»   » ಅರ್ಥವಿಲ್ಲದ ಶೀರ್ಷಿಕೆಗಳ ನಡುವೆ 'ಗುಂಡ್ರಗೋವಿ'!

ಅರ್ಥವಿಲ್ಲದ ಶೀರ್ಷಿಕೆಗಳ ನಡುವೆ 'ಗುಂಡ್ರಗೋವಿ'!

Posted By:
Subscribe to Filmibeat Kannada

ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಸೆಳೆಯಲು ಚಿತ್ರ ವಿಚಿತ್ರ ಶೀರ್ಷಿಕೆಯುಳ್ಳ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ಹೊಸದಾಗಿ 'ಗುಂಡ್ರ ಗೋವಿ' ಚಿತ್ರ ಸೇರ್ಪಡೆಯಾಗಿದೆ. 'ಗುಂಡು ಗೋವಿ' ಎಂದರೆ ಸ್ವೇಚ್ಛಾಚಾರಿ, ಯಾವ ಕಟ್ಟುಪಾಡು ಇಲ್ಲದವನು ಎಂದರ್ಥ. ಇಲ್ಲಿ ಗುಂಡು ಗೋವಿ ಸ್ವಲ್ಪ ಬದಲಾವಣೆಯಾಗಿ ಗುಂಡ್ರಗೋವಿ ಆಗಿದೆ, ಇರಲಿ. ಒಟ್ಟಿನಲ್ಲಿ ಅರ್ಥವಿಲ್ಲದ ಇಂಗ್ಲಿಷ್, ಹಿಂದಿ ಶೀರ್ಷಿಕೆಗಳ ನಡುವೆ ಕನ್ನಡದ ಹಳೆ ಪಡೆನುಡಿಯನ್ನು ಚಿತ್ರದ ಶೀರ್ಷಿಕೆಯಾಗಿಸಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು.

ತಾರೇಶ್ ರಾಜ್ ಹಾಗೂ ಗನ್ ಅನಿಲ್ ಕುಮಾರ್ ಎಂಬವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಗರಡಿಯಲ್ಲಿ ಪಳಗಿರುವ ಇವರು ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಬರುತ್ತಿದ್ದಾರೆ. ಓಂಕಾರ, ಈಶ್ವರ ಮುಂತಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಈ ನಿರ್ದೇಶಕ ದ್ವಯರು ಸಿನಿಮಾಗಳಿಗೆ ನಕಲಿ ಗನ್ನು, ಪಿಸ್ತೂಲುಗಳನ್ನು ಸರಬರಾಜು ಮಾಡುತ್ತಿದ್ದರು. ಹಾಗಾಗಿ ಅವರ ಹೆಸರಿನ ಜೊತೆಗೆ ಗನ್ ಸೇರಿಕೊಂಡಿದೆ.

'ಆ ದಿನಗಳು' ಚಿತ್ರದಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದ ಸತ್ಯ ಈ ಚಿತ್ರದ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ. ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸತ್ಯ ಬೆಳ್ಳಿತೆರೆಯಲ್ಲೂ ಒಂದಷ್ಟು ಹೆಸರು ಮಾಡಬೇಕೆಂದು ದೊಡ್ಡ ಕನಸಿಟ್ಟುಕೊಂಡವರು. ಮೂಲತಃ ನೀನಾಸಂ ಪ್ರತಿಭೆಯಾದ ಸತ್ಯ ಸಿನಿಮಾ ರಂಗಕ್ಕೆ ಪ್ರವೇಶ ಪಡೆಯಲು ಸಾಕಷ್ಟು ಹೆಣಗಿದ್ದಾರೆ. ಗಾಂಧಿ ನಗರದ ಬೀದಿಬೀದಿಗಳಲ್ಲಿ ಅಲೆದಾಡಿ ಅವಕಾಶ ಕೊಡುವಂತೆ ನಿರ್ಮಾಪಕ, ನಿರ್ದೇಶಕರನ್ನು ಅಂಗಲಾಚಿದ್ದಾರೆ. ಸ್ಫುರದ್ರೂಪಿಯಲ್ಲದ ಇವರನ್ನು ಯಾರೂ ಕರೆದು ಅವಕಾಶ ಕೊಡಲಿಲ್ಲ. ಕಡೆಗೆ ಗುಂಡ್ರ ಗೋವಿ ಬದುಕಾಗಿತ್ತು. ಈಗ ಅದೇ ರೀತಿಯ ಪಾತ್ರ ಇವರನ್ನು ವರಿಸಿರುವುದು ವಿಧಿವೈಚಿತ್ರ್ಯ ಎನ್ನಬಹುದು. ಬಿಡುಗಡೆಗೆ ಸಿದ್ಧವಾಗಿರುವ 'ಸ್ಲಂ ಬಾಲ' ಚಿತ್ರದಲ್ಲಿ ನಿರ್ದೇಶಕಿ ಸುಮನಾ ಕಿತ್ತೂರ ಒಳ್ಳೆಯ ಪಾತ್ರ ಕೊಟ್ಟಿದ್ದಾರಂತೆ. ಖ್ಯಾತ ನಿರ್ದೇಶಕ ಎಂ.ಎಸ್.ಸತ್ಯು ಅವರ ಇಜ್ಜೋಡು ಚಿತ್ರದಲ್ಲೂ ಉತ್ತಮ ಪಾತ್ರ ಇದೆಯಂತೆ. ರಂಗಭೂಮಿ ಹಿನ್ನೆಲೆಯುಳ್ಳ ಸತ್ಯರಂತಹ ಕಲಾವಿದರನ್ನು ಕನ್ನಡ ಚಿತ್ರರಂಗ ಉಳಿಸಿ ಬೆಳೆಸಬೇಕಾಗಿದೆ.

ಗೋಪಾಲಕೃಷ್ಣ ಹಾಗೂ ಮಹೇಶ್ ಚಿತ್ರದ ನಿರ್ಮಾಪಕರು. ನವ್ಯಶ್ರೀ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲವೂ ವಿಭಿನ್ನವಾಗಿವೆ ಎನ್ನುತ್ತಾರೆ ಮುಂಬೈ ಮೂಲದ ಸಂಗೀತ ನಿರ್ದೇಶಕ ಫಿನಿಕ್ಸ್ ರಾಜನ್. ಗುಂಡ್ರುಗೋವಿ ಚಿತ್ರದ ಚಿತ್ರೀಕರಣ ಸೆ.28ರಂದು ಚಿಕ್ಕಮಗಳೂರಿನಲ್ಲಿ ಆರಂಭವಾಯಿತು. 45 ದಿನಗಳ ಚಿಕ್ಕಮಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಎಲ್ಲ ಹೊಸ ಮುಖಗಳೇ ಇರುವ ಗುಂಡ್ರುಗೋವಿ ಕನ್ನಡ ಚಿತ್ರರಂಗಕ್ಕೆ ಏನಾದರೂ ಹೊಸತನ್ನು ಕೊಡುತ್ತಾ?

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada