ಶೈಲೂ ಬಾಕ್ಸ್ ಆಫೀಸ್ ಹಿಟ್: ಚಿತ್ರರಂಗಕ್ಕೆ ಹೊಸ ಟಾನಿಕ್
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಲಾ ಸಾಮ್ರಾಟ್ ಎಸ್ ನಾರಾಯಣ್ ಸಂಗಮದ ಚಿತ್ರ "ಶೈಲೂ" ದಿನದಿನಕ್ಕೂ ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನಮೆಚ್ಚುಗೆ ಗಳಿಸುತ್ತಿದೆ. ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಎಂಬ ಹೆಸರು ಪಡೆಯುವತ್ತ ದಾಪುಗಾಲು ಹಾಕುತ್ತಿದೆ. 'ಚೆಲುವಿನ ಚಿತ್ತಾರ'ದ ನಂತರ ಗಣೇಶ್-ನಾರಾಯಣ್ ಜೋಡಿಯ ಮೋಡಿ ಮತ್ತೊಮ್ಮೆ ಜನರನ್ನು ಸೆಳೆದಿದೆ.
ಈ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಮತ್ತು ನಾರಾಯಣ್ ಖುಷಿಖುಷಿಯಾಗಿ 'ಶೈಲೂ ಖುಷಿ' ಹಂಚಿಕೊಂಡರು. ನಾರಾಯಣ್ "ಮತ್ತೊಮ್ಮೆ ಎಲ್ಲರ ಸಹಕಾರದಿಂದ ಶೈಲೂ ಹಿಟ್ ಆಗಿದೆ. ವಿಶೇಷವಾಗಿ ಗಣೇಶ್ ಶ್ರಮದ ಬಗ್ಗೆ ಹೇಳಲೇಬೇಕು. ನಾನು ಅಂದುಕೊಂಡಿದ್ದಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ. ಅದು ಗಣೇಶ್ ರಿಂದ ಮಾತ್ರ ಸಾಧ್ಯವಾಗಿದೆ" ಎಂದರು. ಭಾಮಾ ಕೂಡ ಅವರಿಗೆ ಬರುವಷ್ಟು ಕನ್ನಡದಲ್ಲೇ ಮಾತನಾಡಿ ಚಿತ್ರತಂಡದ ಪ್ರತಿಯೊಬ್ಬರನ್ನೂ ನೆನೆದರು.
ನಂತರ ಮೈಕ್ ಎತ್ತಿಕೊಂಡ ಗಣೇಶ್ "ನನ್ನ ಅಭಿನಯದ 18 ಸಿನಿಮಾಗಳಲ್ಲಿ ನನ್ನ ಮನಸ್ಸಿಗೆ ಹತ್ತಿರವಾದ, ವೈಯಕ್ತಿಕವಾಗಿ ಇಷ್ಟವಾದ ಚಿತ್ರ ಶೈಲೂ. ನನ್ನೊಳಗಿನ ಮಂಜನನ್ನು ಹೊರತಂದ ನಾರಾಯಣ್ ಸರ್ ಗೆ ನನ್ನ ಕೃತಜ್ಞತೆ. ಜೊತೆಗೆ ಎಲ್ಲರಿಗೂ ಧನ್ಯವಾದ" ಎಂದು ಖುಷಿಯಾದರು. ಒಟ್ಟಿನಲ್ಲಿ ಗಣೇಶ್, ನಾರಾಯಣ್ ಗೆ ಶೈಲೂ 'ಗೆಲುವಿನ ಚಿತ್ತಾರ' ಆಗಿದೆ. ನಿರ್ಮಾಪಕ ಕೆ. ಮಂಜು 'ಕಿಸೆ' ಭರ್ತಿಯಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಕೂಡ ಹೊಸ ಟಾನಿಕ್ ದೊರಕಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











