twitter
    For Quick Alerts
    ALLOW NOTIFICATIONS  
    For Daily Alerts

    ತೋಟಕ್ಕೆ ಬೆಂಕಿ: ನಟ ವಿನೋದ್ ರಾಜ್ ಸಂದರ್ಶನ

    By * ಶ್ರೀರಾಮ್ ಭಟ್
    |

    Vinodraj Leelavathi
    ನೆಲಮಂಗಲ ತಾಲೂಕು, ಸೋಲದೇವನಹಳ್ಳಿಯಲ್ಲಿರುವ ನಟಿ ಲೀಲಾವತಿ ಹಾಗು ಅವರ ಮಗ, ನಟವಿನೋದ್ ರಾಜ್ ತೋಟಕ್ಕೆ ಬೆಂಕಿ ಬಿದ್ದ ವಿಷಯ ಈಗಾಗಲೇ ತಿಳಿದಿದೆ. ನಿನ್ನೆ (19 ಫೆಬ್ರವರಿ 2012) ಮಧ್ಯಾಹ್ನ ನಡೆದ ಈ ಘಟನೆಯ ಬಗ್ಗೆ ನಟ ವಿನೋದ್ ರಾಜ್, ಟೆಲಿಫೋನ್ ಸಂಭಾಷನೆ ಮೂಲಕ ದುರಂತದ ವಿವರಗಳನ್ನು 'ಒನ್ ಇಂಡಿಯಾ ಕನ್ನಡ'ದ ಜೊತೆ ಹಂಚಿಕೊಂಡಿದ್ದಾರೆ. ಮತ್ತೆ ಮತ್ತೆ ಮರುಕಳಿಸುತ್ತಿರುವ ಇಂತಹ ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

    ಪ್ರಶ್ನೆ: ನಿನ್ನೆ ಎಷ್ಟು ಹೊತ್ತಿನಲ್ಲಿ ಈ ಘಟನೆ ನಡೆಯಿತು? ತಿಳಿದಿದ್ದು ಹೇಗೆ?

    ಉತ್ತರ: ನಿನ್ನೆ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ತೋಟದ ಅಂಚಿನಲ್ಲಿರುವ ಬೇಲಿ ಹಾಗೂ ಸಾಕಷ್ಟು ಮರಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅದನ್ನು ಕಂಡಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಕಾರ್ಮಿಕರು.

    ಪ್ರಶ್ನೆ: ನಿಮಗೆ ತಿಳಿದಿದ್ದು ಯಾವಾಗ? ತಕ್ಷಣ ಏನು ಮಾಡಿದಿರಿ?

    ಉತ್ತರ: ನಮ್ಮದೇ ಕಾರ್ಮಿಕರು ಕೂಗಿ ಸ್ವಲ್ಪ ದೂರದಲ್ಲಿದ್ದ ನನಗೆ ಸುದ್ದಿ ಮುಟ್ಟಿಸಿದರು. ಎಲ್ಲರೂ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದಲ್ಲಿದ್ದವರನ್ನೆಲ್ಲಾ ಸೇರಿಸಿ ಬೆಂಕಿ ನಂದಿಸಿದ್ದೇವೆ. ಬೆಂಗಳೂರಿನಿಂದ ದೂರದಲ್ಲಿರುವ ಈ ಹಳ್ಳಿಯಲ್ಲಿ ಆಗ ವಿದ್ಯುತ್ ಇರಲಿಲ್ಲ. ಮನೆಯಲ್ಲಿದ್ದ ಜನರೇಟರ್ ಉಪಯೋಗಿಸಿ ನೀರು ಹಾಯಿಸಿ ಹೇಗೋ ಬೆಂಕಿಯನ್ನು ಆರಿಸಿದ್ದೇವೆ.

    ನಮ್ಮ ಹಾಗೂ ಸುತ್ತಮುತ್ತಲಿನವರ ತೋಟಗಳು ಕಾಡಿನ ಮಧ್ಯದಲ್ಲಿದೆ. ನಮ್ಮ ತೋಟದ ಅಂಚಿನಲ್ಲಿದ್ದ ನೇರಳೆ ಹಾಗೂ ಜಪಾನ್ ಬಿದಿರುಮರಗಳು ನಿನ್ನೆ ನಡೆದ ದುರಂತದಲ್ಲಿ ಭಸ್ಮವಾಗಿವೆ. ಜಪಾನ್ ಬಿದಿರನ್ನು ತೋಟಕ್ಕೆ ಬೇಲಿಯಾಗಿ ಬೆಳೆಸಿದ್ದೆವು. ಅಕ್ಕಪಕ್ಕದಲ್ಲಿದ್ದ ಇತರ ಅನೇಕ ಮರಗಳಿಗೂ ಬೆಂಕಿ ತಗಲಿವೆ. ಆದರೆ ತಕ್ಷಣ ಆರಿಸಿದ್ದರಿಂದ ಬದುಕುಳಿದಿವೆ. ಆದರೆ ತೋಟದಲ್ಲಿದ್ದ ನವಿಲು, ಮೊಲ ಮುಂತಾದ ಪ್ರಾಣಿಗಳು ಬಲಿಯಾಗಿವೆ. ಇನ್ನೂ ಅದೆಷ್ಟೋ ಕಾಡು ಪ್ರಾಣಿಗಳು ಅಲ್ಲಿದ್ದಿರಬಹುದು. ಅವೆಲ್ಲಾ ಜೀವಂತ ಸಮಾಧಿಯಾಗಿವೆ.

    ಪ್ರಶ್ನೆ: ನಿಮ್ಮ ತೋಟಕ್ಕೆ ಮಾತ್ರ ಬೆಂಕಿ ಹೊತ್ತಿಕೊಂಡ್ತಾ? ಅಥವಾ ಅಕ್ಕಪಕ್ಕದ ತೋಟಕ್ಕೂ ಬೆಂಕಿ ತಗಲಿದೆಯಾ?

    ಉತ್ತರ: ನಮ್ಮ ಪಕ್ಕದ ಜಮೀನಿಗೂ ಬೆಂಕಿ ಬಿದ್ದಿದೆ. ಆದರೆ ಅದರ ಮಾಲೀಕರು ಅಲ್ಲಿರಲಿಲ್ಲ. ಅವರ ತೋಟದಲ್ಲಿ ಮಾವಿನ ಮರಗಳನ್ನು ಬೆಳೆಸಿದ್ದಾರೆ. ಬೆಂಕಿಗೆ ಬಲಿಯಾಗಿ ಅನೇಕ ಮಾವಿನ ಮರಗಳು ಸುಟ್ಟುಹೋಗಿವೆ. ಈಗ ತಾನೇ ಹೂ, ಕಾಯಿ ಬಿಡುತ್ತಿದ್ದ ಆ ಮರಗಳಲ್ಲಿ ಕೆಲವನ್ನು ನಾವೇ ಸಾಕಷ್ಟು ಕಷ್ಟ ಪಟ್ಟು ರಕ್ಷಿಸಿದ್ದೇವೆ. ಆದರೆ ನಮ್ಮ ತೋಟದಲ್ಲಿ ಬಿದಿರು ಮರ ಇದ್ದಿತ್ತಾದ್ದರಿಂದಲೋ ಏನೋ, ಬೇಗ ಬೆಂಕಿ ಹರಡಿಕೊಂಡಿದೆ.

    ಪ್ರಶ್ನೆ: ಸ್ಥಳಕ್ಕೆ ಅಗ್ನಿಶಾಮಕ ವಾಹನ ಬಂದಿಲ್ಲವೇ?

    ಉತ್ತರ: ಅಗ್ನಿಶಾಮಕ ವಾಹನ ಸುದ್ದಿ ತಿಳಿದ ತಕ್ಷಣ ನೆರವಿಗೆ ಧಾವಿಸಿದೆ. ಆದರೆ ಕಾಡಿನ ಮಧ್ಯದಲ್ಲಿರುವ ತೋಟವಾದ್ದರಿಂದ ರಸ್ತೆಗಳು ಇಲ್ಲ. ಹಾಗಾಗಿ ಅವರಿಗೂ ಸಾಕಷ್ಟು ಕಷ್ಟವಾಗಿದೆ. ಅಗ್ನಿಶಾಮಕ ದಳ ಹಾಗೂ ಸುತ್ತಮುತ್ತಲಿನವರ ಸಹಕಾರದಿಂದ ಆಗಬಹುದಾದ ಘೋರ ದುರಂತ ತಪ್ಪಿದೆ.

    ಪ್ರಶ್ನೆ: ಕಳೆದ ವರ್ಷ ಕೂಡ ನಿಮ್ಮ ತೋಟಕ್ಕೆ ಬೆಂಕಿ ತಗುಲಿ ಅಪಾರ ಹಾನಿಯಾಗಿತ್ತಲವೇ?

    ಉತ್ತರ: ಹೌದು, ಇದೇ ತಾಲೂಕಿನ ಮೈಲಹಳ್ಳಿ ಗ್ರಾಮದಲ್ಲಿರುವ ನಮ್ಮ ತೋಟಕ್ಕೆ ಹೀಗೆಯೇ ಬೆಂಕಿ ಬಿದ್ದಿತ್ತು. ಆಗ ಅಲ್ಲಿ ತುಂಬಾ ನಷ್ಟವಾಗಿತ್ತು. ಈ ಘಟನೆಯಲ್ಲಿ ತಕ್ಷಣ ಸ್ಪಂದಿಸಿದ್ದರಿಂದ ಹೆಚ್ಚನ ಅನಾಹುತವಾಗಿಲ್ಲ. ಆದರೆ 18 ವರ್ಷಗಳಲ್ಲಿ ನಾವು ಕಷ್ಟಪಟ್ಟು ಬೆಳೆಸಿದ್ದ ಬಿದಿರು, ನೇರಳೆ ಮರಗಳು ಸುಟ್ಟುಹೋಯ್ತು. ಅದಕ್ಕಿಂತ ಬೇಸರದ ವಿಷಯವೆಂದರೆ ಮೊಲ, ನವಿಲು ಮುಂತಾದ ಪ್ರಾಣಿ-ಪಕ್ಷಿಗಳು ನಮ್ಮ ಕಣ್ಣೆದುರೇ ಜೀವಂತವಾಗಿ ಸುಟ್ಟುಹೋದವು.

    ಪ್ರಶ್ನೆ: ಈ ಘಟನೆ ಆಕಸ್ಮಿಕವೇ? ಅಥವಾ ಉದ್ದೇಶ ಪ್ರೇರಿತವೇ?

    ಉತ್ತರ: ಆಕಸ್ಮಿಕವೋ, ಉದ್ದೇಶಪೂರಿತವೋ ಈಗಲೇ ಹೇಳುವುದು ಕಷ್ಟ. ಕಿಡಿಗೇಡಿಗಳು ಬೆಂಕಿ ಹೊತ್ತಿಸಿರಬಹುದು. ಇಲ್ಲದಿದ್ದರೆ ಸುತ್ತಲೂ ಇರುವ ಜಪಾನ್ ಬಿದಿರಿಗೇ ಬೆಂಕಿ ಬಿದ್ದ ಔಚಿತ್ಯವೇನು? ಕಳೆದ ವರ್ಷದ ಘಟನೆ ಕಿಡಿಗೇಡಿಗಳ ಕೃತ್ಯ ಎಂದು ತಿಳಿದಿದೆ. ಆದರೆ ಇದರ ಬಗ್ಗೆ ತನಿಖೆ ನಂತರ ಇನ್ನಷ್ಟೇ ತಿಳಿಯಬೇಕಾಗಿದೆ.

    ಪ್ರಶ್ನೆ: ಒಟ್ಟಾರೆಯಾಗಿ ಈ ದುರಂತದ ಬಗ್ಗೆ ಏನು ಹೇಳಲು ಬಯಸುತ್ತೀರಿ?

    ಇಲ್ಲಿರುವ ಫಾರೆಸ್ಟ್ ಡಿಪಾರ್ಟ್ ಮೆಂಟ್ ಇನ್ನೂ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಮೊನ್ನೆ ಯಾರೋ ತೋಟದ ಸಮೀಪದ ಕಾಡಿನಲ್ಲಿ ಗನ್ ಹಿಡಿದು ಓಡಾಡುತ್ತಿದ್ದರು. ನಾನು ಕೇಳಿದ್ದಕ್ಕೆ ಬೇಟೆಗೆ ಬಂದಿದ್ದೇವೆ ಎಂದರು. ಅವರು ಫಾರೆಸ್ಟ್ ವಿಭಾಗದ ಕಣ್ಣು ತಪ್ಪಿಸಿ ಬರಲು ಅದ್ಹೇಗೆ ಸಾಧ್ಯವಾಯಿತು?

    ಹಾಗಾಗಿ, ನಾನು ಹೇಳಬಯಸುವುದು ಇಷ್ಟು. ಇಲ್ಲಿರುವ ಫಾರೆಸ್ಟ್ ವಿಭಾಗ ಕರ್ತವ್ಯದಲ್ಲಿ ಹೆಚ್ಚಿನ ಜಾಣ್ಮೆ ತೋರಿಸಬೇಕು. ಘಟನೆ ನಡೆದಮೇಲೆ ಹೋರಾಡುವುದಕ್ಕಿಂತ, ಈ ಸ್ಥಳದಲ್ಲಿ ಅಪರಿಚಿತ ಜನರ ಅನಾವಶ್ಯಕ ತಿರುಗಾಟ ಮೊದಲು ನಿಲ್ಲಿಸಬೇಕು. ಈ ಘಟನೆ ನಡೆಯುವುದಕ್ಕಿಂತ ಮೊದಲೇ ಫಾರೆಸ್ಟ್ ಡಿಪಾರ್ಟ್ ಮೆಂಟ್ ನವರು ಕರ್ತವ್ಯದಲ್ಲಿ ಎಚ್ಚರವಾಗಿದ್ದಿದ್ದರೆ ಇದನ್ನು ತಡೆಯಬಹುದಿತ್ತು. ಮುಂದಾದರೂ ಇಂತಹ ಘಟನೆ ಮರುಕಳಿಸದಿರಲಿ, ಫಾರೆಸ್ಟ್ ವಿಭಾಗ ಮುಂದೆ ಇಂತಹ ದುರಂತ ನಡೆಯದಂತೆ ನೋಡಿಕೊಳ್ಳಲಿ ಎಂದು ಬಯಸುತ್ತೇನೆ.

    English summary
    Actress Leelavathi Form House of Soladevanahalli, got fire yesterday (19, ಫೆಬ್ರವರಿ, 2012), once again. Last year her form house at Mailahalli, got fire. Actor and her son Vinod Raj has spoken about this, in our One India Kannada Interview. 
 
    Thursday, February 23, 2012, 12:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X