»   » ಜೀ ಕನ್ನಡದಲ್ಲಿ ಭೂಗತ ಜಗತ್ತಿನ ಭೀಕರ 'ಆ ದಿನಗಳು'

ಜೀ ಕನ್ನಡದಲ್ಲಿ ಭೂಗತ ಜಗತ್ತಿನ ಭೀಕರ 'ಆ ದಿನಗಳು'

Subscribe to Filmibeat Kannada

ಕನ್ನಡ ಸಿನೆಮಾ ಜಗತ್ತಿನಲ್ಲಿ ಹೊಸ ಬರವಸೆ ಮೂಡಿಸಿದ ಯುವ ನಿರ್ದೇಶಕ ಚೈತನ್ಯ ನಿರ್ದೇಶನದ ಸುಪರ್ ಹಿಟ್ ಚಲನಚಿತ್ರ 'ಆ ದಿನಗಳು' ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಜೀ ಕನ್ನಡದಲ್ಲಿ ಜೂನ್ 21ರಂದು 4:30ಕ್ಕೆ ಪ್ರಸಾರವಾಗಲಿದೆ. ಸಿನೆಮಾ ಪ್ರಾರಂಭಕ್ಕೆ ಮೊದಲು 3:30ಕ್ಕೆ ಪ್ರಸಾರವಾಗುವ ವಿಶೇಷ ನೇರ ಪ್ರಸಾರದಲ್ಲಿ 'ಆ ದಿನಗಳು' ಚಿತ್ರ ತಂಡದ ನಿರ್ದೇಶಕ ಚೈತನ್ಯ, ಅಗ್ನಿ ಶ್ರೀಧರ್ ಹಾಗೂ ಶರತ್ ಲೋಹಿತಾಶ್ವ ಭಾಗವಹಿಸಲಿದ್ದಾರೆ.

ಪತ್ರಕರ್ತ ಅಗ್ನಿ ಶ್ರೀಧರ ಅವರ ನೈಜ ಜೀವನದ ಘಟನೆಗಳನ್ನುಳ್ಳ 'ದಾದಾಗಿರಿಯ ದಿನಗಳು' ಪುಸ್ತಕವನ್ನಾಧರಿಸಿ ನಿರ್ಮಿಸಲಾದ ಈ ಸಿನೆಮಾದಲ್ಲಿ 1986ರಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಗಳನ್ನು ಮುಂದಿಡಲಾಗಿದೆ. ಕುಖ್ಯಾತ ರೌಡಿ ಕೊತ್ವಾಲ್ ರಾಮಚಂದ್ರ ಅವರ ಕೊಲೆ ಹಾಗೂ ಅಮಾಯಕ ಪ್ರೇಮಿಗಳಿಬ್ಬರ ಸುತ್ತ ಸುತ್ತುವ ಈ ಸಿನೆಮಾ ಮಚ್ಚು ಲಾಂಗುಗಳ ಹೊಡೆದಾಟದ ಅಬ್ಬರವಿಲ್ಲದೇ ಭೂಗತ ಜಗತ್ತಿನ ತಣ್ಣನೆಯ ಕ್ರೌರ್ಯವನ್ನು ಪ್ರೇಕ್ಷಕರ ಮುಂದಿಡುತ್ತದೆ.

ಯುವ ನಿರ್ದೇಶಕ ಚೈತನ್ಯ ಅವರ ಪ್ರಥಮ ಸಿನೆಮಾ ಇದಾಗಿದ್ದರೂ ಕೂಡ ಎಲ್ಲಿಯೂ ಘಟನೆಗಳನ್ನು ಪ್ರಸ್ತುತ ಪಡಿಸುವಲ್ಲಿ ಅವರು ಎಡವಲಿಲ್ಲ. ಉತ್ತಮ ಚಲನಚಿತ್ರವಾಗಿ ಮೂಡಿ ಬಂದಿರುವ ಇದರಲ್ಲಿ ನೈಜವಾಗಿಯೇ ಎಲ್ಲ ಘಟನೆಗಳನ್ನು ಸಾದರಪಡಿಸಲಾಗಿದೆ. ಕೊತ್ವಾಲ ಮತ್ತು ಜೈರಾಜ್ ಜಮಾನಾದ 'ಆ ದಿನಗಳು' ಹಾಗೂ ಆಗಿನ ತಣ್ಣನೆಯ ಕ್ರೌರ್ಯ ಉತ್ತಮವಾಗಿ ಮೂಡಿ ಬಂದಿದೆ.

ಕೊತ್ವಾಲ್ ಪಾತ್ರದಲ್ಲಿ ಶರತ್ ಲೋಹಿತಾಶ್ವ, ಜೈರಾಜ್ ಪಾತ್ರದಲ್ಲಿ ಆಶಿಷ್ ವಿದ್ಯಾರ್ಥಿ, ಶ್ರೀಧರನ ಪಾತ್ರದಲ್ಲಿ ಬಾಲಿವುಡ್‌ನ ಅತುಲ್ ಕುಲಕರ್ಣಿ ನಟಿಸಿದ್ದಾರೆ. ಚೇತನ್ ನಾಯಕನಾಗಿ,ಅರ್ಚನಾ ನಾಯಕಿಯಾಗಿ ಮೊದಲಬಾರಿಗೆ ನಟಿಸಿದ್ದು ಈ ಚಿತ್ರಕ್ಕೆ ಇಳೆಯರಾಜ ಅವರ ಸಂಗೀತವಿದೆ.

(ದಟ್ಸ್ ಕನ್ನಡಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada