»   » ಮೀಟ್... ಆಕ್ಷನ್ ಸ್ಟಾರ್ ಶ್ರೀಮುರಳಿ!

ಮೀಟ್... ಆಕ್ಷನ್ ಸ್ಟಾರ್ ಶ್ರೀಮುರಳಿ!

Posted By:
Subscribe to Filmibeat Kannada

*ಜಯಂತಿ

kannada action hero Srimurali
ಒಂದು ಸಿನಿಮಾ ರಿಸೀವ್ ಆಗುವುದು, ಬಿಡುವುದು ಹೇಗೆ ಎಂಬ ದೊಡ್ಡ ಪ್ರಶ್ನೆಯನ್ನು ಮುಖದ ತುಂಬಾ ಹೊತ್ತು ಕೂತಿದ್ದರು ನಟ ಶ್ರೀಮುರಳಿ. ಅವರು ಮುರಳಿ ಎಂಬ ಹೆಸರನ್ನು ಈ ರೀತಿ ತಿದ್ದುಪಡಿ ಮಾಡಿಕೊಂಡರೂ ನಸೀಬು ಮಾತ್ರ ಬದಲಾಗಿಲ್ಲ. ಅಪಾರ ನಿರೀಕ್ಷೆಯಿದ್ದ 'ಮಿಂಚಿನ ಓಟ" ಮಕಾಡೆಯಾದ ಮೇಲೆ ಜಿಜ್ಞಾಸೆಯ ಉರಿ ಇನ್ನೂ ಹೆಚ್ಚಾಗಿದೆ.

ಮೊದಮೊದಲು ಲವರ್ ಬಾಯ್ ಇಮೇಜು ಇಟ್ಟುಕೊಂಡಿದ್ದ ಮುರಳಿಗೆ 'ಶಿವಮಣಿ" ಚಿತ್ರತಂಡ 'ಆಕ್ಷನ್ ಸ್ಟಾರ್" ಬಿರುದನ್ನು ದಯಪಾಲಿಸಿದೆ. ಅದರ ಗುಂಗಿನಲ್ಲಿ ಅವರಿದ್ದಾರೆ ಎಂಬುದರ ದ್ಯೋತಕ ಹೊಸ ಚಿತ್ರ 'ಮುರಾರಿ". ಇದರಲ್ಲಿ ಅವರು ರೌಡಿ. ಐದು ಫೈಟು, ಆರು ಹಾಡು, ಇಬ್ಬರು ನಾಯಕಿಯರು- ರಶ್ಮಿ, ಮಾಧುರಿ. ನಿರ್ದೇಶಕ ಎಚ್.ವಾಸು ಸವಕಲು ವಸ್ತುವನ್ನೇ ಆಯ್ದುಕೊಂಡಿದ್ದಾರೆ. ಮೊದಲರ್ಧಕ್ಕೂ ಎರಡನೇ ಅರ್ಧಕ್ಕೂ ಚೇಂಜ್ ಓವರ್ ಇರುತ್ತದಂತೆ. ಮೊದಲರ್ಧ ನಾಡು, ಎರಡನೇ ಅರ್ಧ ಕಾಡು. ಅಲ್ಲೊಂದು ಗ್ರಾಫಿಕ್ ಹೆಬ್ಬಾವು. ಅದರ ಜೊತೆ ರಶ್ಮಿ ಕಾದಾಟ ಇತ್ಯಾದಿ.ಈ ಚಿತ್ರಕ್ಕೆ ಆರ್.ಎಸ್.ಗೌಡ ಬಂಡವಾಳ ಹೂಡಿದ್ದಾರೆ. ಕಥೆ ಕೂಡ ಅವರದ್ದೇ. ಶ್ರೀಮುರಳಿಯ ಮೈಕಟ್ಟು ನೋಡಿ ಅವರೇ ಈ ಪಾತ್ರಕ್ಕೆ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಶ್ರೀಮುರಳಿ ವೈಫಲ್ಯದ ನಡುವೆಯೂ ಖಾಲಿ ಕೂತಿಲ್ಲ. ಶಿವಮಣಿ, ಸಿಹಿಗಾಳಿ, ಯಜ್ಞ ಆದಮೇಲೆ ಈಗ ಮುರಾರಿಯ ಸರದಿ. ಮುಂದೆ 'ನಂದೇ" ಎಂಬ ಚಿತ್ರ. ಈ ಸಿನಿಮಾ ಕುರಿತು ಅವರಿಗೆ ಅಪಾರ ನಿರೀಕ್ಷೆಯಿದೆ. ಅದರ ನಿರ್ಮಾಪಕ, ನಿರ್ದೇಶಕ ಯಾರು ಎಂಬುದನ್ನು ಮಾತ್ರ ಗುಟ್ಟು ಮಾಡಿದರು. ಆರು ತಿಂಗಳಿಂದ ಜಿಮ್‌ಗೆ ಹೋಗಲೂ ಬಿಡುವಾಗಿಲ್ಲ. ಆದರೂ ಮನೆಯಲ್ಲೇ ಕಸರತ್ತು ಮಾಡುತ್ತಾ, ಟ್ರೆಡ್ ಮಿಲ್ ಮೇಲೆ ಓಡುತ್ತಾ ಶ್ರೀಮುರಳಿ ಫಿಟ್ ಅಂಡ್ ಫೈನ್ ಆಗಿದ್ದಾರೆ. ಅದರ ಪರಿಣಾಮವೇ ಆಕ್ಷನ್ ಚಿತ್ರಗಳ ಅವಕಾಶದ ಹರಿವು.

ಇಷ್ಟಕ್ಕೂ ತಾವು ಬರೀ ಆಕ್ಷನ್ ಚಿತ್ರಗಳಿಗೇ ಅಂಟಿಕೊಳ್ಳದೆ ಬೇರೆ ವಸ್ತುಗಳ ಸಿನಿಮಾದಲ್ಲೂ ನಟಿಸುವ ಬಯಕೆ ಅವರಿಗಿದೆ. ಮುಂದಿನ ವರ್ಷ ಒಂದು ಲವ್ ಸಬ್ಜೆಕ್ಟ್ ಚಿತ್ರ ಕೂಡ ಸೆಟ್ಟೇರುವುದಂತೆ. ಅಂದಹಾಗೆ, ಅಪ್ಪ ಚಿನ್ನೇಗೌಡ, ಅಣ್ಣ ವಿಜಯ ರಾಘವೇಂದ್ರ ಜೊತೆ ಚರ್ಚಿಸಿದ ನಂತರವಷ್ಟೇ ಶ್ರೀಮುರಳಿ ಸಿನಿಮಾ ಒಪ್ಪಿಕೊಳ್ಳೋದು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada