»   » ಚಿಕಿತ್ಸೆಗಾಗಿ ಸಹೃದಯರ ನೆರವಿನ ನಿರೀಕ್ಷೆಯಲ್ಲಿರುವ ಆನಂದ್‌

ಚಿಕಿತ್ಸೆಗಾಗಿ ಸಹೃದಯರ ನೆರವಿನ ನಿರೀಕ್ಷೆಯಲ್ಲಿರುವ ಆನಂದ್‌

Posted By: Staff
Subscribe to Filmibeat Kannada

ಹಾಸ್‌ಮಟ್‌ ಕೀಲು ಮತ್ತು ಮೂಳೆ ಚಿಕಿತ್ಸೆ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಸಹೃದಯರ ನೆರವಿನ ನಿರೀಕ್ಷೆಯಲ್ಲಿರುವ ಈ ಸಿನಿಮಾ ವ್ಯಕ್ತಿಯ ಹೆಸರು ಆರ್‌.ಆನಂದ್‌. ಕೆಲಸ ಹುಡುಕಿಕೊಂಡು ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬರುವ ನೂರಾರು ಯುವಕರಂತೆ, ಶಿವಮೊಗ್ಗ ಸಮೀಪದ ಹಳ್ಳಿಯಿಂದ ಹದಿನೈದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಆನಂದ್‌ ನೆಲೆ ಕಂಡಿದ್ದು ಸಿನಿಮಾದಲ್ಲಿ . ಅಸಿಸ್ಟೆಂಟ್‌ ಕೆಮರಾಮನ್‌ ರೂಪದಲ್ಲಿ.

ಆನಂದ್‌ ಮಾಡಿದ್ದು ಒಂದೆರಡು ಕೆಲಸಗಳಲ್ಲ : ಹೊಟೇಲ್‌ ಮಾಣಿ, ಎಲೆಕ್ಟ್ರಿಷಿಯನ್‌, ಸ್ಥಳೀಯ ನಾಟಕಗಳಿಗೆ ಜಟಕಾ ಗಾಡಿಯಲ್ಲಿ ಪ್ರಚಾರ .. ಹೀಗೆ ಅನೇಕ ವೃತ್ತಿಗಳಲ್ಲಿ ಅನ್ನ ಅರಸಿದರು. ರಂಗಭೂಮಿ ಹಾಗೂ ಸಿನಿಮಾ ಆನಂದ್‌ಗೆ ನೆರಳು ಕೊಟ್ಟಿತು.

ಕನ್ನಡ ರಂಗಭೂಮಿ ಹಾಗೂ ಸಿನಿಮಾದ ಬಹುತೇಕ ಖ್ಯಾತನಾಮರೊಂದಿಗೆ ಆನಂದ್‌ ಕೆಲಸ ಮಾಡಿದ್ದಾರೆ. ಮಾಲ್ಗುಡಿ ಡೇಸ್‌ನಲ್ಲಿ ಶಂಕರ್‌ನಾಗ್‌, ನಾಗಮಂಡಲ ನಾಟಕದಲ್ಲಿ ಗಿರೀಶ್‌ಕಾರ್ನಾಡ್‌, ಸಿನಿಮಾ ನಾಗಮಂಡಲದಲ್ಲಿ ಜಿ.ಎಸ್‌.ಭಾಸ್ಕರ್‌ ಜೊತೆ ಆನಂದ್‌ ದುಡಿದಿದ್ದಾರೆ. ಪ್ರಶಸ್ತಿ ವಿಜೇತ ಛಾಯಾಗ್ರಾಹಕರಾದ ಮಾಪಾಕ್ಷಿ, ಜಿ.ಎಸ್‌.ಭಾಸ್ಕರ್‌ ಹಾಗೂ ಇತ್ತೀಚೆಗೆ ದ್ವೀಪ ಚಿತ್ರದ ಛಾಯಾಗ್ರಹಣಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಎಚ್‌.ಎಂ.ರಾಮಚಂದ್ರ ಅವರೊಂದಿಗೂ ಆನಂದ್‌ ಕೆಲಸ ಮಾಡಿದ್ದಾರೆ.
ಇದಿಷ್ಟೂ ಆನಂದ್‌ ಪರಿಚಯ.

ಕಳೆದ ಆಗಸ್ಟ್‌ 8 ರ ಗುರುವಾರ ಆನಂದ್‌ ಪಾಲಿಗೆ ಕರಾಳ ದಿನವಾಗಿತ್ತು . ಶೂಟಿಂಗ್‌ನಲ್ಲಿ ತೊಡಗಿದ್ದ ಆನಂದ್‌ 15 ಅಡಿ ಎತ್ತರದಿಂದ ಕೆಳಗೆ ಬಿದ್ದರು. ತಕ್ಷಣವೇ ಹಾಸ್‌ಮಟ್‌ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ಬೆನ್ನೆಲುಬು ಹಾಗೂ ಪಾದದ ಕೀಲು ಮುರಿದಿರುವುದಾಗಿ ಪರೀಕ್ಷಿಸಿದ ತಜ್ಞ ವೈದ್ಯರು ಹೇಳಿದ್ದಾರೆ. ಸದಾ ಪಾದರಸದಂತಿದ್ದ ಉತ್ಸಾಹದ ಚಿಲುಮೆ ಆನಂದ್‌ ಆಸ್ಪತ್ರೆಯ ಹಾಸಿಗೆಯಲ್ಲಿ ವಿಷಣ್ಣರಾಗಿ, ನಾಳಿನ ದಿನಗಳ ಚಿಂತೆಯಲ್ಲಿ ಮುಳುಗಿ ಮಲಗಿದ್ದಾರೆ.

ಪ್ರಸಿದ್ಧ ನಾಯಕ ನಟ ಪ್ರಕಾಶ್‌ ರೈ ಸ್ವಲ್ಪ ಹಣವನ್ನು ಸ್ಥಳದಲ್ಲಿಯೇ ನೀಡಿದ್ದಾರೆ. ನಿರ್ಮಾಪಕರು ಹಾಗೂ ತಾಂತ್ರಿಕ ಸಿಬ್ಬಂದಿ ಕೂಡ ಕೊಂಚ ಹಣ ಸಹಾಯ ಮಾಡಿದ್ದಾರೆ. ಆದರೆ ಆನಂದ್‌ ಚಿಕಿತ್ಸೆ ದೊಡ್ಡದಿದೆ. 2,50,000.00 (ಎರಡೂವರೆ ಲಕ್ಷ) ರುಪಾಯಿಗೂ ಹೆಚ್ಚು ಹಣ ಆಪರೇಷನ್‌ಗೆ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಹಾರೈಕೆಯ ಖರ್ಚು ಬೇರೆ. ಆನಂದ್‌ ದುಡಿಮೆಯನ್ನು ನಂಬಿಕೊಂಡ ಹೆಂಡತಿ ಹಾಗೂ 9 ವರ್ಷದ ಮಗುವಿನ ಬದುಕು ಸಾಗಬೇಕಿದೆ. ತಕ್ಷಣವೇ ಆಪರೇಷನ್‌ ನಡೆಯದಿದ್ದಲ್ಲಿ ಆನಂದ್‌ ಇನ್ನೆಂದೂ ಹಾಸಿಗೆಯಿಂದ ಮೇಲೇಳುವುದಿಲ್ಲ, ಮತ್ತೆಂದೂ ಸಿನಿಮಾಗೆ ಮರಳಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಆನಂದ್‌ ಬೆನ್ನಿಗೆ ನೀವು ಬಲ ತುಂಬಲಾರಿರಾ? ಆ ಮೂಲಕ ದಿಕ್ಕೆಟ್ಟ ಕುಟುಂಬವೊಂದನ್ನು ನಿಲ್ಲಿಸಲಾರಿರಾ?

ಆನಂದ್‌ ನಿಮ್ಮ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಚೆಕ್‌ ಅಥವಾ ನಗದು ರೂಪದಲ್ಲಿ ಸಹಾಯ ಸಲ್ಲಿಸಬಹುದು.

English summary
Help R.Anand to lead normal life

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada