'KGF-2' ಟ್ರೈಲರ್‌ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಭಿಮಾನಿಗಳು ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಸದ್ಯ ಗೋವಾದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. 'KGF-2' ಸಿನಿಮಾ ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ಕುತೂಹಲ ಹೆಚ್ಚಿದೆ.
ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರುತ್ತಿದೆ. ಸಹ ಕಲಾವಿದರ ಆಯ್ಕೆಗಾಗಿ ಚಿತ್ರತಂಡ ಆಡಿಷನ್ ಮಾಡಲು ಮುಂದಾಗಿದೆ. ಇನ್ನು ಚಿತ್ರದ ನಾಯಕಿ ಯಾರು? ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ? ಕಥೆ ಏನು? ಎನ್ನುವ ಪ್ರಶ್ನೆಗಳು ಅಭಿಮಾನಿಗಳು ಕಾಡುತ್ತಿದೆ. ಕರೀನಾ ಕಪೂರ್ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಗೋವಾ ರೆಸಾರ್ಟ್‌ವೊಂದರಲ್ಲಿ ಯಶ್, ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗಿತ್ತು. ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ KGF ಚಾಪ್ಟರ್-2 ಟ್ರೆಂಡ್ ಆಗುತ್ತಿದೆ. ಕಾರಣ 'KGF-2' ಟ್ರೈಲರ್ ಬಿಡುಗಡೆಯಾಗಿ ಇಂದಿಗೆ(ಮಾರ್ಚ್ 27) 2 ವರ್ಷ ಕಳೆದಿದೆ. ಅಂದು ನಗರದ ಒರಾಯನ್ ಮಾಲ್‌ನಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿತ್ತು. ಅಂದು ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಮಾಧ್ಯಮಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು.
5 ಭಾಷೆಗಳಲ್ಲಿ 'KGF-2' ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಸಿತ್ತು. ರಾಕಿಭಾಯ್ ಆರ್ಭಟ, ಖದರ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಲ್ಲಿಂದ 17 ದಿನಗಳ ಬಳಿಕ ಏಪ್ರಿಲ್ 14ಕ್ಕೆ ಸಿನಿಮಾ ತೆರೆಗಪ್ಪಳಿಸಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅಭಿಮಾನಿಗಳು 'KGF-2' ಟ್ರೈಲರ್ ಟ್ರೈಲರ್ ಬಿಡುಗಡೆಯಾಗಿದ್ದ ದಿನವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂದು ಟ್ರೈಲರ್ ಸೆಲೆಬ್ರೇಷನ್ ಹೇಗಿತ್ತು? ವೀವ್ಸ್, ಲೈಕ್ಸ್ ಹೇಗೆ ಸಿಕ್ಕಿತ್ತು? ಎಂದು ಮೆಲುಕು ಹಾಕುತ್ತಿದ್ದಾರೆ.
ಅಭಿಮಾನಿಗಳು 'KGF-2' ಟ್ರೈಲರ್ ನೆನಪಿಸಿಕೊಳ್ಳುತ್ತ 'ಟಾಕ್ಸಿಕ್' ಚಿತ್ರದ ಅಪ್‌ಡೇಟ್‌ಗಾಗಿ ಎದುರು ನೋಡುತ್ತಿದ್ದರು. ಯಶ್ ದಿಢೀರನೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಏನಪ್ಪ ಪೋಸ್ಟ್ ಎಂದು ಮುಗಿಬಿದ್ದು ನೋಡಿದವರಿಗೆ ಸಣ್ಣ ನಿರಾಸೆ ಕಾದಿತ್ತು. ಯಶ್ 'ಟಾಕ್ಸಿಕ್' ಅಪ್‌ಡೇಟ್ ಕೊಟ್ಟಿದ್ದಾರೆ ಎಂದುಕೊಂಡು ನೋಡಿದವರಿಗೆ ಅದು ಜಾಹೀರಾತು ಟೀಸರ್ ಎಂದು ಗೊತ್ತಾಗಿ ನಿರಾಸೆಗೊಂಡಿದ್ದಾರೆ. ಇತ್ತೀಚೆಗೆ ಯಶ್ ಸಾಲು ಸಾಲಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪೆಪ್ಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಮಿಂಚಿದ್ದಾರೆ. ಎರಡು ವರ್ಷಗಳಿಂದ ಪೆಪ್ಸಿ ಅಂಬಾಸಿಡರ್ ಆಗಿ ಗುರ್ತಿಸಿಕೊಂಡಿದ್ದಾರೆ. ಇನ್ನು ಟೀಸರ್‌ನಲ್ಲಿ ರಾಕಿಭಾಯ್ ಗೆಟಪ್‌ನಲ್ಲೇ ಯಶ್ ದರ್ಶನ ಕೊಟ್ಟಿದ್ದಾರೆ. ಅದೇ ಸ್ವಾಗ್, ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟು, ಬೂಟು, ಕೂಲಿಂಗ್ ಕ್ಲಾಸ್ ತೊಟ್ಟು ಚಮಕ್ ಕೊಟ್ಟಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲಿ ಜಾಹೀರಾತು ಚಿತ್ರೀಕರಣಗೊಂಡಿದೆ. Questions, questions, questions he avoids ಎಂದು KGF-2 ಸಿನಿಮಾ ಡೈಲಾಗ್ ನೆನಪಿಸುವಂತೆ ಟೀಸರ್ ಇದೆ. ಶೀಘ್ರದಲ್ಲೇ ಸಂಪೂರ್ಣ ಜಾಹೀರಾತು ಹೊರ ಬೀಳಲಿದೆ.
ಅಂದಹಾಗೆ 'ಟಾಕ್ಸಿಕ್' ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್ 10ಕ್ಕೆ ತೆರೆಗೆ ತರುವುದಾಗಿ ಹೇಳಲಾಗಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರಲಿದೆ. ಯಶ್ ಲುಕ್, ಪಾತ್ರ ಎಲ್ಲವೂ ಕುತೂಹಲ ಮೂಡಿಸಿದೆ.


Click it and Unblock the Notifications











