»   » ಕನ್ನಡ ಚಿತ್ರರಂಗದ ನಂಜುಂಡ : ಉಮೇಶ್‌ ಸಂದರ್ಶನ

ಕನ್ನಡ ಚಿತ್ರರಂಗದ ನಂಜುಂಡ : ಉಮೇಶ್‌ ಸಂದರ್ಶನ

By: ಶಾಲಿನಿ ಹೂಲಿ
Subscribe to Filmibeat Kannada

'ಅಮ್ಮ ಹಾಲು ಕೊಡ್ಲಾ... ಟೀ ಕೊಡ್ಲಾ... ಜ್ಯೂಸ್‌ ಕೊಡ್ಲಾ.... ಹೆಹ್ಹೆಹ್ಹೆ' .

'ಅಯ್ಯೋ, ಅವರು ನನ್ನನ್ನ ತಪ್ಪಾಗಿ ತಿಳಕೊಂಡುಬಿಟ್ರಲ್ಲ.... ಏನು ಮಾಡೋದು ಈಗ...'

ಮಾಲಾಶ್ರೀ ಅಭಿನಯದ 'ಪೊಲೀಸನ ಹೆಂಡಿ'್ತ ಹಾಗೂ ಅನಂತನಾಗ್‌ ನಾಯಕತ್ವದ ಗೋಲ್‌ಮಾಲ್‌ ಸರಣಿಯ ಚಿತ್ರಗಳಲ್ಲಿ ಮೇಲಿನ ಸಂಭಾಷಣೆಗಳ ಮೂಲಕ ಪ್ರೇಕ್ಷಕರಲ್ಲಿ ನಗೆಯುಕ್ಕಿಸುವ ಹಾಗೂ ಅನುಕಂಪಕ್ಕೆ ಕಾರಣವಾಗುವ ಪಾತ್ರಗಳನ್ನು ಮರೆಯುವುದಾದರೂ ಹೇಗೆ? ಈ ನಗೆಪಾತ್ರಗಳ ನಟ ಎಂ.ಎಸ್‌. ಉಮೇಶ್‌!

ಕನ್ನಡ ಚಿತ್ರ ರಂಗದ ಸಾಂಪ್ರದಾಯಿಕ ನಗೆ ನಟರಲ್ಲಿ ಒಬ್ಬರಾದ ಉಮೇಶ್‌ ನಮ್ಮ ನಡುವಿನ ಅಪರೂಪದ ನಟ. ಅವರ ಕಾರ್ಯಶ್ರದ್ಧೆ ಹಾಗೂ ನಟನೆಯಲ್ಲಿನ ಬದ್ಧತೆ ಹೊಸ ನಟರಿಗೆ ಮಾದರಿಯಾದುದು. ಸಹಜ ಕಲಾವಿದನೊಬ್ಬ ಎಂಥ ಪಾತ್ರಕ್ಕೂ ಜೀವ ತುಂಬಬಲ್ಲ ಮತ್ತು ಆ ಪಾತ್ರಗಳಲ್ಲಿ ತನ್ನ ವ್ಯಕ್ತಿತ್ವದ ಛಾಪು ಮೂಡಿಸಬಲ್ಲ ಎನ್ನುವುದಕ್ಕೆ ಉಮೇಶ್‌ ಅಭಿನಯಿಸಿದ 300ಕ್ಕೂ ಹೆಚ್ಚು ಚಿತ್ರಗಳೇ ಸಾಕ್ಷಿ.

ಕಡು ಬಡತನದಲ್ಲಿ ಹುಟ್ಟಿದ ಉಮೇಶ್‌ ಮುನ್ನೂರು ಚಿತ್ರಗಳ ನಟನಾದ ನಂತರವೂ ಬಡತನದಲ್ಲಿಯೇ ಇರುವುದು ಬಣ್ಣದ ಜಗತ್ತಿನ ವಿಪರ್ಯಾಸಗಳಲ್ಲೊಂದು. 60 ವಸಂತಗಳನ್ನು ಕಂಡಿರುವ ಉಮೇಶ್‌ಗೆ- ಇಡೀ ಜೀವಮಾನವನ್ನು ಕಲೆಗಾಗಿ ತೇಯ್ದರೂ, ಬಣ್ಣದ ಜಗತ್ತು ತನಗೆ ನಿರಂತರವಾಗಿ ಕೆಲಸ ಕೊಡಲಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ. ಆದರೆ ಚಿತ್ರರಂಗದ ಕಾರಣವಾಗಿ ದೊರೆತ ಅಭಿಮಾನಿಗಳ ಬಗೆಗೆ ಅವರಿಗೆ ತುಂಬು ಹೆಮ್ಮೆ .

ಎಲ್‌.ಕೆ. ಶ್ರೀಕಂಠಯ್ಯ ಮತ್ತು ನಂಜಮ್ಮನವರ ಮುದ್ದಿನ ಮಗ ಉಮೇಶ, ವೃತ್ತಿ ರಂಗಭೂಮಿ ಪ್ರವೇಶಿಸಿದಾಗ ಇನ್ನೂ ನಾಲ್ಕರ ಬಾಲಕ. ಗುಬ್ಬಿಕಂಪನಿಯಲ್ಲಿ ಕಲಾವಿದನಿಗೆ ಅಕ್ಷರ ಜ್ಞಾನ ನೀಡುವ ಕಲಿಕಾಕೇಂದ್ರವನ್ನು ವೀರಣ್ಣನವರು ನಡೆಸುತ್ತಿದ್ದರು. ಅಲ್ಲಿ ಪಡೆದ ಶಿಕ್ಷಣವೇ ಉಮೇಶರ ಪಾಲಿಗೆ ದೊರೆತ ದೊಡ್ಡ ಡಿಗ್ರಿ. ಗುಬ್ಬಿ ಕಂಪನಿಯಲ್ಲಿ ಹಂತಹಂತವಾಗಿ ಬಡ್ತಿ ಪಡೆಯುತ್ತಾ ಬಂದ ಉಮೇಶ್‌, ಮುಂದೊಂದು ದಿನ ಚಿತ್ರರಂಗ ಪ್ರವೇಶಿಸಿದರು. ಕನ್ನಡ ಚಿತ್ರರಂಗಕ್ಕೆ ಗುಬ್ಬಿ ಕಂಪನಿ ಕೊಟ್ಟ ಮಹತ್ವದ ಕೊಡುಗೆಯೆಂದರೆ ಡಾ.ರಾಜಕುಮಾರ್‌. ಯೋಗಾನರಸಿಂಹ, ಬಿ.ವಿ.ಕಾರಂತ ಕೂಡಾ ಗುಬ್ಬಿ ಕಂಪನಿಯ ಪ್ರಾಡಕ್ಟ್‌ಗಳೇ. ಈ ಸಾಲಿಗೆ ಇನ್ನೊಂದು ಸೇರ್ಪಡೆ- ಉಮೇಶ್‌. ನೋವು ನುಂಗೆ ನಗೆ ಚೆಲ್ಲುವ ಈ ಕಲಾವಿದನೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ರಂಗಭೂಮಿ ಮತ್ತು ಸಿನಿಮಾ- ನಿಮಗೆ ತೃಪ್ತಿ ತಂದುಕೊಟ್ಟ ಬದುಕು ಯಾವುದು? ಯಾಕೆ?ರಂಗಭೂಮಿ ನನಗೆ ತಾಯಿ. ಸಿನಿಮಾ ತಂದೆ ಇದ್ದ ಂತೆ. ತಾಯಿಯೇ ಮನೆಯ ಮೊದಲ ಪಾಠ ಶಾಲೆ ಅನ್ನುವ ಹಾಗೆ ಅಭಿನಯದಿಂದ ಹಿಡಿದು ಹಾಡು, ವಾದ್ಯಗಳ ನುಡಿಸುವಿಕೆ, ಸಂಭಾಷಣೆ ಬರವಣಿಗೆ ಹೀಗೇ ಎಲ್ಲವನ್ನು ಕಲಿಸಿದ್ದು ವೃತ್ತಿ ರಂಗಭೂಮಿ. ಆದರೆ ವಿದ್ಯೆಯಿಂದ ಮಾತ್ರ ಹೊಟ್ಟೆ ತುಂಬುತ್ಯೇ. ಕೇವಲ ತಾಯಿ ಪ್ರೀತಿ ಇದ್ರೆ ಸಾಲದು, ಹೊಟ್ಟೆ ತುಂಬಿಸಲು ಅಪ್ಪನ ಸಂಬಳವೂ ಬೇಕು, ಅಲ್ವೇನಮ್ಮಾ .

ಕೇವಲ ಹಾಸ್ಯ ಪಾತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ?
ನಾನು ಎಲ್ಲಾ ಪಾತ್ರದಲ್ಲೂ ಅಭಿನಯಿಸಿದ್ದೀನಿ. ಖಳನಾಯಕ ಪಾತ್ರದಲ್ಲಿ ಸಹ ಪ್ರೇಕ್ಷಕ ನನ್ನನ್ನ ಮೆಚ್ಚಿಕೊಂಡಿದ್ದಾನೆ. ಖಳನಾಯಕ ಪಾತ್ರದಲ್ಲಿ ಪ್ರೇಕ್ಷಕನ ಕೆಂಗಣಿಗೆ ಗುರಿಯಾಗಿದ್ದೀನಿ. ಎಷ್ಟೋ ಅಭಿಮಾನಿಗಳೂ 'ಏನ್‌ ಸಾರ್‌, ಎಷ್ಟು ಕ್ರೂರಿ ನಿಮ್ಮ ಮನಸ್ಸು..' ಎಂದು ಬಾಯಿಗೆ ಬಂದಂತೆ ಬಯ್ದದ್ದು ಇದೆ. ಜಾಸ್ತಿ ಬೈಸ್ಕೊಳ್ಳೋದು ಚೆನ್ನಾಗಿರಲ್ಲ ನೋಡಿ..... ಅದಕ್ಕೆ ಹಾಸ್ಯ ಪಾತ್ರದಲ್ಲಿ ಹೆಚ್ಚು ಅಭಿನಯಿಸಿದ್ದೀನಿ.

ಸಿನಿಮಾ ನಟರ ಜೀವನ ್ಫಸುಖದ ಸುಪ್ಪತ್ತಿಗೆ ಎಂದು ನಂಬಿರುವ ಅಭಿಮಾನಿಗಳು, ನೀವು ಟ್ರಾಫಿಕ್‌ನಲ್ಲಿ ಹಳೆಯ ಲೂನಾದಲ್ಲಿ ಓಡಾಡುವುದನ್ನು ನೋಡಿದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ?

ಸಿಗ್ನಲ್‌ನಲ್ಲಿ ನಿಂತಾಗ.... ಪಕ್ಕದಲ್ಲಿ ಕಾರಿನಲ್ಲಿದ್ದವ, ಬಸ್ಸನಲ್ಲಿದ್ದ ಅಭಿಮಾನಿಗಳು 'ನಮಸ್ಕಾರ ಉಮೇಶ್‌, ಹೇಗಿದ್ದೀರಾ?' ಎಂದು ಕುಶಲ ವಿಚಾರಿಸುತ್ತಾರೆ. ಕೆಲವು ಸಾರಿ .. ಸಿಗ್ನಲ್‌ನಲ್ಲೇ 'ಆಟೋಗ್ರಾಫ್‌ ಪ್ಲೀಸ್‌' ಎನ್ನುವವರೂ ಉಂಟು. ಕೆಲವರಿಗೆ ಉಮೇಶ ಹಳೆಯ ಲೂನಾದಲ್ಲಿ ಓಡಾಡುವುದನ್ನು ನೋಡಿ ವಿಚಿತ್ರವೆನ್ನಿಸಬಹುದು. ನನ್ನ ಆರ್ಥಿಕ ಪರಿಸ್ಥಿತಿ ತಿಳಿದುಕೊಳ್ಳಲು ಪ್ರಯತ್ನಿಸಿದವೂ ಇದ್ದಾರೆ.

ಚಿತ್ರರಂಗದಿಂದ ಆರ್ಥಿ ಕ ತೃಪ್ತಿ ಸಿಕ್ಕಿದೆಯೇ?

ಸಿನಿಮಾ ಮೂರು ತಾಸು ಥೇಟರಲ್ಲಿ ಕುಳಿತು ನೋಡುವುದಕ್ಕೆ ತುಂಬಾ ಮಜವಾಗಿರುತ್ತೆ. ಗ್ಲಾಮರ್ರಾಗಿ ಕಾಣುತ್ತೆ.. ಆದರೆ ನಿಜ ಜೀವನದಲ್ಲಿ ಒಬ್ಬ ಕಲಾವಿದನ ಬದುಕು ಗ್ಲಾಮರ್‌ ಆಗಿ ಇರೋಲ್ಲ... ಯಾಕೆ ಗೊತ್ತಾ ? ಎಲ್ಲದಕ್ಕೂ ಅದೃಷ್ಟ ಇರಬೇಕಲ್ಲ ! ಅದೃಷ್ಟ ಇದ್ದವನಿಗೆ ಆರ್ಥಿಕವಾಗಿ ತೃಪ್ತಿ ಸಿಕ್ಕುತ್ತೆ , ಇಲ್ಲದವನಿಗೆ ???

ನಿಮ್ಮ ಮಗಳು ಲಕ್ಷ್ಮಿ (ಸಿನಿಮಾದಲ್ಲಿ ಜಯಸುಧಾ) 'ನನ್ನ ಲವ್‌ ಮಾಡ್ತೀಯಾ' ಚಿತ್ರದಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದಾರೆ. ನಿಮ್ಮ ಮಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಗ್ಗೆ .....

ಮೊದಲ ಬಾರಿ ಮಗಳು ಸಿನಿಮಾದಲ್ಲಿ ನಟಿಸ್ತೀನಿ ಅಂದಾಗ ನಾನು ವಿರೋಧಿಸಿದೆ. ಯಾಕೆಂದರೆ ಪ್ರತಿದಿನ ಸಿನಿಮಾ ರಂಗದಲ್ಲಿ ಹೊಸ ಮುಖಗಳು ಬರುವುದು ಮರೆಯಾಗಿ ಹೋಗುವುದು ಸಾಮಾನ್ಯವಾಗಿರಬೇಕಾದ್ರೆ, ಸಿನಿಮಾವನ್ನೇ ಬದುಕಾಗಿ ತಗೊಳ್ಳೋದ್ರಲ್ಲಿ ಅರ್ಥ ಎಲ್ಲಿದೆ? ಆದರೆ ಲಕ್ಷ್ಮಿ ಗೆ ಅಭಿನಯದ ಪ್ರತಿಭೆ ಇದೆ. ಅದರ ಜೊತೆಗೆ ದೊಡ್ಡ ಅಭಿನೇತ್ರಿಯಾಗಬೇಕೆಂಬ ಆಸೆಯೂ ಇದೆ. ಒಬ್ಬ ತಂದೆಯಾಗಿ ಅವಳ ಆಸೆಗಳಿಗೆ ತಡೆಯಾಡ್ಡುವುದು ತಪ್ಪಾಗುತ್ತೆ. 'ನನ್ನ ಲವ್‌ ಮಾಡ್ತೀಯಾ' ಅವಳ ಮೊದಲ ಸಿನಿಮಾ. ನೋಡೋಣ ಅವಳ ಅದೃಷ್ಟ ಪರೀಕ್ಷೆಯನ್ನ !

ಮರೆಯಲಾಗದ ಕಹಿ ಘಟನೆ?
ನನ್ನ ಮಗನ ಸಾವು. 20 ವರ್ಷ ಇರುವಾಗ ಆಕ್ಸಿಡೆಂಟ್‌ ಒಂದರಲ್ಲಿ ತೀರಿಕೊಂಡ. ಬದುಕಿದ್ದರೆ.... ಇಂದಿನ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬನಾಗುತ್ತಿದ್ದನಾ? ಅನ್ಸುತ್ತೆ .

ಬೆಳ್ಳಿತೆರೆಯಿಂದ ಪಡೆದಿದ್ದೇನು? ಕಳೆದುಕೊಂಡದ್ದೇನು?
ಅಭಿಮಾನಿಗಳಿಂದ ಸಾಗರದಷ್ಟು ವಿಶಾಲವಾದ ಪ್ರೀತಿ. ಕಳೆದುಕೊಂಡಿದ್ದು ನೆಮ್ಮದಿ.

English summary
An exclusive interview with M. S. Umesh
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada