ಸಾಧು 90ಗೆ ಕಿಕ್ ಕೊಡಲು ಶಕೀಲಾ ಹಾಜರ್!
ಸೆಕ್ಸ್ ಬಾಂಬ್ ಎಂದೇ ಖ್ಯಾತಿ ಪಡೆದು ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಸ್ಥೂಲ ಸುಂದರಿ ಶಕೀಲಾ ಕನ್ನಡಿಗರ ಪಾಲಿಗೆ ಹೊಸಬಳೇನಲ್ಲ. ಆದರೂ ಆ ತರಹದ ಚಿತ್ರಗಳನ್ನು ಬಿಟ್ಟು ಬರೀ ಕಾಮಿಡಿ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುವ ಚಿತ್ರದಲ್ಲಿ ಮಾತ್ರ ನಟಿಸುವ ಅಘೋಷಿತ ಪ್ರತಿಜ್ಞೆ ಮಾಡಿರುವ ಶಕೀಲಾ ಈಗ ಸಾಧು ಮಹಾರಾಜ್ ಅವರ "90' ಚಿತ್ರಕ್ಕೆ ಮತ್ತಷ್ಟು ಕಿಕ್ ನೀಡಲು ಬಂದಿದ್ದಾರೆ.
ನಾಯಕಿಯರೇ ಐಟಂ ಗರ್ಲ್ ಗಳಾಗಿ ಬದಲಾಗಿರುವ ಈ ಕಾಲದಲ್ಲಿ ಶಕೀಲಾ ಎಲ್ಲಿದೆ ಬೇಡಿಕೆ ಎಂಬ ವಾದವನ್ನು ಸಾಧು ಒಪ್ಪುವುದಿಲ್ಲ. ಹಣದ ಹೊಳೆ ಹರಿಸಿ ಹೆಂಡದ ಹೊಳೆಯಲ್ಲಿ ಮುಳುಗೇಳುವ ಕಥೆಯುಳ್ಳ ಈ ಚಿತ್ರಕ್ಕೆ ಬೇಕಾದ ಎಲ್ಲ ಬಗೆಯ ಮಸಾಲೆ ಐಟಂಗಳನ್ನು ಸಾಧು ಕೋಕಿಲ ಒಟ್ಟು ಮಾಡುತ್ತಿದ್ದಾರೆ.
ನಂ.1 ಎಂಬ ಹೆಸರಿನ ಚಿತ್ರ ನಿರ್ಮಿಸಿ ಕೈಸುಟ್ಟಿಕೊಂಡಿದ್ದ ಸಾಧು, ಆನಂತರ ಚಿತ್ರಕ್ಕೆ ದುಡ್ಡು ಹಾಕುವ ಬಗ್ಗೆ ಎಚ್ಚರವಹಿಸಿದ್ದಾರೆ. ಈ 90 ಚಿತ್ರವನ್ನು ತಮ್ಮ ಶಿಷ್ಯ ಲಕ್ಕಿ ಶಂಕರ್ ಕೈಗಿತ್ತಿದ್ದಾರೆ. ಆದರೆ, ಸಂಗೀತ ನಿರ್ದೇಶನದ ಹೊಣೆ ಹೊತ್ತಿರುವ ಸಾಧು, ಈ ಚಿತ್ರ ನೀತಿ ಪಾಠದ ಜೊತೆಗೆ ಮನರಂಜನೆ ಒದಗಿಸಲಿದೆ ಎಂದಿದ್ದಾರೆ.
1 ರು ಅಡ್ವಾನ್ಸ್ : ಸದ್ಯಕ್ಕೆ ಚಾಲ್ತಿಯಲ್ಲಿರುವ ಕಾಮಿಡಿ ನಟರನ್ನು ಗುಡ್ಡೆ ಹಾಕಿರುವ ಸಾಧು ಅವರ ಕ್ರಮವನ್ನು ಅವರ ಶಿಷ್ಯ ಲಕ್ಕಿ ಶಂಕರ್ ಸಮರ್ಥಿಸಿಕೊಂಡಿದ್ದಾರೆ. ರಂಗಾಯಣ ರಘು ಸೇರಿದಂತೆ ಹಲವರು ಕೇವಲ ರು.1 ಅಡ್ವಾನ್ಸ್ ಪಡೆದು ನಟಿಸುತ್ತಿದ್ದಾರೆ. ಶಕೀಲಾರ ಮಾದಕತೆ ಜೊತೆಗೆ ಅಭಿನಯದ ಝಲಕ್ ಸಹಾ ಪ್ರೇಕ್ಷಕರಿಗೆ ಉಣಬಡಿಸಲು ಆಕೆಯನ್ನು ಮತ್ತೆ ಕರೆತರಲಾಗಿದೆ ಎಂದು ಶಂಕರ್ ಹೇಳಿದರು.
ಕಲಿಯುಗದ ಕುಡುಕ ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ತಬ್ಲಾನಾಣಿ(ಚಿತ್ರಕ್ಕೆ ಸಂಭಾಷಣೆ ಕೂಡಾ ಬರೆದಿದ್ದಾರೆ) ಬಿರಾದಾರ್, ದೊಡ್ಡಣ್ಣ, ವಿ ಮನೋಹರ್, ಮಿತ್ರ, ನಾಗರಾಜ್ ಕೋಟೆ, ಕುರಿ ಪ್ರತಾಪ್, ಆರ್ ಟಿ ರಮಾ, ಲಯೇಂದ್ರ ಅಲ್ಲದೇ ರಂಗಲೋಕದ ಹಿರಿ ನಟ ಮಾಸ್ಟರ್ ಹಿರಣ್ಣಯ್ಯ ಅವರನ್ನು 90 ಬಾಟಲಿ ಚಿತ್ರದೊಳಗೆ ತುಂಬಲಾಗಿದೆ. ಸಾಧು ಅವರ ಯೋಜನೆ ಏನೋ ಸರಿ, ಆದರೆ ಕುಡುಕರ ಬಗ್ಗೆ ಚಿತ್ರ ಮಾಡಿ ಮೆಸೇಜ್ ಹೇಳೋಕೆ ಹೋಗಿ ಲಾಸ್ ಮಾಡಿಕೊಂಡು ಈ ಪಾಪಿ ದುನಿಯಾ ಎಂದು ಹಲುಬಿದ ನಿರ್ದೇಶಕ ಉದಾಹರಣೆ ಕಣ್ಣ ಮುಂದಿರುವಾಗ ಮಲ್ಟಿ ಕಾಮಿಡಿ ಸ್ಟಾರ್ ಗಳ ಚಿತ್ರ ಕ್ಲಿಕ್ ಆಗುವುದೇ ಕಾದು ನೋಡೋಣ.


Click it and Unblock the Notifications











