»   » ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ಇನ್ನಿಲ್ಲ

ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ಇನ್ನಿಲ್ಲ

Posted By:
Subscribe to Filmibeat Kannada

ಚೆನ್ನೈ, ಮೇ 19: ಕನ್ನಡ ಚಿತ್ರರಂಗದ ಮರೆಯಲಾರದ ಖ್ಯಾತ ಚಿತ್ರಸಾಹಿತಿ, ನಿರ್ಮಾಪಕ, ನಿರ್ದೇಶಕ ಆರ್.ಎನ್.ಜಯಗೋಪಾಲ್ ಇನ್ನು ಬರೀ ನೆನಪಷ್ಟೆ. ಚೆನ್ನೈನ ಅವರ ಸ್ವಗೃಹದಲ್ಲಿ ಸೋಮವಾರ ಮಧ್ಯಾಹ್ನ ಆರ್.ಎನ್.ಜಯಗೋಪಾಲ್ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.

ಆರ್.ಎನ್.ಜಯಗೋಪಾಲ್ 150ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, 1,600ಕ್ಕೂ ಅಧಿಕ ಚಿತ್ರಗೀತೆಗಳು ಅವರ ಲೇಖನಿಯಿಂದ ಹೊರಹೊಮ್ಮಿವೆ. ಕಲಾವತಿ ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ, ಕನ್ನಡದ ಹೃದಯ ಪಲ್ಲವಿ, ಜೀವನದಿ ಸೇರಿದಂತೆ 30ಕ್ಕೂ ಅಧಿಕ ಚಿತ್ರಗಳು ಹಾಗೂ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ಸಹ ಅಭಿನಯಿಸಿದ್ದಾರೆ.

ನಟ, ನಿರ್ದೇಶಕ ಆರ್.ನಾಗೇಂದ್ರರಾಯರ ಹಾಗೂ ರತ್ನಮ್ಮ ದಂಪತಿಗಳ ಸುಪುತ್ರನಾಗಿ ಆರ್.ಎನ್.ಜಯಗೋಪಾಲ್ ಅವರು ಅಪ್ಪಟ ಕಲಾವಿದರ ಮನೆತನದಲ್ಲಿ ಹುಟ್ಟಿ ಬೆಳೆದವರು. ತಮ್ಮ ಕೊನೆಯ ಉಸಿರಿರುವವರೆಗೂ ಕಲಾಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಆರ್. ಎನ್.ಜಯಗೋಪಾಲ್ ಅವರ ಸಹೋದರರಾದ ಆರ್.ಎನ್. ಕೃಷ್ಣಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿಯೂ, ಇನ್ನೊಬ್ಬ ಸಹೋದರ ಆರ್.ಎನ್.ಸುದರ್ಶನ್ ನಟನೆಯಲ್ಲಿಯೂ ಹೆಸರು ಮಾಡಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಪತ್ನಿ ಲಲಿತಾ ರಾಜಗೋಪಾಲ್ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ನೀರಿನಲ್ಲಿ ಅಲೆಯ ಉಂಗುರ(ಬೇಡಿ ಬಂದವಳು), ಬೆಳ್ಳಿಮೋಡದ ಆಚೆಯಿಂದ (ಬೆಳ್ಳಿ ಮೋಡ), ನೀಬಂದು ನಿಂತಾಗ (ಕಸ್ತೂರಿ ನಿವಾಸ), ಗಗನವು ಎಲ್ಲೋ ಭೂಮಿಯು ಎಲ್ಲೋ(ಗೆಜ್ಜೆ ಪೂಜೆ) ಮುಂತಾದ ಮನಮಿಡಿಯುವ, ತನು ಕರಗುವ ಹಾಡುಗಳು ಜನಮಾನಸದಲ್ಲಿ ಇಂದಿಗೂ ಶಾಶ್ವತ ಸ್ಥಾನವನ್ನು ಗಳಿಸಿಕೊಂಡಿವೆ ಎಂದರೆ ಆರ್.ಎನ್.ಜಯಗೋಪಾಲ್‌ರ ಸಾಹಿತ್ಯವೇ ಕಾರಣ. ಚಿತ್ರಗೀತೆಗಳ ಕಾಪಿರೈಟ್ ಹಕ್ಕುಗಳನ್ನು ರಕ್ಷಿಸಲು ಸ್ಥಾಪನೆಯಾದ ಇಂಡಿಯನ್ ಪರ್ಫಾಮಿಂಗ್ ರೈಟ್ ಸೊಸೈಟಿ ಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು ಆರ್.ಎನ್.ಜಯಗೋಪಾಲ್.

ಆರ್.ಎನ್.ಜೆ. ಗೀತ ರಚನೆಯ ಕೆಲ ಚಿತ್ರಗಳು

* ಚಕ್ರತೀರ್ಥ
* ವಿಜಯನಗರದ ವೀರಪುತ್ರ
* ಸೀತಾ
* ಪುನರ್ಜನ್ಮ
* ಮಧುರ ಸಂಗಮ
* ಕಪ್ಪು ಬಿಳುಪು
* ಬಾಳುಜೇನು
* ನಮ್ಮ ಮಕ್ಕಳು
* ನಾಂದಿ
* ಮರೆಯದ ಹಾಡು
* ಹಸಿರುತೋರಣ
* ನಾ ಮೆಚ್ಚಿದ ಹುಡುಗ
* ಹಣ್ಣೆಲೆ ಚಿಗುರಿದಾಗ
* ಗೆಜ್ಜೆಪೂಜೆ
* ಪರೋಪಕಾರಿ
* ಬೆಳ್ಳಿಮೋಡ
* ಉಪಾಸನೆ
* ಸಂಪತ್ತಿಗೆ ಸವಾಲ್
* ಸಿಪಾಯಿರಾಮು
* ಬಂಗಾರದ ಮನುಷ್ಯ
* ಎಡಕಲ್ಲು ಗುಡ್ಡದ ಮೇಲೆ
* ಪಲ್ಲವಿ ಅನುಪಲ್ಲವಿ
* ಟೋನಿ
* ಚಿನ್ನಾ ನಿನ್ನ ಮುದ್ದಾಡುವೆ
* ಚಿರಂಜೀವಿ
* ಪ್ರೇಮಕ್ಕು ಪರ್ಮಿಟ್ಟೆ
* ಸಾಹಸ ಸಿಂಹ
* ಅರ್ಚನ
* ಕಿಲಾಡಿ ಕಿಟ್ಟು
* ರಾಜ ನನ್ನ ರಾಜ
* ಸವತಿಯ ನೆರಳು
* ನೀ ಬರೆದ ಕಾದಂಬರಿ
* ಜೀವನದಿ
* ಅಂಜದ ಗಂಡು
* ಹೃದಯ ಪಲ್ಲವಿ
* ಜನನಾಯಕ
* ಸ್ವಾಭಿಮಾನ
* ವಸಂತ ಲಕ್ಷ್ಮಿ
* ಬೇಡಿ ಬಂದವಳು

ಆರ್.ಎನ್.ಜೆ. ನಿರ್ದೇಶನದ ಚಲನಚಿತ್ರಗಳು
ಚಿತ್ರ (ಬಿಡುಗಡೆಯಾದ ವರ್ಷ)

ಧೂಮಕೇತು (1968)
ನಾ ಮೆಚ್ಚಿದ ಹುಡುಗ(1927)
ಕೆಸರಿನ ಕಮಲ(1973)
ಮುತ್ತು ಒಂದು ಮುತ್ತು(1979)
ಮರೆಯದ ಹಾಡು(1981)
ಮಕ್ಕಳೇ ದೇವರು(1983)
ಅವಳ ಅಂತರಂಗ (1984)
ಹೃದಯ ಪಲ್ಲವಿ(1987)

ಪ್ರಶಸ್ತಿಗಳು
* 3 ಬಾರಿ ರಾಜ್ಯ ಪ್ರಶಸ್ತಿ
* ರಾಜ್ಯೋತ್ಸವ ಪ್ರಶಸ್ತಿ

(ದಟ್ಸ್‌ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada