»   » ಆಗಸ್ಟ್‌ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ

ಆಗಸ್ಟ್‌ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ

Posted By: Staff
Subscribe to Filmibeat Kannada

ಬೆಂಗಳೂರು : ನೂರಾರು ಭಾವಪೂರ್ಣ ಗೀತೆಗಳ ಮೂಲಕ ಕನ್ನಡ ಚಿತ್ರ ರಸಿಕರ ಮನಗೆದ್ದಿರುವ ಹಿರಿಯ ಗಾಯಕಿ ಎಸ್‌.ಜಾನಕಿ ಅವರು 'ಸಂಗೀತ ಗಂಗಾ" ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಂಗೀತ ಲೋಕಕ್ಕೆ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ 'ಸಂಗೀತ ಗಂಗಾ" ಪ್ರಶಸ್ತಿಯನ್ನು ನೀಡುವ ಮೂಲಕ ಗೌರವಿಸುವುದನ್ನು ನಗರದ ಸಂಗೀತಗಂಗಾ ಗಾಯನ ಸಂಸ್ಥೆ ತನ್ನ ಸಂಪ್ರದಾಯವಾಗಿಸಿಕೊಂಡಿದ್ದು, ಈ ಬಾರಿಯ ಪ್ರಶಸ್ತಿಯನ್ನು ಜಾನಕಿ ಅವರಿಗೆ ನೀಡಿದೆ. ಸಂಗೀತಗಂಗಾ ದಿವಂಗತ ಜಿ.ವಿ.ಅತ್ರಿ ಅವರ ಕನಸಿನ ಕೂಸು.

ಆಗಸ್ಟ್‌ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಂಗೀತಗಂಗಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಾನಕಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಸಂಗೀತಗಂಗಾದ ಅಧ್ಯಕ್ಷೆ ಹೇಮಾ ಪ್ರಸಾದ್‌ ಅವರು ಸೋಮವಾರ (ಆ.19) ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 8 ವರ್ಷಗಳಿಂದಲೂ ಸಂಗೀತಗಂಗಾ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಿದೆ. 5 ಸಾವಿರ ರುಪಾಯಿ ನಗದು ಹಾಗೂ ಸ್ಮರಣ ಫಲಕವನ್ನು ಪ್ರಶಸ್ತಿ ಹೊಂದಿದೆ. ಪಿ.ಬಿ.ಶ್ರೀನಿವಾಸ್‌, ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ವಿಜಯಭಾಸ್ಕರ್‌, ಕೆ.ಎಸ್‌.ನರಸಿಂಹಸ್ವಾಮಿ ಸೇರಿದಂತೆ ಹಲವು ಗಣ್ಯರಿಗೆ ಸಂಗೀತಗಂಗಾ ಪ್ರಶಸ್ತಿ ಈಗಾಗಲೇ ದೊರೆತಿದೆ. ಆಗಸ್ಟ್‌ 27 ರ ಸಮಾರಂಭವನ್ನು ಶಾಸಕ ಪಿಜಿಆರ್‌ ಸಿಂಧ್ಯಾ ಉದ್ಘಾಟಿಸುವರು. ಪಿ.ಬಿ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸ್ಪೀಕರ್‌ ಬಿ.ಎಲ್‌.ಶಂಕರ್‌, ಪಂಡಿತ್‌ ಆರ್‌.ವಿ.ಶೇಷಾದ್ರಿ ಗವಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.(ಇನ್ಫೋ ವಾರ್ತೆ)ಪೂರಕ ಓದಿಗೆ-

English summary
South Indian veteran playback singer S.Janaki to be honored with Sangeetha Ganga on August 27th, 2002

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada