For Quick Alerts
ALLOW NOTIFICATIONS  
For Daily Alerts

  ಅಭಿಜಾತ ಕಲಾವಿದೆ ಬಿ. ಸರೋಜದೇವಿಗೆ, ಪ್ರೀತಿಯಿಂದ

  By Staff
  |


  ಸುಕೋಮಲೆಯಾಗಿ, ದೈವಭಕ್ತಳಾಗಿ, ಪೌರುಷದ ಪ್ರತೀಕವಾಗಿ ಲೀಲಾಜಾಲ ಅಭಿನಯಕ್ಕೆ ಇನ್ನೊಂದು ಹೆಸರಾಗಿರುವ ನಮ್ಮ ಸರೋಜಾದೇವಿಗೆ ಪ್ರೀತಿಯಿಂದ...

  ಆಕಾಶವೆ ಬೀಳಲಿ ಮೇಲೇ, ನಿಲ್ಲು ನೀ ನಿಲ್ಲು ನೀ ನೀಲವೇಣಿ, ಚೆಲುವಾಂತ ಚೆನ್ನಿಗನೆ ನಲಿದಾಡು ಬಾ, ತನುಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು, ಆಡೋಣ ಒಲವಿನಾ ರಾಗಮಾಲೆ, ನಿನ್ನಾ ಸ್ನೇಹಕೇ ನಾ ಸೋತು ಹೋದೆನು, ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ, ಏನೋ ಎಂತೋ... ಜುಮ್ಮೆಂದಿತು ತನುವು, ಬೆಚ್ಚಿತು ಮನವೂ, ಆರಾಧಿಸುವೆ ಮದನಾರಿ.. ಎಂದು ಅಲೆ ಅಲೆಯಾಗಿ ತೇಲಿ ಬರುತ್ತಿದ್ದ ಸುಮಧುರ ಗೀತೆಗಳ ಮಾಧುರ್ಯದಲಿ ಮೈ ಮರೆತಿದ್ದೆ. ಇದ್ದಕ್ಕಿದಂತೆ :

  ‘ಕಪ್ಪವಂತೆ ಕಪ್ಪ..ಕಪ್ಪ ಕೇಳಲು ಕಿತ್ತೂರೇನು ನಿಮ್ಮಪ್ಪನ ಆಸ್ತಿಯೇ? ನಿಮಗೇಕೆ ಕೊಡಬೇಕು ಕಪ್ಪ. ನೀವೇನು ಉತ್ತಿರಾ, ಬಿತ್ತಿರಾ, ಬೆಳೆದಿರಾ’ ಎನ್ನುತ್ತಾ ಕಪ್ಪ ಕೇಳಲು ಬಂದ ಬ್ರಿಟಿಷರ ಸೇನಾಧಿಪತಿ ಥ್ಯಾಕರೆಯನ್ನು ಹೀಯಾಳಿಸಿದ ಕೆಚ್ಚೆದೆಯ ಮಾತು ಕೇಳಿ ಬೆಚ್ಚಿ ಬಿದ್ದೆ. ಈ ಧ್ವನಿ ಇತಿಹಾಸದ ಚೆನ್ನಮ್ಮದಾಗಿರಲಿಲ್ಲ ಇಂದಿನ ಸರೋಜಾದೇವಿ ಅವರದಾಗಿತ್ತು.

  ಸ್ವಾತಂತ್ರ ಹೋರಾಟದಲ್ಲಿ ಮಹಿಳೆ-ಕೇಳಿ ಬರುವ ಮೊದಲ ಹೆಸರು ಝಾನ್ಸಿರಾಣಿ. ಅದೇ ಕೆಚ್ಚಿನಿಂದ, ಖಡಕ್ಕಾದ, ಕರಾರುವಕ್ಕಾದ ಧೀರತೆಯಿಂದ ಬ್ರಿಟಿಷರನ್ನು ಎದುರಿಸಿದ ಮತ್ತೋರ್ವ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ . ‘ಕಿತ್ತೂರ ರಾಣಿ’ಯನ್ನು ಬೆಳ್ಳಿ ತೆರೆಯ ಮೂಲಕ ಕರ್ನಾಟಕದ ಮನೆ-ಮನಗಳಿಗೆ ಪರಿಚಯಿಸಿದ ಕೀರ್ತಿ ಬಿ.ಆರ್‌. ಪಂತುಲು ಅವರಿಗೆ ಸಲ್ಲುತ್ತದೆ. ಹಾಗೆಯೇ ಇತಿಹಾಸದ ಪುಟಗಳಲ್ಲಿ ಅಡಗಿರುವ ಕಿತ್ತೂರು ರಾಣಿಯನ್ನು, ಅವಳ ಧೈರ್ಯ, ಸಾಹಸ, ದೇಶಾಭಿಮಾನ‘ರಾಣಿ ಚೆನ್ನಮ್ಮ ಹೀಗೆಯೇ ಇದ್ದಿರಬೇಕು’ ಎನ್ನುವಷ್ಟು ಸಾಮ್ಯತೆಯನ್ನು ತಮ್ಮ ಅಪ್ರತಿಮ ನಟನೆಯಿಂದ ಮತ್ತೆ ಜೀವಂತಗೊಳಿಸಿದ ಹಿರಿಮೆ ಬಿ. ಸರೋಜಾದೇವಿ ಅವರಿಗೆ ಸಲ್ಲುತ್ತದೆ.

  ಕನ್ನಡದ ಸಿನಿರಂಗದ ಕಂಪನ್ನು ಪರಭಾಷಿಗರೂ ಮೆಲುಕು ಹಾಕುವಂತೆ ಛಾಪು ಮೂಡಿಸಿದ ಮೊಟ್ಟ ಮೊದಲ ನಟಿ ಬಿ. ಸರೋಜಾದೇವಿ. ಅಂದಿನ ದಿನಗಳಲ್ಲಿ ಕನ್ನಡವೇ ಅಲ್ಲದೆ, ತಮಿಳು, ತೆಲುಗು ಭಾಷೆಗಳಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಲ್ಲಿದ್ದ ಚತುರ್ಭಾಷಾ ನಟಿ. ಕಿತ್ತೂರು ರಾಣಿ, ಅಮರಶಿಲ್ಪಿ, ಮಲ್ಲಮ್ಮನ ಪವಾಡಗಳ ನಂತರ ಸರೋಜಾದೇವಿಯವರ ಕ್ರೇಜ್‌, ಇಮೇಜ್‌, ಉತ್ತಮ ನಟನೆಯಿಂದ ಗಲ್ಲಾ ಪೆಟ್ಟಿಗೆ ತುಂಬುತ್ತಿತ್ತು. ಜನತೆಯ ಮೇಲೆ ಒಳ್ಳೆಯ ಪ್ರಭಾವ ಮೂಡುತ್ತಿತ್ತು.

  ಕನ್ನಡದಲ್ಲಿ ಡಾ.ರಾಜ್‌, ಕಲ್ಯಾಣ್‌ಕುಮಾರ್‌, ಉದಯ್‌ಕುಮಾರ್‌, ಹೊನ್ನಪ್ಪ ಭಾಗವತರ್‌, ತೆಲುಗಿನಲ್ಲಿ ನಾಗೇಶ್ವರರಾವ್‌, ಎನ್‌.ಟಿ. ರಾಮರಾವ್‌ ತಮಿಳಿನಲ್ಲಿ ಜೆಮಿನಿ, ಶಿವಾಜಿ, ಎಂ.ಜಿ. ಆರ್‌ ಹಿಂದಿಯಲ್ಲಿ ರಾಜೇಂದ್ರಕುಮಾರ್‌, ಶಮ್ಮೀಕಪೂರ್‌ ಮೊದಲಾದವರೊಂದಿಗೆ ನಟಿಸಿದ ಹೆಗ್ಗಳಿಗೆ ಇವರದು.

  ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್‌ಮಾಸ್ಟರ್‌, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಕಥಾಸಂಗಮ, ಬಬ್ರುವಾಹನ, ಭಾಗ್ಯವಂತರು, ಕಿತ್ತೂರುಚೆನ್ನಮ್ಮ, ದೇವಸುಂದರಿ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.

  ಚನ್ನಪಟ್ಟಣ ತಾಲೂಕಿನ ದಶಾವರ ಗ್ರಾಮದ ಭೈರಪ್ಪ ಮತ್ತು ರುದ್ರಮ್ಮ ದಂಪತಿಗಳ ಪುತ್ರಿ ಸರೋಜದೇವಿ. ತಂದೆ ಭೈರಪ್ಪ ಪೋಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದಲೇ ಲಲಿತಕಲೆಗಳಲ್ಲಿ ಆಸಕ್ತಿ ಇದ್ದ 13 ವರುಷದ ಬಾಲೆಯನ್ನು ಶಾಲೆಯ ಕಾರ್ಯಕ್ರಮವೊಂದರಲ್ಲಿ ಕಂಡ ಹೊನ್ನಪ್ಪ ಭಾಗವತರ್‌ 1955ರಲ್ಲಿ ತಮ್ಮ ‘ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ನಟಿಸುವ ಅವಕಾಶವನಿತ್ತರು. ಈ ಚಿತ್ರ ರಾಷ್ಟ್ರಪ್ರಶಸ್ತಿ ಗಳಿಸಿತು.

  1955 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣ ಮಾಡಿದ ಸರೋಜ 80ರ ದಶಕದವರೆಗೂ ಸುಮಾರು 180 ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಸಿನಿರಂಗದಲ್ಲಿ ಸುಭದ್ರ ಸ್ಥಾನ ಉಳಿಸಿಕೊಂಡಿದ್ದರು. ತಮ್ಮ ಗಂಭೀರ ಪಾತ್ರಗಳ ಮೂಲಕವೇ ಕನ್ನಡಿಗರ ಮನ ಗೆದ್ದರು.

  1967ರಲ್ಲಿ ಎಂಜಿನಿಯರ್‌ ಶ್ರೀಹರ್ಷ ಅವರನ್ನು ವರಿಸಿದ ಸರೋಜಾದೇವಿ 1969ರಲ್ಲಿ ರಷ್ಯ ಸರ್ಕಾರದ ಆಮಂತ್ರಣದ ಮೇರೆಗೆ ರಷ್ಯದಲ್ಲಿ ನಡೆದ 4ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಸರೋಜಾದೇವಿ ಅವರ ಕಲಾಸೇವೆಯನ್ನು ಪರಿಗಣಿಸಿ 1969 ರಲ್ಲಿ ಇವರಿಗೆ ಕೇಂದ್ರ ಸರಕಾರ ಪದ್ಮಶ್ರೀ ಹಾಗೂ 92ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜ್ಯೋತ್ಸವ, ಫಿಲ್ಮ್‌ಫೇರ್‌, ಎಂಜಿಆರ್‌, ಎಂಟಿಆರ್‌ ಹೀಗೆ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಇವರದು.

  ಕರ್ನಾಟಕ ಸ್ಟೇಟ್‌ ಫಿಲ್ಮ್‌ ಇಂಡಸ್ಟ್ರಿ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಹಾಗೂ ಕಂಠೀರವ ಸ್ಟುಡಿಯೋ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಇವರು ಪಾರ್ಲಿಮೆಂಟಿನ ಮೆಂಬರ್‌ ಕೂಡ ಆಗಿದ್ದರು. ಭಾರತೀಯ ಸಂಸ್ಕೃತಿ ವಿಶ್ವ ಶ್ರೇಷ್ಠವಾಗಿದ್ದು, ಕಳಪೆ ಚಿತ್ರಗಳನ್ನೂ, ಭ್ರಷ್ಟ ರಾಜಕಾರಣಿಗಳನ್ನೂ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಮುಕ್ತವಾಗಿ ಹೇಳಿದ್ದರು.

  2006ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಡಾಕ್ಟರೇಟ್‌ ಗೌರವ ಪಡೆದಿರುವ ಸರೋಜಾದೇವಿಯವರು ಮಗಳು ಭುವನೇಶ್ವರಿ ಹಾಗೂ ತಾಯಿ ರುದ್ರಮ್ಮನವರ ಹೆಸರಿನಲ್ಲಿ ಸ್ವಯಂ ಸಂಸ್ಥೆಗಳಿಗೆ, ತಮ್ಮ ಹುಟ್ಟೂರಿನಲ್ಲಿ ಶಾಲೆಯಾಂದನ್ನೂ ಕಟ್ಟಿಸಿದ್ದಾರೆ, ಬಡವರಿಗೆ ಆರೋಗ್ಯ ತಪಾಸಣೆ, ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more