»   » ಹೈದರಾಬಾದ್‌ನಲ್ಲಿ ಕನ್ನಡ ಧ್ವಜ !

ಹೈದರಾಬಾದ್‌ನಲ್ಲಿ ಕನ್ನಡ ಧ್ವಜ !

Posted By: Super
Subscribe to Filmibeat Kannada

ನಾನು ಈ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಎನ್‌.ಟಿ. ರಾಮರಾವ್‌ ಇದ್ದಿದ್ದರೆ ಅಥವಾ ಅವರ ಅಮೃತ ಹಸ್ತದಿಂದ ಸ್ವೀಕರಿಸಿದ್ದರೆ, ನನ್ನ ಜನ್ಮ ಸಾರ್ಥಕವಾಗುತ್ತಿತ್ತು . ಹೀಗೆಂದವರು ವರನಟ ಡಾ.ರಾಜ್‌ಕುಮಾರ್‌. ಹೈದರಾಬಾದ್‌ನ ಲಲಿತಕಲಾ ತೋರಣಂನಲ್ಲಿ ಬುಧವಾರ ಜರುಗಿದ ಸಮಾರಂಭದಲ್ಲಿ , ಆಂಧ್ರಸರ್ಕಾರದ ಪ್ರತಿಷ್ಠಿತ ಎನ್‌ಟಿಆರ್‌ ಪ್ರಶಸ್ತಿ ಸ್ವೀಕರಿಸಿ ರಾಜ್‌ ಮಾತನಾಡುತ್ತಿದ್ದರು. ತಮ್ಮ ಸಮಕಾಲೀನ ತೆಲುಗು ಚಿತ್ರರಂಗದ ದೈತ್ಯಪ್ರತಿಭೆಯ ನೆನಪಿನಲ್ಲಿ ರಾಜ್‌ ಭಾವುಕರಾಗಿದ್ದರು. ಕನ್ನಡದಲ್ಲಿ ಮಾತನಾಡಿದ ವರನಟ ರಾಜ್‌ ಅವರ ಪ್ರತಿ ಮಾತಿಗೂ ಚಪ್ಪಾಳೆಗಳು ಬಿದ್ದವು.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಡಾ. ರಾಜ್‌ಗೆ ಶಾಲು ಹೊದೆಸಿ ಸನ್ಮಾನಿಸಿದರು. ಐದು ಲಕ್ಷ ರುಪಾಯಿ ನಗದು ಹಾಗೂ ಸ್ಮರಣಿಕೆಯ ಎನ್‌ಟಿಆರ್‌ ಪ್ರಶಸ್ತಿಯನ್ನು ರಾಜ್‌ ಸ್ವೀಕರಿಸಿದಾಗ ಸಭಾಂಗಣದ ತುಂಬಾ ಚಪ್ಪಾಳೆಗಳ ಮೊಳಗು.

ನನ್ನ ಪೂರ್ವಜರ ಪುಣ್ಯಫಲವೇ ಈ ಪುರಸ್ಕಾರ. ಎನ್‌ಟಿಆರ್‌ ಅವರದು ಮೇರು ವ್ಯಕ್ತಿತ್ವ. ಅವರ ಜೊತೆಗೆ ಕಳೆದ ಪ್ರತಿ ಕ್ಷಣವೂ ಇಂದಿಗೂ ಮರೆಯಲಾಗದು. ಎನ್‌ಟಿಆರ್‌, ಅಕ್ಕಿನೇನಿ ನಾಗೇಶ್ವರ್‌ ರಾವ್‌, ಗುಮ್ಮಡಿ ವೆಂಕಟೇಶ್ವರ ರಾವ್‌ ಅವರನ್ನು ರಜತ ಪರದೆಯ ಮೇಲೆ ನೋಡಿ ಆನಂದಿಸುವಾಗ ನಾನು ನಾಟಕದಲ್ಲಿ ಅಭಿನಯಿಸುತ್ತಿದ್ದೆ. ಒಮ್ಮೆ ನಾಗೇಶ್ವರ್‌ ರಾವ್‌ ಅವರು ಬಂಗಾರ ಮತ್ತು ವಜ್ರ ಈ ಎರಡರಲ್ಲಿ ಯಾವುದು ಶ್ರೇಷ್ಠ ಎಂದು ಪ್ರಶ್ನಿಸಿದಾಗ ನಾನು ಕಕ್ಕಾಬಿಕ್ಕಿಯಾಗಿಬಿಟ್ಟೆ. 'ಬಂಗಾರ ಮತ್ತು ವಜ್ರಗಳ ಸಮ್ಮಿಶ್ರಣವೇ ನೀನು" ಎಂದು ನಾಗೇಶ್ವರ್‌ ತುಂಬು ಹೃದಯದಿಂದ ಹರಸಿದ ಕ್ಷಣ ಮರೆಯಲಾರೆ ಎಂದು ರಾಜ್‌ ಹೇಳಿದರು.

'ಎಂದರೋ ಮಹಾನುಭಾವುಲು....." ತ್ಯಾಗರಾಜರ ಕೀರ್ತನೆ ಹಾಗೂ ಎನಗಿಂತ ಕಿರಿಯರಿಲ್ಲ ಎಂಬ ವಚನವನ್ನು ರಾಜ್‌ ಹಾಡಿದಾಗ ಸಭೆಯಲ್ಲಿ ಭಾರಿ ಕರತಾಡನ.

ಇದೇ ಕಾರ್ಯಕ್ರಮದಲ್ಲಿ - ನಟ ಚಿರಂಜೀವಿ, ನಾಗಾರ್ಜುನ, ಪ್ರಕಾಶ್‌ ರೈ, ಖ್ಯಾತ ಗಾಯಕಿ ಪಿ.ಸುಶೀಲಾ, ಹಿಂದಿ ಚಲನಚಿತ್ರದ ಹಿರಿಯ ನಟ ಹೃಷಿಕೇಶ ಮುಖರ್ಜಿ, ಹಿರಿಯ ನಟಿ ಡಾ. ಭಾನುಮತಿ ರಾಮಕೃಷ್ಣ ಅವರು ವಿವಿಧ ಪ್ರಶಸ್ತಿಗಳನ್ನು ಸ್ವೀಕರಿಸಿದರು.

English summary
Raj felicitated with NTR Award

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada