»   » ದಕ್ಷಿಣದ ಭಾರತದ ಖ್ಯಾತ ನಟ ರಘುವರನ್ ನಿಧನ

ದಕ್ಷಿಣದ ಭಾರತದ ಖ್ಯಾತ ನಟ ರಘುವರನ್ ನಿಧನ

Subscribe to Filmibeat Kannada

ಚೆನ್ನೈ, ಮಾ.19: ದಕ್ಷಿಣ ಭಾರತದ ಖ್ಯಾತ ನಟ ರಘುವರನ್(49) ಬುಧವಾರ ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ರಘುವರನ್ ಅವರಿಗೆ ಒಬ್ಬ ಪುತ್ರ ಹಾಗೂ ವಿಚ್ಛೇದಿತ ಪತ್ನಿ ಇದ್ದಾರೆ.

ಚಿಕಿತ್ಸೆಗಾಗಿ ವಾರದ ಹಿಂದಷ್ಟೆ ಆಸ್ಪತ್ರೆಗೆ ದಾಖಲಾಗಿದ್ದ ರಘುವರನ್ ಅವರನ್ನು ತೀವ್ರ ನಿಘಾ ಘಟಕದಲ್ಲಿ ಇಡಲಾಗಿತ್ತು. ರಘುವರನ್ ಅಂತ್ಯಕ್ರಿಯೆಯನ್ನು ಇಂದು ಸಂಜೆ ನೆರವೇರಿಸಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಕನ್ನಡದ 'ಅನಾಥ ರಕ್ಷಕ' ಚಿತ್ರದಲ್ಲಿ ನಟಿಸಿದ್ದ ನಾಯಕಿ ರೋಹಿಣಿ ಅವರನ್ನು ಪ್ರೀತಿಸಿ ರಘುವರನ್ ಮದುವೆಯಾಗಿದ್ದರು.

ಕನ್ನಡ,ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ 150 ಅಧಿಕ ಚಿತ್ರಗಳಲ್ಲಿ ರಘುವರನ್ ನಟಿಸಿದ್ದರು. ಕನ್ನಡದ ಆಯುಧ, ಅಸುರ,ಪ್ರತ್ಯರ್ಥ, ದುರ್ಗಿ,ಗೌರ್ಮೆಂಟ್,ಜೈ ಹಿಂದ್,ಸರ್ಕಲ್ ಇನ್ಸ್‌ಫೆಕ್ಟರ್,ಸಾರಿ, ಮಜ್ನು, ರಕ್ಷಕ ಚಿತ್ರಗಳಲ್ಲಿ ನಟಿಸಿದ್ದರು. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ 'ಅಂಜಲಿ' ಸೇರಿದಂತೆ ತೆಲುಗು ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಅವರ 'ಶಿವ' ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದರು.

ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದ ರಘುವರನ್ ಅವರಿಗೆ ತಮಿಳುನಾಡು ಸರ್ಕಾರ ಪ್ರತಿಷ್ಠಿತ 'ಕಲೈಮಾಮಣಿ' ಪ್ರಶಸ್ತಿ ನೀಡಿ ಗೌರವಿಸಿತ್ತು. ಕೆಲ ಚಿತ್ರಗಳಲ್ಲಿ ನಾಯಕ ಪಾತ್ರವನ್ನೂ ಮಾಡಿದ್ದರು ರಘುವರನ್. ಕಮಲ್ ಹಾಸನ್, ರಜನಿಕಾಂತ್, ಮಮ್ಮುಟ್ಟಿ,ಮೋಹನ್ ಲಾಲ್ ಸೇರಿದಂತೆ ಬಹಳಷ್ಟು ಹಿರಿಯ ನಾಯಕರೊಂದಿಗೆ ನಟಿಸಿದ್ದರು. ತನ್ನದೇ ಆದ ಹಾವಭಾವ, ಧ್ವನಿಯ ಮೂಲಕ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.

ತಮಿಳಿನ 'ಒರು ಮನಿಧನಿನ್ ಕಧೈ'(ಒಬ್ಬ ವ್ಯಕ್ತಿಯ ಕಥೆ) ಎಂಬ ಚಿತ್ರದಲ್ಲಿ ಮದ್ಯ ವ್ಯಸನಿಯ ಪಾತ್ರವನ್ನು ಪೋಷಿಸಿದ್ದರು ರಘುವರನ್. ದುರದೃಷ್ಟವೆಂದರೆ ಅವರ ನಿಜ ಜೀವನದಲ್ಲೂ ಅವರು ಮಹಾನ್ ಮದ್ಯ ವ್ಯಸನಿಯಾದರು. ಇದೇ ಅವರ ದಾಂಪತ್ಯ ಜೀವನ ಕೆಡಲು ಕಾರಣವಾಗಿ ಕಡೆಗೆ ವಿಚ್ಛೇದನದಲ್ಲಿ ಕೊನೆಗೊಂಡಿತು.ರಘುವರನ್‌ಗೆ ಎಂಟು ವರ್ಷದ ನಂದಾ ಎಂಬ ಪುತ್ರ ಇದ್ದಾನೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada