»   » ರಾಮು ಪ್ರಾಪರ್ಟಿ ‘ಹಾಲಿವುಡ್‌’ನಲ್ಲಿ ಫೆಲಿಸಿಟಿ !

ರಾಮು ಪ್ರಾಪರ್ಟಿ ‘ಹಾಲಿವುಡ್‌’ನಲ್ಲಿ ಫೆಲಿಸಿಟಿ !

Posted By: Staff
Subscribe to Filmibeat Kannada

ಮೊನಿಷಾ ಕೊಯಿರಾಲ, ಜ್ಯೋತಿಕಾ, ಕಾನಿಷ್ಕಾ- ಈ ಎಲ್ಲಾ ನಾಯಕಿಯರಿಗೆ ಸಂದಿರುವ ಅಡ್ವಾನ್ಸ್‌ ಹಣ ಇನ್ನೂ ಪೂರಾ ವಾಪಸ್ಸಾಗಿಲ್ಲ. ಆದರೂ ರಾಮು ಚಿಂತ್ಯಾಕೆ ಮಾಡುತೀ ಫೆಲಿಸಿಟಿಯಿದ್ದಾಳೆ ಅಂದರು. ತಮ್ಮ ಕನಸಿನ 'ಹಾಲಿವುಡ್‌" ಚಿತ್ರಕ್ಕೆ ರೆಕ್ಕೆ-ಪುಕ್ಕ ಹಚ್ಚಿದರು.

ಉಪೇಂದ್ರ ತ್ರಿಪಾತ್ರಧಾರಿಯಾಗಿರುವ 'ಹಾಲಿವುಡ್‌"ಗೆ ಫೆಲಿಸಿಟಿ ನಾಯಕಿ. ಟಿವಿ, ಸಿನಿಮಾದ ಅಭಿನಯದ ಗಂಧವಿರುವ ಆಸ್ಟ್ರೇಲಿಯನ್‌ ಚೆಲುವೆ. ದಿನೇಶ್‌ ಬಾಬು ಹೇಳುತ್ತಾರೆ- ಈಕೆಯ ಅಭಿನಯ ನೋಡಿ ಮೈ ಮರೆವೆ. ಕೇವಲ 30 ಲಕ್ಷ ರುಪಾಯಿ ಸಂಭಾವನೆ !

ದೇಶೀ ನಾಯಕಿಯರಿಗೆ ಇದು ದೊಡ್ಡ ಮೊತ್ತವೇ ಇರಬಹುದು. ಆದರೆ ಫಿಲಿಸಿಟಿಯಂಥಾ ಕಾಂಗರೂ ನಾಡಿನ ಚೆಲುವೆಗೆ ಅಂಥಾ ಭಾರೀ ಸಂಭಾವನೆಯೇನಲ್ಲ. ರೀಲುಗಳ ಸುತ್ತುವ ಮುನ್ನವೇ ಕೋಟಿ ಸುರಿದಿರುವ ರಾಮು ಕೆಂಪಗಾಗಿದ್ದಾರೆ. ಹಾಗಂತ ರಂಗಾಗಿದ್ದಾರೆ ಎಂದೇನಲ್ಲ. ಹಾಲಿವುಡ್‌ಗೆ ಸಿಕ್ಕಿರುವ ವೇಗ, ಅದರ ವಿಭಿನ್ನತೆಯ ಖದರು ಹಾಗಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡು, ಅಮೆರಿಕಾಗಳಲ್ಲೇ ಚಿತ್ರದ ಬಹುಪಾಲು ಶೂಟಿಂಗ್‌. ಚಿತ್ರದಲ್ಲಿ ಮನುಷ್ಯ ಹೇಳಿದಂತೆ ಕೇಳುವ ವಿದೇಶೀ ಚಿಂಪಾಂಜಿ ಕೂಡ ಇದೆ. ಉಪ್ಪಿ ತ್ರಿಪಾತ್ರಗಳ ಪೈಕಿ ಒಂದು ರೋಬೋ. ರೋಬೋ ಉಪ್ಪಿ ಹಾಗೂ ಚಿಂಪಾಂಜಿ- ಎರಡರ ಮಾತಿಗೂ ಗ್ರಾಫಿಕ್‌ ತಂತ್ರ, ಮ್ಯಾಡ್‌ ಮಾಕ್ಸ್‌ ಚಿತ್ರದ ಸಾಹಸ ಸಂಯೋಜಕನ ಹೊಡೆದಾಟದ ವರಸೆಗಳು, ವಿದೇಶೀ ಸಹಕಲಾವಿದರ ನೃತ್ಯ...ಹಾಲಿವುಡ್‌ನಲ್ಲಿ ಇನ್ನೂ ಏನೇನೋ ಇದೆ ಅನ್ನುವಾಗ ರಾಮು ಮುಖ ಇನ್ನಷ್ಟು ಕೆಂಪು.

ಹಾಲಿವುಡ್‌ನ ವಿಷಯವೂ ಹಾಗೆ...ಕೆಂಪಾದವೋ ಎಲ್ಲಾ ಕೆಂಪಾದವೋ ಅನ್ನುವ ಹಾಗೆ. ಕೆಂಪು ಕೆಂಪು ಚೆಲುವೆಯರು, ಉಪ್ಪಿಯ ಕೆಂಪು ಧಿರಿಸು, ಎಲ್ಲಕ್ಕೂ ಮಿಗಿಲು ಫೆಲಿಸಿಟಿಯ ಪೆಂಪು. ಇವೆಲ್ಲಕ್ಕೂ ದಿನೇಶ್‌ ಬಾಬು ತೀರ್ಪು. ಮುರಳಿ ಮೋಹನ್‌ಗೆ ಖೊಕ್‌ ಕೊಟ್ಟ ನಂತರ ರಾಮು ದಿನೇಶ್‌ ಬಾಬು ಅವರನ್ನು ನಿರ್ದೇಶಕನ ಸೀಟ್‌ ಮೇಲೆ ತಂದು ಕೂರಿಸಿದರು. ಸ್ಪಾಟ್‌ನಲ್ಲೇ ಸಂಭಾಷಣೆ ಬರೆಯುವ (ಬಾಬು ಬರೆಯೋದು ಇಂಗ್ಲಿಷ್‌ನಲ್ಲಿ. ಅದನ್ನು ಅರ್ಹರು ಕನ್ನಡಕ್ಕೆ ಅನುವಾದಿಸುತ್ತಾರೆ!) ದಿನೇಶ್‌ ಬಾಬು ಹಾಲಿವುಡ್‌ ಕತೆಯನ್ನು ತಮ್ಮ ಟೇಸ್ಟಿಗೆ ತಕ್ಕಂತೆ ಬದಲಿಸಿದರು. ನವಿರು ಹಾಸ್ಯದ ಮೆರುಗು ಕೊಟ್ಟರು. ಫೆಲಿಸಿಟಿಗೆ ಮಾತು ಹೇಳಿಕೊಟ್ಟರು!

ಹಾಲಿವುಡ್‌ ತಂಡ ಕರ್ನಾಟಕಕ್ಕೆ ವಾಪಸ್ಸಾಗಿದೆ. ಬೆಂಗಳೂರಿನಲ್ಲಿ ಶೂಟಿಂಗ್‌ ಮುಂದುವರೆಯಲಿದೆ. ಫೆಲಿಸಿಟಿ ಕೂಡ ವಿಮಾನ ಏರಿ ಇಲ್ಲಿಗೆ ಬರಬೇಕು. ಆದರೆ ಉಪ್ಪಿ ಎಲ್ಲಿ ?- ರಾಮು ಅವರನ್ನು ಕೇಳಿದರೆ, ಅಲ್ಲೇ ಇದ್ದಾರೆ, ಇನ್ನೂ ಬಂದಿಲ್ಲ ಅಂತ ಮತ್ತೆ ಕೆಂಪಾಗುತ್ತಾರೆ. ಏನನ್ನೋ ಮುಚ್ಚಿಡುತ್ತಾರೆ. ಉಪ್ಪಿ ಹೊರದೇಶದಲ್ಲಿ ಮಾಡುತ್ತಿರುವುದಾದರೂ ಏನು? ಸಸ್ಪೆನ್ಸ್‌ !

English summary
Australian actress Felicity is Uppis heroine in Hollywood
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada