ಸುದೀಪ್-ದರ್ಶನ್ ಪಾಲಿಗೆ ಬೇಡ ಬೇಡ ಅಂದ್ರು ನೆನಪಾಗುವ ದಿನ ಇದು
Recommended Video

ಮಾರ್ಚ್ 5....ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿದೆ. ಅದರಲ್ಲೂ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಈ ದಿನವನ್ನ ಎಂದು ಮರೆಯಲ್ಲ. ಬಹುಶಃ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಪಾಲಿಗೆ ಇದು ಕರಾಳ ದಿನ ಅಂತಾನೇ ಹೇಳಬಹುದು.
ಯಾಕಂದ್ರೆ, ಈ ದಿನದಿಂದಲೇ ಸ್ಯಾಂಡಲ್ ವುಡ್ ಯುವ ದಿಗ್ಗಜರ ಸ್ನೇಹ ಮುರಿದುಬಿದ್ದಿತ್ತು. ಮಾರ್ಚ್ 5 ರಂದು ದರ್ಶನ್ ಮಾಡಿದ ಒಂದೇ ಒಂದು ಟ್ವೀಟ್ ಇಡೀ ಕನ್ನಡ ಚಿತ್ರರಂಗವನ್ನೇ ಒಂದು ಕ್ಷಣ ದಿಗ್ಬ್ರಮೆಗೊಳಿಸಿತ್ತು.
ಅಲ್ಲಿಯವರೆಗೂ ಚೆನ್ನಾಗಿದ್ದ ಇವರಿಬ್ಬರ ಸ್ನೇಹ ಈ ಟ್ವೀಟ್ ಬಳಿಕ ಎಲ್ಲವೂ ಬದಲಾಯಿತು. ಅಷ್ಟಕ್ಕೂ, ದಾಸ ದರ್ಶನ್ ಮಾಡಿದ್ದ ಟ್ವೀಟ್ ಏನು? ಈ ಟ್ವೀಟ್ ನಿಂದ ಏನೆಲ್ಲಾ ಬೆಳವಣಿಗೆ ಆಯ್ತು.? ಆ ಟ್ವೀಟ್ ನಲ್ಲಿ ಏನಿತ್ತು.? ಏನಿದು ಮಾರ್ಚ್ 5 ರ ಕರಾಳ ದಿನ ಎಂಬುದನ್ನ ತಿಳಿಯಲು ಮುಂದೆ ಓದಿ....

ದಚ್ಚು-ಕಿಚ್ಚ ಸ್ನೇಹಕ್ಕೆ ಬ್ರೇಕ್
ಕನ್ನಡ ಚಿತ್ರರಂಗದ ಕುಚಿಕೂ ಗೆಳಯರಂತಿದ್ದ ದರ್ಶನ್ ಮತ್ತು ಸುದೀಪ್ ಸ್ನೇಹ ಮಾರ್ಚ್ 5, 2017 ರಂದು ರಾತ್ರಿ ಅಂತ್ಯವಾಗಿತ್ತು. ಸ್ವತಃ ದರ್ಶನ್ ಅವರೇ ಟ್ವೀಟ್ ಮೂಲಕ ತಮ್ಮಿಬ್ಬರ ಸ್ನೇಹಕ್ಕೆ ಕೊನೆಯಾಡಿದ್ದರು. ಈ ಟ್ವೀಟ್ ಅನ್ನು ಯಾರೊಬ್ಬರು ನಿರೀಕ್ಷೆ ಮಾಡಿರಲಿಲ್ಲ. ಆದ್ರೆ, ಅನಿರೀಕ್ಷಿತವಾಗಿ ಈ ಅಚ್ಚರಿ ಟ್ವೀಟ್ ಡಿ ಬಾಸ್ ಕಡೆಯಿಂದ ಬಂದಿತ್ತು.

ಇನ್ಮುಂದೆ ನಾವು ಸ್ನೇಹಿತರಲ್ಲ
''ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ. ನಾವಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ. ಇದು ಮುಗಿದು ಹೋದ ಕಥೆ'' ಎಂದು ರಾತ್ರಿ 8.15 ಕ್ಕೆ ದರ್ಶನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿದ ದಚ್ಚು ಮತ್ತು ಕಿಚ್ಚನ ಅಭಿಮಾನಿಗಳಿಗೆ ಒಂದು ಕ್ಷಣ ಏನಾಯಿತು ಎಂದು ತಲೆ ಮೇಲೆ ಕೈ ಇಟ್ಕೊಂಡು ಕೂರುವಂತೆ ಮಾಡಿತ್ತು.

ಮೆಜಿಸ್ಟಿಕ್ ವಿಚಾರ
ನಂತರ ಸರಣಿ ಟ್ವೀಟ್ ಮಾಡಿದ್ದ ದರ್ಶನ್, ತಮ್ಮ ಚೊಚ್ಚಲ ಸಿನಿಮಾ 'ಮೆಜೆಸ್ಟಿಕ್' ಕುರಿತು ಸುದೀಪ್ ತಪ್ಪು ಹೇಳಿಕೆ ಕೊಟ್ಟಿದ್ದಾರೆ ಎಂದು ದರ್ಶನ್ ಬೇಸರ ಮಾಡಿಕೊಂಡಿದ್ದರು. ''ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್ ಅವರನ್ನ ನಾನೇ ಸೂಚಿಸಿದ್ದು'' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಅದನ್ನ ಖಂಡಿಸಿದ್ದ ದರ್ಶನ್ ಈ ಟ್ವೀಟ್ ಮಾಡಿ ಸುದ್ದಿಯಾಗಿದ್ದರು.

ನಿರ್ಮಾಪಕ ಭಿನ್ನ ಹೇಳಿಕೆ
ದರ್ಶನ್ ಮತ್ತು ಸುದೀಪ್ ಅವರ ನಡುವಿನ ಸ್ನೇಹ ಸಮರ ಕೊನೆಗೆ 'ಮೆಜೆಸ್ಟಿಕ್' ಚಿತ್ರದ ಸುತ್ತ ಅಂಟಿಕೊಂಡಿತ್ತು. ಆ ಚಿತ್ರದ ನಿರ್ದೇಶಕ ಎಂ.ಜಿ ರಾಮಮೂರ್ತಿ, ನಿರ್ದೇಶಕ ಪಿ.ಎನ್ ಸತ್ಯ, ಭಾ ಮಾ ಹರೀಶ್ ಎಲ್ಲರೂ ವಾದ-ವಾಗ್ವಾದ ನಡೆಸಿದ್ದರು. ಅದು ಸತ್ಯ, ಇದು ಸತ್ಯ ಎಂದು ಒಬ್ಬರ ಪರ ಇನ್ನೊಬ್ಬರು ಸಮರ್ಥಿಸಿಕೊಂಡರು.

ಒಟ್ಟಿಗೆ ಕಾಣಿಸಿಕೊಂಡಿಲ್ಲ ಈ ದೋಸ್ತಿಗಳು
ಈ ಬೆಳವಣಿಗೆಗಳು ನಡೆದ ಬಳಿಕ ದರ್ಶನ್ ಮತ್ತು ಸುದೀಪ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಒಂದು ಮೂಲದ ಪ್ರಕಾರ, ಇಬ್ಬರ ಮುನಿಸು ಒಂದು ಹಂತಕ್ಕೆ ಬಗೆಹರಿದಿದೆ ಎನ್ನಲಾಗಿದೆ. ಆದ್ರೆ, ಮೊದಲಿನಂತೆ ಇಬ್ಬರ ಸ್ನೇಹ ಇಲ್ಲದಂತಾಗಿದೆ ಎಂಬುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಎರಡು ವರ್ಷವಾದರೂ ಇಬ್ಬರು ಒಂದಾಗಲಿಲ್ಲ ಎಂಬ ಬೇಸರ ಅಭಿಮಾನಿಗಳನ್ನ ಕಾಡುತ್ತಿದೆ.

ಇಬ್ಬರು ಒಂದಾಗಬೇಕು
ಸ್ಟಾರ್ ನಟರು ದೂರವಾಗಿದ್ದರೂ ಅವರ ಅಭಿಮಾನಿಗಳು ಮಾತ್ರ ಒಟ್ಟಾಗಿದ್ದಾರೆ. ದರ್ಶನ್ ಬರ್ತಡೇಗೆ ಸುದೀಪ್ ಅಭಿಮಾನಿಗಳು ಶುಭಕೋರಿ, ಇಬ್ಬರು ಒಂದಾಗಿ, ಒಟ್ಟಿಗೆ ಸಿನಿಮಾ ಮಾಡಿ ಎಂಬ ಆಸೆಯನ್ನ ವ್ಯಕ್ತಪಡಿಸಿದ್ದರು. ಇನ್ನು ದರ್ಶನ್ ಅಭಿಮಾನಿಗಳು ಕೂಡ ಅದೇ ಆಸೆಯನ್ನ ಹೊರಹಾಕಿರುವ ಉದಾಹರಣೆಗಳಿವೆ.


Click it and Unblock the Notifications











