»   » ಮೈ ಅಟೋಗ್ರಾಫ್‌: ಸುದೀಪ್‌ರಿಂದ ಇನ್ನೊಂದು ರಿಮೇಕ್‌

ಮೈ ಅಟೋಗ್ರಾಫ್‌: ಸುದೀಪ್‌ರಿಂದ ಇನ್ನೊಂದು ರಿಮೇಕ್‌

Subscribe to Filmibeat Kannada

ರಿಮೇಕ್‌ ಬಗ್ಗೆ ಕೆಂಡಕಾರಿದ್ದ ಸುದೀಪ್‌ ಈಗ ಮತ್ತೆ ರಿಮೇಕ್‌ನತ್ತ ವಾಲಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಚಾಲ್ತಿಯಲ್ಲಿರುವ ನಟರಲ್ಲಿ ಒಬ್ಬರಾದ ಸುದೀಪ್‌ ತಮ್ಮ ಚಿತ್ರಬದುಕಿನ ಮತ್ತೊಂದು ಮಜಲನ್ನು ಪ್ರವೇಶಿಸುತ್ತಿದ್ದು, ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ತಮ್ಮ ಚೊಚ್ಚಲ ನಿರ್ದೇಶನಕ್ಕೆ ತಮಿಳಿನ ‘ಆಟೋಗ್ರಾಫ್‌’ ಚಿತ್ರವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಕನ್ನಡದಲ್ಲಿ ‘ ಮೈ ಆಟೋಗ್ರಾಫ್‌’ ಹೆಸರಿನಲ್ಲಿ ಚಿತ್ರವನ್ನು ರಿಮೇಕ್‌ ಮಾಡುವ ಉದ್ದೇಶ ಅವರದು.

ಚಿತ್ರದ ನಾಯಕಿಯಾಗಿ ಮೀನಾರನ್ನು ಸುದೀಪ್‌ ಆಯ್ಕೆ ಮಾಡಿದ್ದಾರೆ. ಸ್ವಾತಿಮುತ್ತು ನಂತರ ಮೀನಾ ಮತ್ತೆ ಸುದೀಪ್‌ ಜೋಡಿಯಾಗಿ ನಟಿಸುತ್ತಿದ್ದಾರೆ. ಶ್ರೀನಿವಾಸ ಮೂರ್ತಿ ಮುಖ್ಯಪಾತ್ರದಲ್ಲಿದ್ದಾರೆ. ನಿರ್ದೇಶನದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಗಭೂಮಿ ನಟರನ್ನು ಬಳಸಿಕೊಳ್ಳಲು ಸುದೀಪ್‌ ನಿರ್ಧರಿಸಿದ್ದಾರೆ.

ಕಿಚ್ಚ ಕ್ರಿಯೇಷನ್‌ನ ಮೈ ಆಟೋಗ್ರಾಫ್‌ ಚಿತ್ರದ ಚಿತ್ರೀಕರಣವನ್ನು ನಾಲ್ಕು ಹಂತಗಳಲ್ಲಿ ಪೂರ್ಣಗೊಳಿಸಲು ಸುದೀಪ್‌ ಯೋಜನೆ ರೂಪಿಸಿದ್ದಾರೆ.

ನಗರದ ಸರೋವರ್‌ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್‌ಗೆ ಚಿತ್ರದ ಬಗ್ಗೆ ಬಹಳ ನಿರೀಕ್ಷೆಗಳಿವೆ. ಸ್ವಮೇಕ್‌-ರಿಮೇಕ್‌ ಎನ್ನುವುದಕ್ಕಿಂತಲೂ ಹೃದಯಕ್ಕೆ ತಟ್ಟುವಂತಹ ಚಿತ್ರನೀಡುವುದು ನನ್ನ ಉದ್ದೇಶ. ಸ್ವಾತಿಮುತ್ತು, ಹುಚ್ಚ ಚಿತ್ರದಂತೆಯೇ ಮೈ ಆಟೋಗ್ರಾಫ್‌ ಜನಮಾನಸದಲ್ಲಿ ನೆಲೆಸಿದರೆ ನನ್ನ ಶ್ರಮ ಸಾರ್ಥಕ ಎನ್ನುತ್ತಾರೆ ಸುದೀಪ್‌.

ಸ್ವಾತಿಮುತ್ತು ಚಿತ್ರದ ತಮ್ಮ ಪಾತ್ರವನ್ನು ಜನ ಗುರ್ತಿಸಲಿಲ್ಲವೆಂದು ರಿಮೇಕ್‌ ಬಗ್ಗೆ ಅತೃಪ್ತಿಹೊಂದಿದ್ದ ಸುದೀಪ್‌, ರಿಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಈ ಹಿಂದೆ ಘೋಷಿಸಿದ್ದರು. ವಿಚಾರ ಏನೇ ಇರಲಿ ನಿರ್ದೇಶಕರಾಗುತ್ತಿರುವ ಸುದೀಪ್‌ಗೆ ಬೆಸ್ಟ್‌ ಆಫ್‌ ಲಕ್‌ ಎನ್ನೋಣವೇ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada