For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಪತ್ರಕರ್ತರ ಬದುಕು- ಬವಣೆ

  By Staff
  |

  *ದಟ್ಸ್‌ಕನ್ನಡ ಬ್ಯೂರೋ

  ಭದ್ರವಾದ ಸಂಘ ಹಾಗೂ ಬಲವಾದ ಒಂದು ಫಂಡು ಕಟ್ಟಿಕೊಳ್ಳದ ಕೆಲವೇ ಕೆಲವರ ಪೈಕಿ ಕನ್ನಡ ಸಿನಿಮಾ ಪತ್ರಕರ್ತರು ಮತ್ತು ಚಿತ್ರ ನಿರ್ಮಾಪಕರು ಮುಂದಿನ ಸಾಲಲ್ಲಿ ನಿಲ್ಲುತ್ತಾರೆ.

  ಒಬ್ಬ ನಿರ್ಮಾಪಕ ಹತ್ತಾರು ಹಿಟ್‌ ಚಿತ್ರಗಳನ್ನು ಕೊಟ್ಟು , ಆಮೇಲೆ ಇದ್ದಬದ್ದ ಲಾಭವನ್ನೆಲ್ಲ ಒಂದೇ ಚಿತ್ರದ ಮೇಲೆ ಸುರಿದು, ಅವನ ದುರದೃಷ್ಟಕ್ಕೆ ಅದು ನೆಲಕಚ್ಚಿ ಆತ ಏನಾದರೂ ಫುಟ್‌ಪಾತಿಗೆ ಬಿದ್ದರೆ ಬೆರಳು ಕೊಟ್ಟು ಎಬ್ಬಿಸಲು ಯಾರೂ ಬರೋದಿಲ್ಲ. ಅಂತೆಯೇ ಬಣ್ಣದ ಲೋಕವನ್ನು ಅಕ್ಷರವಾಗಿಸುವ ಸಿನಿಮಾ ಪತ್ರಕರ್ತನ ಸ್ಥಿತಿ.

  ಗ್ಲ್ಯಾಮರ್‌ ಜಗತ್ತನ್ನು ಹತ್ತಿರದಿಂದ ನೋಡುತ್ತಾ, ಯಥಾ ಸಾಮರ್ಥ್ಯ ಸಿನಿಮಾ ಪುಟಗಳನ್ನು ಜೀವಗೊಳಿಸುವ ಸಿನಿಮಾ ಪತ್ರಕರ್ತನ ಸ್ಥಾನಮಾನ ಪೇಪರ್‌ ಆಫೀಸಿನಲ್ಲಿ ಅಷ್ಟಕ್ಕಷ್ಟೆ. ಯಾವ ಡೆಸ್ಕಿಗೂ ಸಲ್ಲದವನು ಇಲ್ಲಿ ಕಂಡದ್ದ ಕಕ್ಕುತ್ತಾನೆ ಅಂತ ಕಾಲೆಳೆದು ಮಾತಾಡುವವರಿಗೂ ಕಡಿಮೆಯಿಲ್ಲ. ಭದ್ರತೆಯ ಪರಿವೆಯನ್ನೂ ಮರೆತು, ಕಿರಿಕ್ಕುಗಳ ಮುಳ್ಳಿನ ಹಾದಿಯಲ್ಲಿ ಏಗುವ ಸಿನಿಮಾ ಪತ್ರಕರ್ತನಿಗೆ ಅಕಸ್ಮಾತ್‌ ಏನಾದರೂ ಆದರೆ ? ದೇವರೇ ಗತಿ ! ವ್ಯಂಗ್ಯದಲ್ಲೇ ಬದುಕುವ ಸಿನಿಮಾ ಪತ್ರಕರ್ತರ ಈ ಸ್ಥಿತಿಗೆ ಯಾರು ಕಾರಣ ಅಂತ ಯೋಚಿಸಿದರೆ, ಖುದ್ದು ಅವರವರೇ ಎಂಬ ಉತ್ತರ ಬಿಟ್ಟರೆ ಬೇರೇನೂ ಕಾಣದು.

  ಆಗಸ್ಟ್‌ 18, ಸೋಮವಾರ ಬೆಳಗಿನ ಜಾವ ಅಕಸ್ಮಾತ್ತಾಗಿ ಅಪಘಾತದಲ್ಲಿ ತೀರಿಕೊಂಡ ಪತ್ರಕರ್ತ ಮಿತ್ರ ಮನೋಹರ ತೋಳಹುಣಸೆಗೆ ಶ್ರದ್ಧಾಂಜಲಿ ಅರ್ಪಿಸಲು ಅದೇ ದಿನ ಸಾಯಂಕಾಲ ಬೆಂಗಳೂರಿನ ಪ್ರೆಸ್‌ ಕ್ಲಬ್ಬಿನ ಹೆಚ್ಚಿನ ಮನೆಯಲ್ಲಿ ಸೇರಿದ್ದ ಸಭೆಯಲ್ಲಿ ಭದ್ರತೆ, ಗ್ರೂಪ್‌ ಇನ್ಶೂರೆನ್ಸು ವಗೈರೆ ಮಾತುಗಳು ತೇಲಿಬಂದವು. ಮನೋಹರ ಬಡ ಪತ್ರಕರ್ತ. ಆತನ ಹೆಂಡತಿ ಹಳ್ಳಿಯಾಕೆ. ನಾಲ್ಕು ವರ್ಷದ ಗಂಡು ಮಗು ಇದೆ. ಈಗವರ ಜೀವನ ಹೇಗೆ ಸಾಗಬೇಕು?

  ಈ ಪ್ರಶ್ನೆಗೆ ಹಣ ಸಂಗ್ರಹಿಸುವ ಮೂಲಕ ಉತ್ತರ ಕೊಡಲು ಸಿನಿಮಾ ಪತ್ರಕರ್ತರ ಸಂಘ ‘ಬಳಗ’ ಟೊಂಕ ಕಟ್ಟಿ ನಿಂತಿತು. ಸಿನಿಮಾ ಪ್ರಚಾರಕರ್ತರು ಸಾಥಿಯಾದರು. ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪನವರನ್ನು ಕರೆಸಿ, ವಿಷಯ ತಿಳಿಸಿದರು. ಚಿತ್ರೋದ್ಯಮದ ಉಳ್ಳವರಿಗೂ ಮನೋಹರ ತೋಳಹುಣಸೆ ಸಾವಿನ ಸುದ್ದಿ ಮುಟ್ಟಿತು.

  ಮನೋಹರ ತೋಳಹುಣಸೆ ಪಟಕ್ಕೆ ಹಾರ ಹಾಕಿದ ಅಲ್ಲಂ ವೀರಭದ್ರಪ್ಪ, ಸರ್ಕಾರದಿಂದ ಏನೂ ಸಾಧ್ಯವೋ ಅದೆಲ್ಲ ಸಹಾಯ ಮಾಡಿಕೊಡುವುದಾಗಿ ಭರವಸೆ ಕೊಟ್ಟರು. ಪಿಆರ್‌ಓಗಳಾದ ಸುಧೀಂದ್ರ, ನಾಗೇಂದ್ರ, ರಾಮಕೃಷ್ಣ ತಲಾ 5 ಸಾವಿರ ರುಪಾಯಿ ಸಹಾಯ ಹಸ್ತ ಚಾಚಿದರು. ಮೌನಿ ಚಿತ್ರದ ನಿರ್ದೇಶಕ ಲಿಂಗದೇವರು ನನ್ನದೂ 5 ಸಾವಿರ ಅಂತ ಫೋನಲ್ಲಿ ಹೇಳಿದರು. ನಿರ್ಮಾಪಕ ಸೂರಪ್ಪ ಬಾಬು ಮತ್ತು ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಪಿ.ಎಲ್‌.ಇಂದ್ರಜಿತ್‌ ತಲಾ 10 ಸಾವಿರ ರುಪಾಯಿ ಕೊಡುವುದಾಗಿ ಹೇಳಿದರು. ನಿರ್ಮಾಪಕರ ಸಂಘದ ಎರಡನೇ ಹೋಳಿನ ನಾಯಕ ಕುಮಾರಸ್ವಾಮಿ ಕೂಡ 10 ಸಾವಿರ ರುಪಾಯಿ ಕೊಡುವುದಾಗಿ ಫೋನಲ್ಲಿ ‘ಬಳಗ’ಕ್ಕೆ ಹೇಳಿದ್ದರು.

  ಇಷ್ಟೆಲ್ಲ ಸಹಾಯಕ್ಕೆ ದೊಡ್ಡ ಕಾಣಿಕೆಯನ್ನು ಸೇರಿಸುವುದಾಗಿ ಹೇಳಿದ್ದು ನಟ ಉಪೇಂದ್ರ. ಖುದ್ದು ಉಪೇಂದ್ರ ಪ್ರೆಸ್‌ ಕ್ಲಬ್ಬಿಗೆ ಬಂದು ಕಷ್ಟ ವಿಚಾರಿಸಿಕೊಂಡು, 50 ಸಾವಿರ ರುಪಾಯಿ ನೆರವು ಕೊಡುವುದಾಗಿ ಹೇಳಿದರು. ‘ಒಂದು ಫಂಡು ಅಂತ ಮಾಡ್ಕೊಳ್ಳಿ. ಆಪತ್ಕಾಲದಲ್ಲಿ ಆಗುತ್ತದೆ ಅಂತ ವರ್ಷಗಳ ಹಿಂದೆಯೇ ಹೇಳಿದ್ದೆ, ನೀವು ಯಾರೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ’ ಅಂತ ಮತ್ತೆ ಕಿವಿಮಾತು ಹೇಳಿದರು.

  ಸುಖದ ಸಮಯದಲ್ಲಿ ‘ಬಳಗ’ ಕಟ್ಟಿದಾಗ ಯಾರೋ ಒಬ್ಬ ಮಿತ್ರ ಸೈಟು ಕೊಡುವುದಾದರೆ ಮಾತ್ರ ಸಂಘಕ್ಕೆ ಸೇರುತ್ತೇನೆ ಅಂತ ಜೋಕು ಹೊಡೆದಿದ್ದನ್ನು ದಟ್ಸ್‌ಕನ್ನಡ ಸಂಪಾದಕ ಎಸ್ಕೆ ಶಾಮಸುಂದರ ನೆನೆಯಲು ಕಾರಣವಿತ್ತು. ಸಂಕಟ ಬಂದಾಗ ಮಾತ್ರ ವೆಂಕಟರಮಣನ ನೆನೆಯದೆ, ಸುಖವಾಗಿದ್ದಾಗಲೂ ಕಷ್ಟದ ಗಳಿಗೆ ಎದುರಿಸಲು ಭೂಮಿಕೆ ಹಾಕಿಕೊಳ್ಳಬೇಕು ಅನ್ನೋದು ಶಾಮ್‌ ಕಿವಿಮಾತು.

  ಇದೇ ದಿನ ಬೆಳಗ್ಗೆ ಆಕಾಶ್‌ ಆಡಿಯೋದಲ್ಲಿ ವಿಷ್ಣುವರ್ಧನ್‌ ಅಭಿನಯದ ‘ಕದಂಬ’ ಚಿತ್ರದ ಹಾಡಿನ ಧ್ವನಿ ಮುದ್ರಣ ಮುಹೂರ್ತವಿತ್ತು. ಅಲ್ಲಿ ವಿಷ್ಣುವರ್ಧನ್‌ ಮಾತಾಡಿ, ನಸುಕು ವೇಳೆಯಲ್ಲಿ ಕಾರು ಪ್ರಯಾಣ ಒಳ್ಳೆಯದಲ್ಲ ಎಂಬ ಸಲಹೆ ಕೊಟ್ಟರು. ಕಲಾವಿದರ ಸಂಘ- ಸ್ನೇಹಲೋಕದಿಂದ ಮನೋಹರ್‌ ಕುಟುಂಬಕ್ಕೆ ಒಂದು ಫಂಡನ್ನು ರಚಿಸಲಿದೆ ಎಂದರು. ಮನೋಹರ್‌ ಗಂಡು ಮಗುವಿನ ಓದಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಭರವಸೆ ಕೊಟ್ಟರು.

  ಫಂಡಿನ ಸಂಗ್ರಹಣೆಯಿಂದ ಹಿಡಿದು ವಿಲೇವಾರಿವರೆಗೆ ಏನೇನು ಮಾಡಬೇಕು ಎಂಬುದನ್ನು ‘ಬಳಗ’ ಸದಸ್ಯರು ಗಂಭೀರವಾಗಿ ಚರ್ಚಿಸಿದರು. ಮಧ್ಯೆ ಮಧ್ಯೆ ಕೆಲವರು ಮನೋಹರ್‌ ಒಳ್ಳೆಯತನ ನೆನೆದು ಗದ್ಗದಿತರಾಗುತ್ತಿದ್ದರು.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X