For Quick Alerts
  ALLOW NOTIFICATIONS  
  For Daily Alerts

  ಒಂದು ದೀರ್ಘ ಆಕಳಿಕೆಯಿಂದ ಎದ್ದುನಿಂತ ಚಿತ್ರರಂಗ

  By Super
  |

  ರಾಜ್‌ಕುಮಾರ್‌ ಅಪಹರಣವಾದ ದಿನದಿಂದಲೂ ಸ್ತಬ್ಧವಾಗಿದ್ದ ಕನ್ನಡ ಚಿತ್ರನಗರಿ ಈ ಶುಕ್ರವಾರ ಬೆಳಗ್ಗೆ 9.30ರಿಂದ ಮತ್ತೆ ಕ್ರಿಯಾಶೀಲವಾಯಿತು. ರಾಜ್‌ ಬರುವ ತನಕ ಚಿತ್ರೀಕರಣ ನಡೆಯೋಲ್ಲ ಎಂದು ಹೇಳುತ್ತಿದ್ದ ಮಂದಿ, ಕೊನೆಗೂ ಕಾಂಪ್ರಮೈಸ್‌ ಆದರು. ಈ ಸ್ವಯಂ ಘೋಷಿತ ಚಿತ್ರೋದ್ಯಮ ಬಂದ್‌ (ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ) ಬ್ರೇಕ್‌ ಮಾಡಿದವರು, ಕೌರವ ಖ್ಯಾತಿಯ ಬಿ.ಸಿ. ಪಾಟೀಲ್‌.

  ಶುಕ್ರವಾರ ಹೇಳಿ ಕೇಳಿ ಚಿತ್ರೋದ್ಯಮದ ದಿನ. ಹೊಸ ಚಿತ್ರ ಬಿಡುಗಡೆಯಾಗುವ, ಹೊಸ ಚಿತ್ರಗಳು ಸೆಟ್ಟೇರುವ ದಿನ. ಕಳೆದ 60 ದಿನಗಳಿಂದಲೂ ವೀರಪ್ಪನ್‌ ಕಾರ್ಮೋಡ ಕವಿದಿದ್ದ ಕನ್ನಡ ಚಿತ್ರನಗರಿಯಲ್ಲಿ ಚಿತ್ರೀಕರಣಕ್ಕೆ ಪುನರ್ಚಾಲನೆ ದೊರಕಿತು.

  ಬನಶಂಕರಿಯ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಸೆಪ್ಟೆಂಬರ್‌ 29ರ ಶುಕ್ರವಾರ ಬಿ.ಸಿ. ಪಾಟೀಲ್‌, ನಟಿ ಭಾವನಾ ಕ್ಯಾಮರಾ ಎದುರಿಸಲು ಸಜ್ಜಾಗಿದ್ದರು. ಮಾಜಿ ಸಂಸದ ಹಾಗೂ ಚಿತ್ರ ನಿರ್ಮಾಪಕ ಎಚ್‌. ಡಿ. ಕುಮಾರ ಸ್ವಾಮಿ ಕ್ಲಾಪ್‌ ಮಾಡಿದರು. ತಾಳಿ ಹಿಡಿದು ಭಾವನಾ ಎದರು ಪಾಟೀಲ್‌ ನಿಂತಿದ್ದ ದೃಶ್ಯದ ಚಿತ್ರೀಕರಣ ನಡೆಯಿತು. ಸಾಮಾನ್ಯವಾಗಿ ಪಾಟೀಲರ ಎಲ್ಲ ಚಿತ್ರಗಳ ಮುಹೂರ್ತಕ್ಕೂ ಮುಖ್ಯ ಅತಿಥಿಯಾಗಿ ಬರುವ ಪೊಲೀಸ್‌ ಅಧಿಕಾರಿ ಶಂಕರ್‌ ಬಿದರಿ ಅವರೇ ಇಲ್ಲೂ ಮುಖ್ಯ ಅತಿಥಿ.

  ಅಂದಹಾಗೆ ಈ ಬಾರಿ ಕೌರವ ಲಂಕೇಶನಾಗಿದ್ದಾನೆ. ಏನು ಕೌರವ ಲಂಕೇಶ ಹೇಗಾದ ಎಂದು ಕೇಳಿದಿರಾ ? ಈ ಚಿತ್ರದ ಹೆಸರೇ ಲಂಕೇಶ. ಪೊಲೀಸ್‌ ಅಧಿಕಾರಿಯಾಗಿದ್ದರೂ, ನಾಟಕದ ಗೀಳು ಅಂಟಿಸಿಕೊಂಡಿದ್ದ ಪಾಟೀಲ್‌ ಪೌರಾಣಿಕ ನಾಟಕಗಳಲ್ಲಿ ದುರ್ಯೋಧನ, ಭೀಮ ಇತ್ಯಾದಿ ಪಾತ್ರಗಳಲ್ಲಿ ಮಿಂಚಿದವರು. ದಳವಾಯಿ, ಕೌರವ ಮುಂತಾದ ಗತ್ತಿನ ಪಾತ್ರದಲ್ಲಿ ರಜತ ಪರದೆಯಲ್ಲಿ ನಟಿಸಿರುವ ಪಾಟೀಲ್‌ ಈ ಬಾರಿಯೂ ಹೆಚ್ಚೂ ಕಮ್ಮಿ ಅದೇ ಸ್ಟೈಲ್‌ನ ಪಾತ್ರದಲ್ಲಿ ಲಂಕೇಶ ಆಗಿದ್ದಾರೆ.

  ಈ ಚಿತ್ರದ ಮುಹೂರ್ತ ಸೆಪ್ಟೆಂಬರ್‌ 25ರಂದೇ ನಡೆಯಬೇಕಿತ್ತು. ಗಲಾಟೆ ಆದೀತೆಂದು ಮುಂದಕ್ಕೆ ಹೋಗಿತ್ತು. ಇಡೀ ನಾಡೇ ಗುರವಾರದ ಬಂದ್‌ ಹಾಗೂ ನಾಗಪ್ಪನ ಬಿಡುಗಡೆ ವಿಷಯದಲ್ಲಿ ತಲ್ಲೀನರಾಗಿದ್ದಾಗ, ಸದ್ದು ಗದ್ದಲ ಇಲ್ಲದೆ ಲಂಕೇಶನ ಚಿತ್ರೀಕರಣ ನಡೆದೇ ಹೋಯಿತು. ಇಲ್ಲೂ ನಾಗಪ್ಪನ ವಿಷಯ ಚರ್ಚೆಗೆ ಬಂತು.

  ಉತ್ತರ ಕರ್ನಾಟಕದವರಾದ ನಾಗಪ್ಪ ಅವರ ರಕ್ತದಲ್ಲಿ ಗಂಡು ಮೆಟ್ಟಿನ ನೆಲದ ಛಲ, ಧೈರ್ಯ ಇದೆ. ಹೀಗಾಗೆ ಅವರು ವೀರಪ್ಪನ್‌ ವಶದಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಈಗ ಖಂಡಿತ ವೀರಪ್ಪ ತನ್ನ ಅಡಗುತಾಣ ಬದಲಾಯಿಸುತ್ತಾನೆ ಎಂದು ವೀರಪ್ಪನ್‌ ವಿರುದ್ಧ ಕಾರ್ಯಾಚರಣೆ ನಡೆಸಿದ ಪಡೆಯ ಮುಖ್ಯಸ್ಥರಾಗಿದ್ದ ಬಿದರಿ ಹೇಳಿದರು.

  ಈ ಮುಹೂರ್ತದಲ್ಲಿ ಪಾಲ್ಗೊಳ್ಳಲೆಂದೇ ಬಿ.ಸಿ. ಪಾಟೀಲರ ಸೋದರ ಅಶೋಕ್‌ ಪಾಟೀಲ್‌ ಅಮೆರಿಕಾದಿಂದ ಬಂದಿದ್ದರು. ಪ್ರಥಮ ಬಾರಿಗೆ ಬಿ.ಸಿ. ಪಾಟೀಲ್‌ ಈ ಚಿತ್ರದ ಮೂಲಕ ನಿರ್ದೇಶಕರೂ ಆಗಿದ್ದಾರೆ. ಲಂಕೇಶ್‌ ಚಿತ್ರದ ನಿರ್ಮಾಪಕರೂ, ನಾಯಕ ನಟರೂ ಅವರೇ. ಪಾಟೀಲರ ಎದುರು ನಾಯಕಿಯರಾಗಿ ಮುಂಬಯಿಯ ತಾರೆ ಬೇಡಿ ಹಾಗೂ ಭಾವನಾ ನಟಿಸುತ್ತಿದ್ದಾರೆ.

  English summary
  B.C. Patil breaks the jinx: Film shooting resumes

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X