ಪುನೀತ್ ಜೊತೆ ಯೋಗರಾಜ್ ಭಟ್ ಹೊಸ ಚಿತ್ರ
ಈಗಾಗಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಯೋಗರಾಜ್ ಭಟ್ ನಿರ್ದೇಶಿಸಿದ 'ಪರಮಾತ್ಮ' ಚಿತ್ರ ಗೆದ್ದಿದೆ. ಆದರೆ ಚಿತ್ರ ಅಷ್ಟಾಗಿ ಪುನೀತ್ ಅಭಿಮಾನಿಗಳಿಗೆ ಸಮಾಧಾನ ತಂದಿಲ್ಲ. ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಭಟ್ಟರು.
ಇನ್ನೇನು ರಾಜ್ ಕುಟುಂಬ ಓಕೆ ಮಾಡಬೇಕಾಗಿದೆಯಷ್ಟೆ. ಚಿತ್ರಕ್ಕೆ 'ಜೈ ಬಜರಂಗಬಲಿ' ಎಂದು ಹೆಸರಿಡಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ 'ಸಂಜು ವೆಡ್ಸ್ ಗೀತಾ' ಚಿತ್ರದ ನಿರ್ದೇಶಕ ನಾಗಶೇಖರ್ ಸಹ ಪುನೀತ್ ಜೊತೆ ಚಿತ್ರ ಮಾಡಲು ಹೊರಟಿದ್ದಾರೆ.
ವಿಶೇಷ ಎಂದರೆ ನಾಗಶೇಖರ್ ತಮ್ಮ ಚಿತ್ರಕ್ಕೆ 'ಆಂಜನೇಯ' ಎಂದು ಹೆಸರಿಟ್ಟಿರುವುದು. ಆದರೆ ಈ ಕಥೆಯನ್ನೂ ರಾಜ್ ಕುಟುಂಬ ಇನ್ನೂ ಓಕೆ ಮಾಡಿಲ್ಲ. ಈಗಾಗಲೆ ಕಥೆಯನ್ನು ಮತ್ತಷ್ಟು ತಿದ್ದುಪಡಿ ಮಾಡಿಕೊಂಡು ಮೂರು ಬಾರಿ ಸದಾಶಿವನಗರ ಹೆಡ್ಡಾಫೀಸಿಗೆ ಹೋದರೂ ಪ್ರಯೋಜನವಾಗಿಲ್ಲ.
ಬಜರಂಗಬಲಿ ಅಂದರೂ ಆಂಜನೇಯ ಎಂದರೂ ಎರಡೂ ಒಂದೇ ಅರ್ಥ ಬರುತ್ತದೆ. ಆದರೆ ರಾಜ್ ಕುಟುಂಬ ಯಾರಿಗೆ ಮಣೆ ಹಾಕುತ್ತದೋ ನೋಡಬೇಕು. ಭಟ್ಟರು ಹಾಗೂ ನಾಗಶೇಖರ್ ಅವರನ್ನು ಆ ಆಂಜನೇಯನೇ ಕಾಪಾಡಬೇಕು ಜೈ ಬಜರಂಗಬಲಿ! (ಏಜೆನ್ಸೀಸ್)


Click it and Unblock the Notifications











