»   » ಜಯಮಾಲಾ ಪುತ್ರಿ ಲಗೋರಿ ಆಡೊಲ್ಲವಂತೆ

ಜಯಮಾಲಾ ಪುತ್ರಿ ಲಗೋರಿ ಆಡೊಲ್ಲವಂತೆ

Posted By:
Subscribe to Filmibeat Kannada

soundarya not to act in lagoriಯಾಕೋ ಏನೋ ಯೋಗರಾಜ್ ಭಟ್ ರ'ಲಗೋರಿ'ಚಿತ್ರಆರಂಭಕ್ಕೂ ಮುನ್ನ ಒಂದಿಲ್ಲೊಂದು ಅವಾಂತರಗಳಿಗೆ ಈಡಾಗುತ್ತಲೇ ಇದೆ.ಈ ಚಿತ್ರಕ್ಕೆ ನಾಯಕಿ ಹುಡುಕಲು ಯೋಗರಾಜ್ ಭಟ್ ಸಾಕಷ್ಟು ಹೆಣಗಿದ್ದರು. ಕಡೆಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಪುತ್ರಿ ಸೌಂದರ್ಯ ಆಯ್ಕೆಯಾಗಿ ಪ್ರೇಕ್ಷಕರ ಕುತೂಹಲಕ್ಕೆ ತಣ್ಣೀರೆರಚಿದ್ದರು. ಸೌಂದರ್ಯ ಆಯ್ಕೆಯಾಗಿರುವ ಬಗ್ಗೆ ಮಾಧ್ಯಮಗಳು ಪುಂಕಾನುಪುಂಕ ಸುದ್ದಿಗಳನ್ನು ಪ್ರಕಟಿಸಿದ್ದವು. ಈ ಬಗ್ಗೆ ಇಡೀ ಗಾಂಧಿನಗರವೇ ಬೆಕ್ಕಸ ಬೆರಗಾಗಿ ನೋಡುತ್ತಿತ್ತು. ಈಗ ಇದ್ದಕ್ಕಿದ್ದಂತೆ ಸೌಂದರ್ಯ ಅವರು ಲಗೋರಿ ಚಿತ್ರದಲ್ಲಿ ನಟಿಸುತ್ತ್ತಿಲ್ಲ ಎಂಬ ಸುದ್ದಿ ಧೂಮಕೇತುವಿನಂತೆ ಅಪ್ಪಳಿಸಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ 'ಲಗೋರಿ' ಚಿತ್ರಕ್ಕೆ ತಮ್ಮ ಪುತ್ರಿ ಆಯ್ಕೆಯಾಗಿರುವ ಸುದ್ದಿ ಸಂಪೂರ್ಣಸುಳ್ಳು ಎಂದು ಜಯಮಾಲಾ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಎಲ್ಲರದ್ದೂ ಒಂದೇ ಪ್ರಶ್ನೆ, 'ಲಗೋರಿ ಚಿತ್ರಕ್ಕೆ ಸೌಂದರ್ಯ ಆಯ್ಕೆಯಾಗಿದ್ದಾರಂತೆ ಹೌದಾ' ಎಂದು. ಇದು ಕೇವಲ ವದಂತಿ ಅಷ್ಟೆ ಎಂದು ಪ್ರತಿಯೊಬ್ಬರಿಗೂ ತಿಳಿಸಿದ್ದೇನೆ. ಈ ರೀತಿಯ ವದಂತಿಗಳು ಹೇಗೆ ಹಬ್ಬುತ್ತವೆ ಎಂಬುದು ತಮಗೆ ಗೊತ್ತಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ತಮ್ಮ ಮನಸ್ಸಿಗೆ ಸಾಕಷ್ಟು ಘಾಸಿಯಾಗಿರುವುದಾಗಿ ಅವರು ತಿಳಿಸಿದರು.

ಲಗೋರಿ ಚಿತ್ರದ ನಾಯಕಿಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೌಂದರ್ಯಸಹ ಇದ್ದರುಎಂಬುದು ನಿಜ. ಆಕೆ ಆಡಿಷನ್ ಗೂ ಹಾಜರಾಗಿದ್ದರು ಎಂಬುದನ್ನು ಜಯಮಾಲಾ ಒಪ್ಪುತ್ತಾರೆ. ಆದರೆ ತಮ್ಮ ಪುತ್ರಿ ಲಗೋರಿಗೆ ಆಯ್ಕೆಯಾಗಿರುವ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ರಾಗಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಗಲಿ ತಿಳಿಸಿಲ್ಲ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರಿಗೆ ಸಾಕಷ್ಟು ಸಮಯ ಹಿಡಿಸುತ್ತದೆ. ಇಂತಹ ವಿಚಾರಗಳಲ್ಲಿ ಆತುರದ ನಿರ್ಧಾರ ಸಲ್ಲದು. ಪಾತ್ರಕ್ಕೆ ಹೊಂದಾಣಿಕೆಯಾಗುವ ಸೂಕ್ತ ಮುಖವನ್ನು ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ ಎಂದು ಜಯಮಾಲಾ ವಿವರಿಸಿದರು.

ಲಗೋರಿ ಚಿತ್ರಕ್ಕೆ ಸೌಂದರ್ಯ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯ ಬಗ್ಗೆಯಾಗಲಿ ಅಥವಾ ಚಿತ್ರಸೆಟ್ಟೇರಲು ತಡವಾಗುತ್ತಿರುವ ಬಗ್ಗೆಯಾಗಲಿ ತಾವು ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಯೋಗರಾಜ್ ಭಟ್. ಬಹಳಷ್ಟು ಹುಡುಗಿಯರನ್ನು ಆಡಿಷನ್ ಗೆ ಕರೆದಿದ್ದೇವೆ. ಆಯ್ಕೆ ಪಟ್ಟಿ ಸಿದ್ಧವಾಗಿದೆ. ಒಂದೆರಡು ದಿನಗಳಲ್ಲಿ ಲಗೋರಿ ಚಿತ್ರದ ನಾಯಕಿ ಯಾರೆಂಬುದನ್ನು ಬಹಿರಂಗ ಪಡಿಸುತ್ತೇವೆ. ಚಿತ್ರೀಕರಣ ಮುಂದಿನ ತಿಂಗಳಿಂದ ಶುರುವಾಗಲಿದೆ ಎಂದು ಹೇಳಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X