ಜೀವಭಯದಲ್ಲಿರುವ ಜಗ್ಗೇಶ್ ಸಂದರ್ಶನ
- ವಿಘ್ನೕಶ್ವರ ಕುಂದಾಪುರ
ನಿಮಗೆ ಯಾರು ಜೀವ ಬೆದರಿಕೆ ಹಾಕಿರಬಹುದು?
ಮೊದಲೇ ನನ್ನ ಗ್ರಹಗತಿ ಕೆಟ್ಟಿದೆ. ಆ ಅನುಮಾನ ಬೇರೆ ಹೇಳಿ, ಬೆದರಿಕೆ ಹಾಕಿರುವವನು ಅಟಕಾಯಿಸಿಕೊಳ್ಳಲಿ ಅಂತೀರಾ?
ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ಕೊಡುವ ಸಮಿತಿಯಲ್ಲಿ ಭ್ರಷ್ಟಾಚಾರ ಇದೆ ಅಂತ ಖುಲ್ಲಂಖುಲ್ಲ ಹೇಳಿದ್ದಿರಿ. ಹಾಗೆ ಹೇಳಿದ್ದಕ್ಕೂ ನಿಮಗೆ ಬೆದರಿಕೆ ಬಂದದ್ದಕ್ಕೂ ಏನಾದರೂ ಸಂಬಂಧ ಇದೆಯಾ?
ಇರಬಹುದು. ಇಲ್ಲದಿರಲೂಬಹುದು. ಏನು ಅಂತ ನನಗೇ ಗೊತ್ತಿಲ್ಲ. ತನಿಖೆ ನಡೀತಿದೆ. ಪೊಲೀಸರೇ ಹೇಳ್ತಾರೆ.
ನಿಮ್ಮ ಈ ಪಾಟಿ ಸಿನಿಮಾಗಳು ಒಟ್ಟೊಟ್ಟಿಗೆ ಬರ್ತಿರೋದು ಯಾಕೆ?
ಸುಮಾರು ಒಂದು ವರ್ಷ ಮೇಕಪ್ ಚಿತ್ರದಲ್ಲೇ ನಾನು ಬ್ಯುಸಿಯಾಗಿದ್ದೆ. ಆಗ ಕಾಲ್‌ಷೀಟ್ ಕೇಳಿದ ನಿರ್ಮಾಪಕರಿಗೆಲ್ಲ ಕೊಟ್ಟಿದ್ದ ಮಾತನ್ನು ಈಗ ನಿಭಾಯಿಸುತ್ತಿದ್ದೇನೆ ಅಷ್ಟೆ.
ಇಷ್ಟೊಂದು ಸಿನಿಮಾಗಳು ಒಟ್ಟೊಟ್ಟಿಗೆ ಬಂದರೆ ಸ್ಟಾರ್‌ವ್ಯಾಲ್ಯೂ ಬಿದ್ಹೋಗಲ್ವೆ?
ಸಿನಿಮಾ ಹಿಟ್ ಆದರೆ ವ್ಯಾಲ್ಯೂ ಹೆಂಗೆ ಬೀಳುತ್ತೆ. ಕಾಸು ಇದ್ದೋನೆ ಬಾಸು ಚಿತ್ರ ‘ಯಾರ್ದೋ ದುಡ್ಡು...’ ಸಿನಿಮಾದಷ್ಟು ಜೋರಾಗಿ ಓಡ್ತಿಲ್ಲ ಅನ್ನೋದು ನಿಜ. ಆದರೆ ನಿರ್ಮಾಪಕರಿಗೆ ಲಾಸಂತೂ ಆಗಿಲ್ಲ. ಮನರಂಜನೆ ಇದ್ದರೆ ಸಿನಿಮಾ ನೋಡೋದಕ್ಕೆ ಜನ ಬಂದೇ ಬರ್ತಾರೆ ಅಂತ ನಂಬಿರೋನು ನಾನು.
ಒಂದೇ ಸಮ ಶೂಟಿಂಗ್‌ನಲ್ಲಿ ಬ್ಯುಸಿಯಾದರೆ, ಬರುವ ಎಲೆಕ್ಷನ್ನಲ್ಲಿ ನೀವು ನಿಲ್ಲೋದಕ್ಕಾಗತ್ತ?
ಅಷ್ಟೊತ್ತಿಗೆ ಪುರುಸೊತ್ತು ಮಾಡ್ಕೋತೀನಿ. ನಮ್ಮೂರು ತುರುವೇಕೆರೆನಲ್ಲೇ ಇಲೆಕ್ಷನ್‌ಗೆ ನಿಂತ್ಕೋತೀನಿ, ಟಿಕೇಟು ಕೊಡಿ ಅಂತ ಕೇಳ್ಕೊಂಡಿದೀನಿ.
ಅಲ್ಲಿ ನೀವು ನಿಂತರೂ ಸರಿ, ವಿರುದ್ಧವಾಗಿ ನಿಲ್ತೀನಿ ಅಂತ ಕೊಬ್ರಿ ಮಂಜು ಶರ್ಟಿನ ತೋಳು ಮಡಿಸುತ್ತಿದ್ದಾರಲ್ಲ ?
ಅವರು ನಿಂತ್ಕೊಳ್ಳೋ ವಿಷಯವಾಗಿ ನಾನು ಏನೂ ಹೇಳಲ್ಲ. ಕಳೆದ ಎರಡು ವರ್ಷದಿಂದ ನಾನು ರಾಜಕಾರಣಿಯಾಗಿ ಕಷ್ಟಪಟ್ಟು ಕೆಲಸ ಮಾಡಿದ್ದೀನಿ. ನಾನೇನೂ ಅಂತ ಜನರೇ ಹೇಳ್ತಾರೆ.
‘ಹುಚ್ಚನ ಮದುವೇಲಿ ಉಂಡವನೇ ಜಾಣ’, ‘ಯಾರಿಗೆ ಬೇಕು ಸಂಸಾರ’ ಚಿತ್ರಗಳ ಡಬ್ಬಿಂಗ್ ಕೆಲಸ ಮುಗಿದಿದೆ. ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ಅಷ್ಟರಲ್ಲೇ ನಿರ್ಮಾಪಕ ರಾಜೇಂದ್ರ ಅವರ ಇನ್ನೊಂದು ಚಿತ್ರಕ್ಕೆ ಜಗ್ಗಿ ಯೆಸ್ ಅಂದಿದ್ದಾರೆ. ಗಾದೆ, ನಾಣ್ಣುಡಿಗಳ ಟೈಟಲ್ಲಿನ ಚಿತ್ರಗಳು ಜಗ್ಗೇಶ್ ಪಾಲಿಗೆ ವರವಾಗಿರುವುದಂತೂ ದಿಟ. ಅಂದಹಾಗೆ, ಕಾಸು ಇದ್ದೋನೆ ಬಾಸು ಚಿತ್ರದ ಕಲೆಕ್ಷನ್ನು ಕ್ಲಾಸ್ ಚಿತ್ರ ಅಂತ ವಿಮರ್ಶೆ ಗಿಟ್ಟಿಸಿಕೊಂಡಿರುವ ಶಿವಣ್ಣನ ‘ನಂಜುಂಡಿ’ಗಿಂತ ಜಾಸ್ತಿ ಇರೋದನ್ನು ಏನನ್ನೋಣ?
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications