»   » ನಾಗಾಭರಣ ಚಿತ್ರದಲ್ಲಿ ವಿಷ್ಣು ಜೊತೆ ನವ್ಯಾ ನಾಯರ್

ನಾಗಾಭರಣ ಚಿತ್ರದಲ್ಲಿ ವಿಷ್ಣು ಜೊತೆ ನವ್ಯಾ ನಾಯರ್

Subscribe to Filmibeat Kannada

'ಗಜ' ಚಿತ್ರ ಶತದಿನೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲೇ ಮೀನಿನ ಕಂಗಳ 'ಮಿನ ಮಿನ ಮೀನಾಕ್ಷಿ' ನವ್ಯಾ ನಾಯರ್ ಇನ್ನೊಂದು ಹೈ ಪ್ರೊಫೈಲ್ ಕನ್ನಡ ಚಿತ್ರದಲ್ಲಿ ನಟನಾ ಚಾತುರ್ಯ ತೋರಲು ಅಣಿಯಾಗಿದ್ದಾರೆ. ಬಹುದಿನಗಳ ನಂತರ ಟಿ.ಎಸ್. ನಾಗಾಭರಣ ನಿರ್ದೇಶಿಸುತ್ತಿರುವ ವಿಷ್ಣುವರ್ಧನ್, ಅನಂತ್‌ನಾಗ್, ರಮೇಶ್ ಅರವಿಂದ್ ಪ್ರಮುಖ ಭೂಮಿಕೆಯಲ್ಲಿರುವ 'ನಮ್ಮ ಯಜಮಾನ್ರು' ಚಿತ್ರದಲ್ಲಿ ನವ್ಯಾ ನಾಯರ್ ನಾಯಕಿ ಪಾತ್ರ ನಿಭಾಯಿಸಲಿದ್ದಾರೆ.

ನಾಗಾಭರಣ ಕಥೆಯ ಪೂರ್ಣ ವಿವರ ನೀಡಿರದಿದ್ದರೂ ಅವರ ನಿರ್ದೇಶನದಲ್ಲಿ, ವಿಷ್ಣು, ಅನಂತ್ ಅಂಥವರ ಜೊತೆ ನಟಿಸುವುದು ಎಂಥ ಪ್ರತಿಷ್ಠೆಯ ಪ್ರಶ್ನೆ ಎಂಬುದು ನವ್ಯಾ ಅರಿತಿದ್ದಾರೆ. "ಒಂದೇ ಲೈನಿನ ಕಥೆ ಕೇಳಿ ಪುಳಕಿತಳಾಗಿದ್ದೇನೆ. ಕಥೆ ನಟನಾ ಕೌಶಲ್ಯಕ್ಕೆ ಸಾಕಷ್ಟು ದಾರಿ ಮಾಡಿಕೊಡಲಿದೆ. ಈ ಪಾತ್ರ ಹಿಂದಿನ ಎಲ್ಲ ಪಾತ್ರಗಳಿಗಿಂತ ತುಂಬ ಭಿನ್ನವಾಗಿರುತ್ತದೆಂದು ನಂಬಿದ್ದೇನೆ" ಎನ್ನುವ ನವ್ಯಾ ಕಣ್ಣಲ್ಲಿ ಮಿಂಚು.

ಯಶಸ್ಸಿನ ಹುಡುಕಾಟದಲ್ಲಿರುವ ಯುವನಾಯಕ ವಿಜಯ ರಾಘವೇಂದ್ರ ಅವರು 'ಕಲ್ಲರಳಿ ಹೂವಾಗಿ' ಚಿತ್ರದ ನಂತರ ನಾಗಾಭರಣ ನಿರ್ದೇಶನದ ಚಿತ್ರದಲ್ಲಿ ಮತ್ತೆ ಪ್ರಮುಖ ಪಾತ್ರವಹಿಸಲಿದ್ದಾರೆ. ಕಲ್ಲರಳಿ ಚಿತ್ರದ ನಟನೆಗಾಗಿ ಉತ್ತಮ ಪ್ರಶಂಸೆ ಬಂದಿದ್ದರೂ ಆ ಚಿತ್ರ ಅಂಥ ಭಾರೀ ಯಶಸ್ಸು ಗಳಿಸಲು ವಿಫಲವಾಗಿದ್ದು ವಿಜಯ್‌ ಮತ್ತು ನಾಗಾಭರಣಗೆ ನಿರಾಶೆ ತಂದಿತ್ತು. ಈಗ ಈ ಜೋಡಿ ಮತ್ತೆ ಮೋಡಿ ಮಾಡಲು ಒಂದಾಗಿದೆ. ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡುತ್ತಿರುವುದು ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನು ನಾಗಾಭರಣ ನಿಭಾಯಿಸಿದ್ದಾರೆ. ಈ ಚಿತ್ರವನ್ನು ರಾಜಶೇಖರ್ ನಿರ್ಮಿಸುತ್ತಿದ್ದಾರೆ.

ವಿಷ್ಣುವರ್ಧನ್ ಕೂಡ ವಿಜಯ್ ಸಾಗಿದ ದೋಣಿಯಲ್ಲಿಯೇ ಸಾಗುತ್ತಿದ್ದಾರೆ. ನಾಗತಿಯವರ 'ಮಾತಾಡ್ ಮಾತಾಡು ಮಲ್ಲಿಗೆ' ಮತ್ತು ವಿಜಯಲಕ್ಷ್ಮಿ ಸಿಂಗ್ ಅವರ 'ಈ ಬಂಧನ'ಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದರೂ ಇವೆರಡೂ ಹಿಟ್ ಚಿತ್ರಗಳ ಸಾಲಿಗೆ ಸೇರಲೇ ಇಲ್ಲ. ಪಾತ್ರದಲ್ಲಿ ಹೊಸತನ, ತಾಜಾತನ ಬಯಸುವ ವಿಷ್ಣು ಈಗ ಮೋಜ-ಮಜಾ, ಭಾವಾಭಿನಯಕ್ಕೆ ಅವಕಾಶವಿರುವ ನಾಗಾಭರಣ ಅವರ ಕಥೆಯಿಂದ ವಿಷ್ಣು ತುಂಬಾ ಉಲ್ಲಸಿತರಾಗಿದ್ದಾರೆ. 'ಬಂಗಾರದ ಜಿಂಕೆ'ಯ ನಂತರ ಹದಿನೈದು ವರ್ಷಗಳ ತರುವಾಯ ವಿಷ್ಣು ಮತ್ತು ನಾಗಾಭರಣ ಒಟ್ಟಾಗಿದ್ದಾರೆ.

ಚಿತ್ರಕಥೆಯ ವಿವರಗಳನ್ನು ಈಗಲೇ ಬಹಿರಂಗಗೊಳಿಸಲು ಇಚ್ಛಿಸದ ನಾಗಾಭರಣ, ನಮ್ಮ ಯಜಮಾನ್ರು ಚಿತ್ರಕ್ಕೆ ಚಿತ್ರಕಥೆಯೇ ಪ್ರಮುಖ ಆಸ್ತಿ ಎಂದು ಹೇಳಿದ್ದಾರೆ. ಚಿತ್ರಕಥೆಯನ್ನು ಡಾ.ವಿಷ್ಣುವರ್ಧನ್ ಅವರನ್ನೇ ಮನದಲ್ಲಿಟ್ಟು ಬರೆದಿರುವುದನ್ನು ಹೇಳಲು ನಾಗಾಭರಣ ಮರೆಯುವುದಿಲ್ಲ. ಸುಮಾರು 15 ವರ್ಷಗಳ ನಂತರ ವಿಷ್ಣು ಜೊತೆ ನಾಗಾಭರಣ ಕೆಲಸ ಮಾಡುತ್ತಿದ್ದಾರೆ.

(ದಟ್ಸ್‌ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada