'ರಾಕಿಭಾಯ್' ಪ್ರೇರಣೆ: ಐದು ಮಂದಿಯ ಕೊಂದ ಪಾಪಿ
ಅಣ್ಣಾವ್ರ 'ಬಂಗಾರದ ಮನುಷ್ಯ' ಸಿನಿಮಾ ನೋಡಿ ಅದೆಷ್ಟೋ ಮಂದಿ ಕೃಷಿ ಕೆಲಸಗಳಿಗೆ ತೊಡಗಿಕೊಂಡರು. ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನೋಡಿ ಬದಲಾದವರು ಅದೆಷ್ಟೊ. ಆದರೆ ಈಗಿನ ಜಮಾನಾದ ಸಿನಿಮಾಗಳನ್ನು ನೋಡಿ ಏನೂ ಕಲಿಯದಿದ್ದರೆ ಸಾಕು ಎಂದುಕೊಳ್ಳುವ ರೀತಿ ಇರುತ್ತವೆ ಸಿನಿಮಾದ ಸಂದೇಶಗಳು.
ಈಗಿನ ಜಮಾನಾದ ಸಿನಿಮಾಗಳನ್ನು ನೋಡಿ ಕೊಲೆ ಮಾಡಿದ, ಸಿನಿಮಾ ಶೈಲಿಯಲ್ಲಿಯೇ ದರೋಡಿ ಮಾಡಿದ, ಸಿನಿಮಾದ ನಾಯಕನ್ನು ಆದರ್ಶನವಾಗಿ ತೆಗೆದುಕೊಂಡು ರೌಡಿಯಾದ ಉದಾಹರಣೆಗಳು ಸಾಕಷ್ಟಿವೆ. ಈ ಉದಾಹರಣೆಗಳ ಸಾಲಿಗೆ ಹೊಸ ಸೇರ್ಪಡೆ 'ಕೆಜಿಎಫ್' ಸಿನಿಮಾದ 'ರಾಕಿಭಾಯ್'ನಿಂದ ಸ್ಪೂರ್ತಿ ಪಡೆದ ಅಪರಾಧಿಯದ್ದು.
ಮಧ್ಯ ಪ್ರದೇಶದ ಯುವಕನೊಬ್ಬ 'ಕೆಜಿಎಫ್' ಸಿನಿಮಾ ವೀಕ್ಷಿಸಿ ಸಿನಿಮಾದ ನಾಯಕ ರಾಕಿಭಾಯ್ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಐದು ಮಂದಿ ಕೊಲೆ ಮಾಡಿದ್ದಾನೆ. ತಾನು ರಾಕಿಭಾಯ್ ಅನ್ನು ಸ್ಪೂರ್ತಿಯನ್ನಾಗಿ ತೆಗೆದುಕೊಂಡು ಹೀಗೆ ಮಾಡಿದ್ದಾಗಿ ಪೊಲೀಸರ ಮುಂದೆ ತಾನೇ ಒಪ್ಪಿಕೊಂಡಿದ್ದಾನೆ.

19 ವರ್ಷದ ಶಿವ ಪ್ರಸಾದ್, ತಾನು ರಾಕಿಭಾಯ್‌ನಂತೆ ದೊಡ್ಡ ಹೆಸರು ಮಾಡಬೇಕು ಎಂಬ ಆಸೆಯಲ್ಲಿ ಐದು ಜನ ಅಮಾಯಕರ ಜೀವವನ್ನೇ ತೆಗೆದಿದ್ದಾನೆ.
ಶುಕ್ರವಾರ ಬೆಳಿಗ್ಗೆ ಭೂಪಾಲದಲ್ಲಿ ಶಿವಪ್ರಸಾದ್ ಅನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯೊಬ್ಬನನ್ನು ಕೊಂದಿದ್ದ ಶಿವಪ್ರಸಾದ್ ಆತನ ಮೊಬೈಲ್ ಅನ್ನು ಕದ್ದಿದ್ದ ಆ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದ ಪೊಲೀಸರು ಶಿವ ಪ್ರಸಾದ್ ಅನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಶಿವ ಪ್ರಸಾದ್ ಕೇವಲ ಮೂರು ದಿನದಲ್ಲಿ ಸಾಗರ್ ನಗರ ಒಂದರಲ್ಲೇ ಮೂವರು ಸೆಕ್ಯುರಿಟಿ ಗಾರ್ಡ್‌ಗಳನ್ನು ಕೊಂದಿದ್ದ, ಭೂಪಾಲ್‌ನಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ ಅನ್ನು ಕೊಂದಿದ್ದ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕೊಂದಿದ್ದ. ಫೇಮಸ್ ಆಗಬೇಕು ಎಂಬ ಉದ್ದೇಶ ಬಿಟ್ಟರೆ ಕೊಲ್ಲಲು ಇನ್ನಾವುದೇ ಉದ್ದೇಶ ಅವನಿಗಿರಲಿಲ್ಲ. ಹಾಗಾಗಿ ಸುಲಭವಾಗಿ ಕೊಲ್ಲಲು ಅನುವಾಗಲು ಮಲಗಿರುವವರನ್ನೇ ಆತ ಆಯ್ಕೆ ಮಾಡಿಕೊಂಡಿದ್ದ ಎಂದು ಪ್ರಕರಣದ ತನಿಖಾಧಿಕಾರಿ ತರುಣ್ ನಾಯಕ್ ಹೇಳಿದ್ದಾರೆ.
ತರುಣ್ ನಾಯಕ್ ಹೇಳಿರುವಂತೆ, ''ಶಿವ ಪ್ರಸಾದ್, ಖ್ಯಾತನಾಮನಾಗಲು ಮಾತ್ರವೇ ಕೊಲ್ಲುತ್ತಿದ್ದ. ಅವನಿಗೆ ರಾಕಿಭಾಯ್‌ನಂತೆ ದೊಡ್ಡ ಹೆಸರು ಮಾಡಬೇಕಿತ್ತು. ಭೂಪಾಲ್‌ನಲ್ಲಿ ಅವನು ಸೆಕ್ಯುರಿಟಿ ಗಾರ್ಡ್ ಅನ್ನು ಕೊಂದಿರುವ ದೃಶ್ಯ ಸೆಕ್ಯುರಿಟಿ ಕ್ಯಾಮೆರಾನಲ್ಲಿ ಸೆರೆಯಾಗಿತ್ತು, ಹಾಗಾಗಿ ಅವನ ಬಂಧನ ಸುಲಭವಾಯಿತು'' ಎಂದಿದ್ದಾರೆ. ಸೆಕ್ಯುರಿಟಿ ಗಾರ್ಡ್‌ಗಳನ್ನು ಕೊಲ್ಲುತ್ತಿದ್ದ ಶಿವ ಪ್ರಸಾದ್‌ನ ಮುಂದಿನ ಟಾರ್ಗೆಟ್ ಪೊಲೀಸ್ ಅಧಿಕಾರಿಗಳಾಗಿದ್ದರಂತೆ. ಅವರನ್ನು ಕೊಂದು ಇನ್ನೂ ಹೆಚ್ಚು ಹೆಸರು ಮಾಡುವ ಆಸೆ ಹೊಂದಿದ್ದನಂತೆ ಶಿವ ಪ್ರಸಾದ್.
ರಾತ್ರಿ ಹೊತ್ತು ಮಾತ್ರವೇ ಕೊಲೆಗಳನ್ನು ಮಾಡುತ್ತಿದ್ದ ಶಿವ ಪ್ರಸಾದ್, ಕೊಲ್ಲಲು ಒಂದೇ ರೀತಿಯ ತಂತ್ರ ಬಳಸುತ್ತಿದ್ದ. ದೊಡ್ಡ ಕಲ್ಲು ಎತ್ತಿ ಮಲಗಿರುವವರ ತಲೆ ಜಜ್ಜಿ ಕೊಲ್ಲುತ್ತಿದ್ದ. ಅವನನ್ನು ಮಾಧ್ಯಮಗಳವರು ಸ್ಟೋನ್ ಮ್ಯಾನ್ ಎಂದೇ ಕರೆಯಲು ಆರಂಭಿಸಿದ್ದರು. ಕೆಲವೇ ದಿನಗಳಲ್ಲಿ ಐದು ಜನರನ್ನು ಕೊಂದು ಭೀತಿ ಹುಟ್ಟಿಸಿದ್ದ ಶಿವ ಪ್ರಸಾದ್ ಕೊನೆಗೂ ಪೊಲೀಸರ ಬಂಧನಕ್ಕೆ ಸಿಲುಕಿದ್ದಾನೆ. ವಿಶೇಷವೆಂದರೆ ಈತ ಕೊಂದ ಯಾರಿಂದಲೂ ಹಣ ತೆಗೆದುಕೊಂಡಿಲ್ಲ. ಒಬ್ಬನಿಂದ ಮೊಬೈಲ್ ಅನ್ನು ಮಾತ್ರವೇ ತೆಗೆದುಕೊಂಡಿದ್ದ ಅದರಿಂದಲೇ ಪೊಲೀಸರ ಬಲೆಗೆ ಬಿದ್ದ.


Click it and Unblock the Notifications











