»   » ಕನ್ನಡ ಚಿತ್ರಗಳ ನಿರ್ಮಾಣದತ್ತ ಅನಿಲ್ ಅಂಬಾನಿ

ಕನ್ನಡ ಚಿತ್ರಗಳ ನಿರ್ಮಾಣದತ್ತ ಅನಿಲ್ ಅಂಬಾನಿ

Posted By:
Subscribe to Filmibeat Kannada

ನವದೆಹಲಿ,ಮೇ 19: ಭಾರಿ ಅಬ್ಬರದೊಂದಿಗೆ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ(ಎಡಿಎ) ಸಮೂಹ ಸಂಸ್ಥೆ ಇದೀಗ ಕನ್ನಡ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದೆ. ಕನ್ನಡದ ಕಲಾತ್ಮಕ ನಿರ್ದೇಶಕರೆಂದೇ ಖ್ಯಾತಿ ಪಡೆದಿರುವ ಗಿರೀಶ್ ಕಾಸರವಳ್ಳಿ ಮತ್ತು ಎಂ.ಎಸ್.ಸತ್ಯು ಈ ಚಿತ್ರಗಳ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.

ಕನ್ನಡದ ಎರಡು ಚಿತ್ರಗಳನ್ನು ನಿರ್ದೇಶಿಸಲು ಗಿರೀಶ್ ಕಾಸರವಳ್ಳಿ ಮತ್ತು ಎಂ.ಎಸ್.ಸತ್ಯು ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಡಿಎ ಸಂಸ್ಥೆ ಅಡಿಯಲ್ಲಿ ಸತ್ಯು ನಿರ್ದೇಶನದ 'ಇಜ್ಜೋಡು' ಚಿತ್ರದ ಚಿತ್ರೀಕರಣ ಶೀಘ್ರದಲ್ಲಿ ಆರಂಭವಾಗಲಿದೆ. ಚಿತ್ರದಲ್ಲಿ ಅನಿರುದ್ಧ ನಾಯಕ ನಟನಾಗಿ ಮತ್ತು ಡೈಸಿ ಬೋಪಣ್ಣ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶಿಸಲಿರುವ ಚಿತ್ರದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.

ಅಂಬಾನಿ ಗ್ರೂಪ್ ಇಷ್ಟು ದಿನಗಳ ಕಾಲ ದೊ‌ಡ್ಡ ದೊಡ್ಡ ಕೈಗಾರಿಕೆಗಳು ಮತ್ತು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ನಂತಹ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಅನಿಲ್ ಅಂಬಾನಿ ತಮ್ಮ ಸಂಸ್ಥೆಯ ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದು, ಇದೀಗ ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದಾರೆ. ದೇಶದ 9 ವಿವಿಧ ಭಾಷೆಗಳ 69 ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಸುಮಾರು 75 ಶತಕೋಟಿ ಡಾಲರ್‌ಗಳ ಬಂಡವಾಳ ಹೂಡಿದ್ದಾರೆ. ವಾಣಿಜ್ಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರಗಳನ್ನು ನಿರ್ಮಿಸಲಾಗುವುದು. ಆಯಾ ಭಾಷೆಗಳ ಹೆಸರಾಂತ ನಿರ್ದೇಶಕರನ್ನು ಗುರುತಿಸಿ ಅಂತಹ ನಿರ್ದೇಶಕರಿಗೆ ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ವಹಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada