುವುದಿಲ್ಲ. ಸಾಲ ಕೊಟ್ಟವರಿಗೆ ಸಾಲ ವಾಪಾಸು ಮಾಡಬೇಕು ಎನ್ನುತ್ತಾ ಸೀರಿಯಸ್ಸಾಗುತ್ತಾರೆ. ಈ ಪಾಟಿ ಸಾಲ ಮಾಡಿದ್ದಾದರೂ ಏಕೆ... ಅಂತ ಕೇಳಿದರೆ- ಸಿನೆಮಾ ಶುರು ಮಾಡುವಾಗ ನನ್ನ ಕಿಸೆಯಲ್ಲಿ ನಯಾ ಪೈಸೆ ಇರಲಿಲ್ಲ . ಸೋ, ಚಿತ್ರಕ್ಕೆ ಹಾಕಿದ ಪೈಸೆ ಪೈಸೆಗಳೂ ಸಾಲ ತಂದಿರೋದು - ಪ್ರಕಾಶ್‌ ವಿವರಣೆ ಕೊಡುತ್ತಾರೆ.

ಈ ಕ್ಷೇತ್ರದಲ್ಲಿ ತುಂಬಾ ಕಷ್ಟವಿದೆ...
ನಾನು ಪತ್ರಿಕೋದ್ಯಮದಲ್ಲಿದ್ದು ಪಳಗಿದ್ದೇನೆ. ಸಂವಹನ ಕ್ಷೇತ್ರದ ಒಳ ಸುಳಿಗಳನ್ನೂ ಕಂಡಿದ್ದೇನೆ. ರಂಗ ಭೂಮಿಯಲ್ಲಿಯೂ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದೇನೆ. ಆದರೆ ಸಿನಿಮಾ ಕ್ಷೇತ್ರಕ್ಕೆ ಯಾವುದೂ ಸಾಟಿಯಿಲ್ಲ ಬಿಡಿ. ಈ ಫೀಲ್ಡೇ ಒಂದು ದೊಡ್ಡ ಗೇಮ್‌ ಎನ್ನುತ್ತಾರೆ ಪ್ರಕಾಶ್‌.

ಸ್ಟಂಬ್ಲ್‌ ಸಿನಿಮಾ ಮುಗಿಯಿತು. ಹಾಗಂತ ಪ್ರಕಾಶ್‌ ರಿಲ್ಯಾಕ್ಸ್‌ ಮಾಡುತ್ತಿದ್ದಾರೆ ಅಂತ ನೀವಂದುಕೊಂಡರೆ ತಪ್ಪು. ಅವರೀಗಾಗಲೇ ಇನ್ನೊಂದು ಸ್ಕಿೃಪ್ಟ್‌ ಹಿಡಿದುಕೊಂಡು ಏಕಾಗ್ರವಾಗಿ ಕುಳಿತಿದ್ದಾರೆ. ಇದು ಅಲ್ಪಸಂಖ್ಯಾತತೆ( ಮೈನರೈಸೇಷನ್‌) ಯ ರಾಜಕೀಯದ ಬಗ್ಗೆ. ಅಂದರೆ, ಉದಾಹರಣೆಗೆ ನೋಡಿ, ಕಾವೇರಿ ಗಲಾಟೆಯಾದಾಗ ನಮ್ಮ ರಾಜ್ಯದಲ್ಲಿದ್ದ ತಮಿಳಿಯನ್ನರು ತಾವು ಬಲಿಪಶುಗಳಾದೆವು ಎಂಬ ಭಾವನೆಯಲ್ಲಿರುತ್ತಾರೆ. ಅಥವಾ, ಇಬ್ಬರು ಸ್ನೇಹಿತರು ಒಂದು ವೃತ್ತಿಪರ ಕೋರ್ಸಿಗಾಗಿ ಅರ್ಜಿ ಸಲ್ಲಿಸುತ್ತಾರೆ ಎಂದಿಟ್ಟುಕೊಳ್ಳಿ. ಅವರಿಗೆ ಇದ್ದಕ್ಕಿದ್ದ ಹಾಗೆ ಮೈನರೈಸೇಷನ್‌ ಭಾವನೆ ಎದುರಾಗುತ್ತದೆ. ಈ ಥೀಮ್‌ ಇಟ್ಟುಕೊಂಡು ಸಿನಿಮಾದ ಮೂಲಕ ಒಂದು ಕಟ್ಟು ಕಥೆಯನ್ನು ಹೇಳುವುದು ಅವರ ಉದ್ದೇಶ.

ಮುಂದಿನ ಗೋಲ್‌ ?
ಭವಿಷ್ಯದಲ್ಲಿ ವ್ಹೈಟ್‌ ಬೋರ್ಡ್‌ ಸ್ಕೂಲ್‌ ಶುರು ಮಾಡಬೇಕು. ಅಲ್ಲಿ ಬಹು ಮಾಧ್ಯಮದ ಸಾಧನವನ್ನು ಬಳಸಬೇಕು. ಪರಸ್ಪರ ಚರ್ಚೆಗೆ, ಮಾತುಕತೆಗೆ ಅವಕಾಶ ಇರಬೇಕು... ಈ ರೀತಿಯಲ್ಲಿ ಸಾಕ್ಷರತೆಯನ್ನು ನೀಡುವ ದೇಶವ್ಯಾಪೀ ಅಭಿಯಾನವನ್ನು ಮಾಡಬೇಕು ಎಂಬ ಭಾರೀ ಕನಸು ಪ್ರಕಾಶ್‌ ಬೆಳವಾಡಿ ಅವರದು.

ಎಲ್ಲಾ ಸರಿ, ಬೆಳವಾಡಿಯವರ ಮಹತ್ವಾಕಾಂಕ್ಷೆಯ ಚಿತ್ರ- ಸ್ಟಂಬ್ಲ್‌ ಬಿಡುಗಡೆಯಾಗುವುದು ಯಾವಾಗ ?
ಇನ್ನು ಮೂರು ತಿಂಗಳ ಅವಧಿಯಲ್ಲಿ ಚಿತ್ರ ತೆರೆ ಕಾಣುತ್ತದೆ... ಬೆಂಗಳೂರಿಗರು ಸ್ವಲ್ಪ ಕಾಯಬೇಕು ಎನ್ನುತ್ತಾ ಬೆಳವಾಡಿ ಮತ್ತೆ ಮೌನವಾಗುತ್ತಾರೆ. ಅಲ್ಲಿ ಯಾವ ಕಥೆ ಕದಲುತ್ತಿದೆಯೋ?

English summary
At last, Director Prakash Belawadi is stumbled on to a good thing

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada