»   » ನೈವೇಲಿ ರ್ಯಾಲಿಯಲ್ಲಿ ಸಿನಿಮೀಯ ಶೈಲಿಯಲ್ಲೇ ಸಾಕಷ್ಟು ಘಟನಾವಳಿಗಳು ನಡೆದವು

ನೈವೇಲಿ ರ್ಯಾಲಿಯಲ್ಲಿ ಸಿನಿಮೀಯ ಶೈಲಿಯಲ್ಲೇ ಸಾಕಷ್ಟು ಘಟನಾವಳಿಗಳು ನಡೆದವು

Posted By: ಶಂಕರ್‌ ಪಾಂಡಿಯನ್‌, ಚೆನ್ನೈ
Subscribe to Filmibeat Kannada

ಇವತ್ತು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಕರ್ನಾಟಕಕ್ಕೆ ವಿದ್ಯುತ್‌ ಕೊಡಕೂಡದೆಂದು ನೈವೇಲಿಯಲ್ಲಿ ನಡೆಸಿದ ರ್ಯಾಲಿಯದ್ದೇ ಮಾತು. ಅದನ್ನೇ ಒಂದು ಸಿನಿಮಾ ಮಾಡಿದರೆ ಸೊಗಸಾಗಿರುತ್ತೆ ಅಂತ ಸಿನಿಮಾ ಮಂದಿಯೇ ಲೇವಡಿಯಾಡುತ್ತಿರುವುದು ಸುಳ್ಳಲ್ಲ.

ಈ ಮಾತಿಗೆ ಪುಷ್ಟಿ ಕೊಟ್ಟಿರುವ ನೈವೇಲಿಯ ಘಟನಾವಳಿಗಳನ್ನು ನೋಡಿ-

  • ನಟರಾದ ವಿವೇಕ್‌ ಹಾಗೂ ಕಾರ್ತಿಕ್‌ ಅರ್ಧ ದಾರಿಯಲ್ಲೇ ರ್ಯಾಲಿಯ ಬಸ್‌ ಇಳಿದು, ಹೊಟ್ಟೆ ತುಂಬಾ ಉಂಡು ಹಿಂದೆ ಬರುತ್ತಿದ್ದ ಕನ್ನಡಿಗ ಅರ್ಜುನ್‌ ಸರ್ಜಾ ಕಾರ್‌ ಹತ್ತಿಕೊಂಡು ಚೆನ್ನೈಗೆ ವಾಪಸ್ಸಾದರು.
  • ಹೀಗಿದ್ದೂ ಭಾರತಿರಾಜ್‌ ಮಾತ್ರ ಕನ್ನಡಿಗ ಅರ್ಜುನ್‌ ಸರ್ಜಾ ಕೂಡ ತಮ್ಮ ರ್ಯಾಲಿಯಲ್ಲಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಾ ಹುಡುಕಾಡುತ್ತಲೇ ಇದ್ದರು. ಆದರೆ ಕೆಮೆರಾ ಕಣ್ಣಿಗೆ ಬೀಳದಂತೆ ಅರ್ಜುನ್‌ ಎಸ್ಕೇಪ್‌ !
  • ಭಾರತಿರಾಜ್‌ಗೆ ಕೈಕೊಟ್ಟ ಮೂವರೂ ನಟರು ಮರುದಿನ ರಜನೀಕಾಂತ್‌ ನಡೆಸಿದ ನಿರಶನದಲ್ಲಿ ಕೆಮೆರಾಗೆ ಪೋಸ್‌ ಕೊಟ್ಟುಕೊಂಡೇ ನಿಂತಿದ್ದರು.
  • ಹಾಂಗ್‌ಕಾಂಗ್‌ಗೆ ಕಾರ್‌ ರೇಸೊಂದರಲ್ಲಿ ಭಾಗವಹಿಸುವ ತರಾತುರಿಯಲ್ಲಿದ್ದ ಅಜಿತ್‌ ರ್ಯಾಲಿಯಲ್ಲಿ ಸರಿಯಾಗಿ ತೊಡಗಿಕೊಳ್ಳಲಿಲ್ಲ. ಫೋಟೋ ತೆಗೆಸಿಕೊಂಡದ್ದೇ ಹೆಂಡತಿ ಶಾಲಿನಿ ಜೊತೆ ದೌಡಾಯಿಸಿದರು.
  • ಸಿನಿಮಾ ಸ್ಟೈಲಿನಲ್ಲೇ ಎಂಟ್ರಿ ಕೊಟ್ಟಿದ್ದು ಕಪ್ಪು ಸೋನಾಟ ಕಾರು. ಅದರಿಂದ ಇಳಿದದ್ದು ಕಮಲ್‌ ಹಾಗೂ ಸಿಮ್ರಾನ್‌ ! ಅಭಿಮಾನಿಗಳಿಂದ 'ಓ" ಎಂಬ ಉದ್ಗಾರ ! ವೇದಿಕೆ ಹತ್ತಿ ಯಥಾಶಕ್ತಿ ಕೈಮುಗಿದ ಕಮಲ್‌ ಭಾಷಣ ಕೊಚ್ಚಿ, ಇದಿರಾದವರಿಗೆ ನಗೆಯಲ್ಲೇ ಮಾತಾಡಿಸಿ ಮತ್ತೆ ಕಾರು ಹತ್ತಿದರು. ಸೋನಾಟ ಎಬ್ಬಿಸಿದ ಧೂಳಲ್ಲಿ ಅಭಿಮಾನಿಗಳಿಗೆ ಅಲ್ಲೇ ಉಳಿದಿದ್ದ ಸಿಮ್ರಾನ್‌ ಮಸುಕಾಗಿ ಕಂಡಳು.
  • ಬ್ಯಾಕ್‌ಸ್ಟೇಜ್‌ನಲ್ಲಿ ಜ್ಯೋತಿಕಾ ಹಾಗೂ ಸೂರ್ಯ ಗುಸುಗುಸು ಮಾಡುತ್ತಿದ್ದರು.
  • ತಾನೊಬ್ಬನೇ ನಿಂತು, ಹುಡುಗರ ಕೈಕಾಲು ಕಟ್ಟಿ ಮೂರು ಕಿಲೋಮೀಟರು ಜಾಗದಲ್ಲಿ ಬ್ಯಾನರುಗಳನ್ನು ಕಟ್ಟಿ, ಕಟೌಟ್‌ಗಳನ್ನು ಹಾಕಿಸಿದ್ದ ವಿಜಯಕಾಂತ್‌ ಸಂಜೆ ಹೊತ್ತಿಗೆ ಹ್ಯಾಪುಮೋರೆ ಹಾಕಿಕೊಂಡು ನಿಂತಿದ್ದರು.

ಇವೆಲ್ಲಾ ಇಟ್ಟುಕೊಂಡು ಆರಾಮಾಗಿ ಒಂದು ಸಿನಿಮಾ ಮಾಡಬಹುದಲ್ವೆ?

English summary
Kamal Simran came to Neyveli together !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada