»   » ಆಪತ್ಕಾಲದಲ್ಲಿ ಒಂದಾದ ಕಳ್ಳಕುಳ್ಳ

ಆಪತ್ಕಾಲದಲ್ಲಿ ಒಂದಾದ ಕಳ್ಳಕುಳ್ಳ

Posted By: Super
Subscribe to Filmibeat Kannada
Apthamithraru'
ಕನ್ನಡ ಚಿತ್ರರಂಗದ ಕಳ್ಳಕುಳ್ಳ ಹಾಸ್ಯಪ್ರಧಾನ ಚಿತ್ರಗಳ ಜೋಡಿ ಜೊತೆಗೂಡಿದೆ. ವಿಷ್ಣುವರ್ಧನ್‌-ದ್ವಾರಕೀಶ್‌ ಜೋಡಿ ಹದಿನೆಂಟು ವರುಷಗಳ ಬಳಿಕ ಸಿನಿಮಾದಲ್ಲಿ ಒಂದಾಗುತ್ತಿದೆ. ಅದಲ್ಲದೆ 'ದ್ವೀಪ" ಚಿತ್ರ ಖ್ಯಾತಿಯ ಸೌಂದರ್ಯ ವಿಷ್ಣುವಿಗೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಲಿದ್ದಾರೆ. ಇದು ಶಿವರಾತ್ರಿಯ ಮುಂಜಾವಿನಲ್ಲಿ ಸೇಟ್ಟೇರಿದ 'ಆಪ್ತಮಿತ್ರರು" ಚಿತ್ರದ ಬೆಸುಗೆ.

ಬೆಂಗಳೂರಿನ ದ್ವಾರಕೀಶ್‌ ನಿವಾಸದಲ್ಲಿ 'ಆಪ್ತಮಿತ್ರರು" ಚಿತ್ರದ ಮುಹೂರ್ತ ಸಮಾರಂಭ ಬುಧವಾರ ಜರುಗಿತು. ದ್ವಾರಕೀಶ್‌ ಲಾಂಛನದಡಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ಚಿನ್ನೇಗೌಡ ಕ್ಲಾಪ್‌ ಮಾಡಿದರು. ವಿಷ್ಣು ಪುತ್ರಿ ಕೀರ್ತಿವರ್ಧನ್‌ ಕ್ಯಾಮರಾ ಸ್ವಿಚ್‌ ಆನ್‌ ಮಾಡಿ ಚಾಲನೆ ನೀಡಿದರು.

'ಆಪ್ತಮಿತ್ರರು" ಚಿತ್ರದ ನಿರ್ದೇಶನ ಚೆನ್ನೈ ಮೂಲದ ಪಿ. ವಾಸು ಅವರದು. ಸಂಗೀತ ಗುರುಕಿರಣ್‌ ನೀಡಲಿದ್ದಾರೆ. ಇಲ್ಲಿ ಅವರ ಪಾಪ್‌-ರ್ಯಾಪ್‌ ಪ್ರಭಾವ ಏನೂ ಇಲ್ಲವಂತೆ. ಕಥೆಗೆ ತಕ್ಕಂತೆ ಶಾಸ್ತ್ರೀಯ ಸಂಗೀತ ನುಡಿಸುವೆ ಎಂಬುದು ಗುರುಕಿರಣ್‌ ಪಲ್ಲವಿ.

ತಾರಾಗಣದಲ್ಲಿ ಹಳೇ ಜೋಡಿ ಮೋಡಿ ಮಾತ್ರವಲ್ಲ . ರಮೇಶ್‌, ಪ್ರೇಮಾ, ರಮೇಶ್‌ ಭಟ್‌, ಅವಿನಾಶ್‌,ಶಿವರಾಂ, ಮುರಳಿ ತೆರೆಮೇಲೆ ಮೆರೆಯಲಿದ್ದಾರೆ. ನಿರ್ಮಾಣದ ಜವಾಬ್ದಾರಿ ದ್ವಾರಕೀಶ್‌ ಪುತ್ರ ಯೋಗಿಶ್‌ ಡಿ ಬಂಗ್ಲೆ ಮತ್ತು ಕೃಷ್ಣಕುಮಾರ್‌ ಅವರದು.

ಅಂದುಕೊಂಡಂತೆ ಆದರೆ ಎಪ್ರಿಲ್‌ನಲ್ಲಿ 'ಆಪ್ತಮಿತ್ರರು" ಥಿಯೇಟರ್‌ಗೆ ಧಾವಿಸಬಹುದು. ದ್ವಾರಕೀಶ್‌ ಸಿನಿ ಶೈಲಿಯ ಹಾಸ್ಯ, ಹಾಡು, ಮನಕರಗುವ ದೃಶ್ಯ, ಈ ಸಿನಿಮಾದಲ್ಲೂ ಇದೆ. ತಮ್ಮ ಮಕ್ಕಳ ಚಿತ್ರ ತೆಗೆದು ಮೌನವಾದ ದ್ವಾರಕೀಶ್‌ರ 'ಆಪ್ತಮಿತ್ರರು" ಮೂಲಕ ಮತ್ತೆ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಅಂದಹಾಗಿ, 'ಆಪ್ತಮಿತ್ರರು" ದ್ವಾರಕೀಶರ 48ನೇ ಬೆಳ್ಳಿತೆರೆ ಕೊಡುಗೆ. ಚಿತ್ರೀಕರಣ ಬೆಂಗಳೂರಿನ ಅತ್ತಿತ್ತ ಹೆಚ್ಚಾಗಿ ನಡೆಯಲಿದೆ. ಬೆಂಗಳೂರೇ ಸಿಂಗಾಪುರವಾಗಿದೆಯಲ್ಲ?

ದ್ವಾರಕೀಶ್‌ ಅವರೀಗ ಕನ್ನಡನಾಡು ಪಕ್ಷದಲ್ಲಿ ಸಕ್ರಿಯರು. ಆ ಕಾರಣದಿಂದಾಗಿ ಚಿತ್ರಕ್ಕೆ ದ್ವಾರಕೀಶ್‌ ಆವರ ಡೇಟ್ಸ್‌ ಹೊಂದಿಸಲು ಕಷ್ಟವಾದದ್ದೂ ಉಂಟು. ಅತ್ತ ಸೌಂದರ್ಯ ಆಂಧ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸುದ್ದಿಯಿದೆ. ವಿಷ್ಣು ಸುತ್ತಮುತ್ತಲೂ ರಾಜಕಾರಣದ ಗಾಳಿ ಬೀಸುತ್ತಿದೆ. ಹೀಗೇನಾದರೂ ಆದಲ್ಲಿ , ಆಪ್ತ ಮಿತ್ರರ ಪಾಲಿಗೆ ರಾಜಕಾರಣ ವಿಲನ್‌ ಆಗುವ ಸಾಧ್ಯತೆಯಿದೆ. ಹಾಗಾಗದಿರಲಿ.

English summary
'KallaKulla' Pair Is Back together in 'Apthamithraru'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada