»   » ಆ ದಿನಗಳು : ಅಗ್ನಿ ಶ್ರೀಧರ್ ಬಿಚ್ಚಿಟ್ಟ ರೌಡಿಸಂನ ಸತ್ಯಕತೆ!

ಆ ದಿನಗಳು : ಅಗ್ನಿ ಶ್ರೀಧರ್ ಬಿಚ್ಚಿಟ್ಟ ರೌಡಿಸಂನ ಸತ್ಯಕತೆ!

Subscribe to Filmibeat Kannada


ಆ ದಿನಗಳು' ಹೆಸರು ವಿಚಿತ್ರವಾಗಿದೆ. ವಿಭಿನ್ನವಾಗಿದೆ. ಅದಕ್ಕೇ ಕುತೂಹಲ ಮೂಡಿಸುತ್ತಿದೆ. ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಹೆಸರಿಡುವಾಗ 'ಗಳು'ಎನ್ನುವುದನ್ನು ಬಳಸುವುದಿಲ್ಲ. ಹಾಗಿದ್ದರೆ ಮಾಸ್ ಸಿನಿಮಾ ಆಗುವುದಿಲ್ಲ ಎನ್ನುವುದು ಚಿಕ್ಕ ಕಾಮೆಂಟ್. ಆದರೆ ಇಲ್ಲಿ ಆದೇ ಫ್ಲಸ್ ಪಾಯಿಂಟ್ ಆಗುವ ಲಕ್ಷಣ ಕಾಣಿಸುತ್ತಿದೆ. ಈಗಾಗಲೇ ಗಾಂಧಿ ನಗರದಲ್ಲಿ ಒಂದು ಸಂಚಲನ ಹುಟ್ಟಿಸಿದೆ.

ಇದುವರೆಗೆ ಬಂದ ಭೂಗತ ಲೋಕದ ಚಿತ್ರಗಳಿಗಿಂತ ಈ ಚಿತ್ರ ಖಂಡಿತ ಬೇರೆಯಾಗಿರುತ್ತೆ ಎನ್ನುವ ಮಾತು ಕೇಳಿಬರುತ್ತಿದೆ. ಅದಕ್ಕೆ ಕಾರಣ ಚಿತ್ರ ಕತೆ. ಅಗ್ನಿ ಶ್ರೀಧರ್ ಬರೆದ 'ದಾದಾಗಿರಿಯ ದಿನಗಳು' ಕಾದಂಬರಿಯನ್ನು ಆಧರಿಸಿ ಇದು ತಯಾರಾಗಿದೆ. 1986ರಲ್ಲಿ ಭೂಗತ ಲೋಕದಲ್ಲಿ ಯಾರ್ಯಾರು ಇದ್ದರೋ ಅವರೇ ಪಾತ್ರಗಳಾಗಿದ್ದಾರೆ. ಅದಕ್ಕೆ ಒಂದು ಪ್ರೇಮ ಕತೆಯನ್ನು ಹೆಣೆದಿದ್ದಾರೆ. 1986ರಲ್ಲಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ ರೌಡಿಸಂನ ಸತ್ಯಕತೆ ಎಂದು ಜಾಹೀರಾತಿನಲ್ಲಿಯೇ ಹೇಳಲಾಗಿದೆ.

ಆ ದಿನಗಳಿಗೆ ಹೋಗಿ ಚಿತ್ರಿಸುವುದು ಸುಮ್ಮನೆ ಮಾತಲ್ಲ. ಅಂದಿನ ವಾತಾವರಣವನ್ನು ನಿರ್ದೇಶಕ ಚೈತನ್ಯ ಹಾಗೇ ಸೃಷ್ಟಿ ಮಾಡಿದ್ದಾರೆ. ವೇಷ ಭೂಷಣ, ವಾಹನಗಳು, ಮಾತಿನ ಓಘ, ಆಯುಧ.. ಎಲ್ಲವನ್ನೂ ಅದೇ ರೀತಿ ಬಳಸಿದ್ದಾರೆ. ಅದಕ್ಕೆ ಗಿರೀಶ್ ಕಾರ್ನಾಡ್ ಹೇಳುತ್ತಾರೆ: ಕತೆಯಲ್ಲೊಂದು ವೇಗವಿದೆ. ಅದಕ್ಕೆ ಎನರ್ಜಿ ತುಂಬುವ ಹುಡುಗನೇ ನಿರ್ದೇಶಕನಾಗಬೇಕಿತ್ತು. ಅದನ್ನು ನನ್ನ ಶಿಷ್ಯ ಚೈತನ್ಯ ಸಮರ್ಥವಾಗಿ ನಿಭಾಯಿಸಿದ್ದಾರೆ. ಕತೆ ನೋಡುತ್ತಾ ಥ್ರಿಲ್ ಆಗುತ್ತದೆ. ಎಡಿಟಿಂಗ್, ಲೈಟಿಂಗ್, ಸಂಭಾಷಣೆ,ಅಭಿನಯ ಎಲ್ಲವೂ ನೀಟಾಗಿದೆ.

ಶ್ರೀಥರ್ ಜೊತೆ ಕಾರ್ನಾಡ್ ಚಿತ್ರಕತೆ ಬರೆದಿದ್ದಾರೆ. ಭೂಗತ ಲೋಕವೆಂದರೆ ಬರೀ ಮಚ್ಚು, ಲಾಂಗ್ ಗಳ ಆರ್ಭಟ ಇರುತ್ತದೆ ಎಂದು ನೀವು ತಿಳಿದರೆ ತಪ್ಪು. ಆ ಲೋಕದ ತಣ್ಣನೆಯ ಕ್ರೌರ್ಯವನ್ನು ಹಸಿಹಸಿಯಾಗಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಿದೆ ಚಿತ್ರತಂಡ.

ಮೇಘ ಮೂವೀಸ್ ನ ಪ್ರಥಮ ಕಾಣಿಕೆ ಇದಾಗಿದ್ದು, ಸೈಯದ್ ಅಮಾನ್ ಮತ್ತು ರವೀಂದ್ರ ಚಿತ್ರದ ನಿರ್ಮಾಪಕರು. ಸುಮನಾ ಕಿತ್ತೂರು ಮತ್ತು ಕಲ್ಯಾಣ್ ಗೀತೆಗಳಿಗೆ ಇಳಯರಾಜ ಸಂಗೀತ ನೀಡಿದ್ದಾರೆ. ಚೇತನ್, ಅರ್ಚನಾ, ಶರತ್ ಲೋಹಿತಾಶ್ವ, ಅತುಲ್ ಕುಲಕರ್ಣಿ, ಆಶೀಶ್ ವಿದ್ಯಾರ್ಥಿ, ಗಿರೀಶ್ ಕಾರ್ನಾಡ್, ವಿನಯಾ ಪ್ರಕಾಶ್, ದಿನೇಶ್ ಮಂಗಳೂರು ತಾರಾಗಣದಲ್ಲಿದ್ದಾರೆ.

ಪ್ರೀತಿಯ ಕುಲುಮೆಯಲ್ಲಿ ನಲುಗಿದ ಭೂಗತ ಜಗತ್ತು ಎಂಬ ಉಪ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರ, ಶುಕ್ರವಾರ(ಅ.19) ತೆರೆಕಂಡಿದೆ. ಇದೇ ದಿನ ಬಿಡುಗಡೆಯಾಗಿರುವ ಇನ್ನೊಂದು ಚಿತ್ರ ಗೆಳೆಯ. ಈ ಚಿತ್ರದ ನಾಯಕ ಪ್ರಜ್ವಲ್. ನಟ ದೇವರಾಜ್ ಅವರ ಪುತ್ರ ಪ್ರಜ್ವಲ್,ಈ ಹಿಂದೆ 'ಸಿಕ್ಸರ್' ಮುಖಾಂತರ ಯುವ ಪ್ರೇಕ್ಷಕರ ಸೆಳೆದಿದ್ದರು.

ಬೆಂಗಳೂರಿನ ತ್ರಿವೇಣಿ, ಸಂಪಿಗೆ, ಅಂಜನ್, ಸಿದ್ದೇಶ್ವರ, ಪಿವಿಆರ್, ಮೈಸೂರಿನ ಲಿಡೋ, ತುಮಕೂರಿನ ಪ್ರಶಾಂತ್, ಚಿತ್ರದುರ್ಗದ ವೆಂಕಟೇಶ್ವರ, ದಾವಣಗೆರೆಯ ಪುಷ್ಪಾಂಜಲಿ, ಶಿವಮೊಗ್ಗದ ವಿನಾಯಕ, ಚಿಕ್ಕಮಗಳೂರಿನ ನಾಗಲಕ್ಷ್ಮಿ, ಮಂಗಳೂರಿನ ಸೆಂಟ್ರಲ್ ಸೇರಿದಂತೆ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ 'ಆ ದಿನಗಳು' ತೆರೆಕಂಡಿದೆ.

(ಪೂರಕ ಮಾಹಿತಿ : ವಿಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada