ಕನ್ನಡಕ್ಕೆ ರೀಮೇಕ್ ಆಗಲಿದೆ ಮಲಯಾಳಂ ನೈವೇದ್ಯಂ
ಪ್ರಶಸ್ತಿ ಪುರಸ್ಕೃತ ನಿರ್ದೇಶಕ ದಿವಂಗತ ಎ ಕೆ ಲೋಹಿತ್ ದಾಸ್ ಅವರ ಮಳೆಯಾಳಂ ಚಿತ್ರ ನೈವೇದ್ಯಂ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಚಿತ್ರ ನಿರ್ಮಾಪಕ ಒಮರ್ ಶರೀಫ್ ಈ ವಿಷಯವನ್ನು ಪ್ರಕಟಿಸಿದ್ದು ಈ ಯಶಸ್ವಿ ಚಿತ್ರವನ್ನು ಕನ್ನಡಕ್ಕೆ ತರುತ್ತಿರುವುದಾಗಿ ತಿಳಿಸಿದ್ದಾರೆ.
ಚಿತ್ರದ ನಾಯಕನ ಪಾತ್ರಕ್ಕೆ ವಿಜಯ ರಾಘವೇಂದ್ರ ಅವರನ್ನು ಆಯ್ಕೆ ಮಾಡಲು ಚಿಂತನೆ ನಡೆದಿದೆ. ಮೂಲ ಚಿತ್ರದಲ್ಲಿ ವಿನೂ ಮೋಹನ್ ಪೋಷಿಸಿದ್ದ ಪಾತ್ರ ಅದಾಗಿತ್ತು. ನಾಯಕಿಯ ಆಯ್ಕೆ ಪ್ರಗತಿಯಲ್ಲಿದ್ದು ಹೊಸ ಮುಖಕ್ಕಾಗಿ ಹುಡುಕಾಟ ನಡೆದಿದೆ.
ಕನ್ನಡದಲ್ಲೂ ಇದೇ ಶೀರ್ಷಿಕೆಯನ್ನು ಉಳಿಸಿಕೊಂಡು ಮೂಲ ಕಥೆಗೆ ಧಕ್ಕೆಯಾಗದಂತೆ ಯಥಾವತ್ತಾಗಿ ಕನ್ನಡಕ್ಕೆ ತರಲಾಗುತ್ತದೆ ಎನ್ನುತ್ತವೆ ಮೂಲಗಳು. ಸಂಭಾಷಣೆಯ ಜವಾಬ್ದಾರಿಯನ್ನು ಬಿ ಎ ಮಧು ಅವರಿಗೆ ಒಪ್ಪಿಸಲಾಗಿದೆ. ಈ ಚಿತ್ರದಲ್ಲಿ ಹಾಡುಗಳೆ ಜೀವಾಳ. ಜಯಚಂದ್ರನ್ ಸಂಗೀತ ಸಂಯೋಜಿಸಿದ್ದ ಟ್ಯೂನ್ ಗಳನ್ನು ಯಥಾವತ್ತಾಗಿ ಬಳಸಿಕೊಳ್ಳುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಮೈಸೂರಿನಲ್ಲಿ ಚಿತ್ರ ಸೆಟ್ಟೇರಲಿದೆ.


Click it and Unblock the Notifications











