ಪುನೀತ್ ರಾಜ್ ಕುಮಾರ್ ಹೊಸ ತಂಗಿ ಅಭಿನಯ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗೆ ಹೊಸ ತಂಗಿ ಸಿಕ್ಕಿದ್ದಾರೆ. ನೋಡಲು ಚೆಂದುಳ್ಳಿ ಚೆಲುವೆ ತರಹ ಇದ್ದರೂ ಈಕೆಗೆ ಮಾತು ಬರೊಲ್ಲ, ಕಿವಿ ಕೇಳಲ್ಲ. ಈಕೆಯ ಹೆಸರು ಅಭಿನಯ. ಹೆಸರಿಗೆ ತಕ್ಕಂತೆ ಅಭಿನಯಿಸುತ್ತಾರೆ. ಈಗಾಗಲೆ ತಮಿಳಿನ 'ನಾಡೋಡಿಗಳ್' ಚಿತ್ರದಲ್ಲಿ ನಟಿಸಿದ್ದಾರೆ. ಇದೇ ಚಿತ್ರದ ಕನ್ನಡ ರೀಮೇಕ್‌ನಲ್ಲಿ ನಟಿಸಲು ಅಭಿನಯ ಗಾಂಧಿನಗರಕ್ಕೆ ಬಂದಿದ್ದಾರೆ.
ತೆಲುಗು ಚಿತ್ರರಂಗದ ಪೋಷಕ ನಟ ಆನಂದ ವರ್ಮಾ ಅವರ ಮಗಳು ಈಕೆ. ತಮಿಳಿನಲ್ಲಿ ಶಶಿಕುಮಾರ್ ತಂಗಿಯಾಗಿ 'ನಾಡೋಡಿಗಳ್' ಚಿತ್ರದಲ್ಲಿ ಅಭಿನಯಿಸಿದ್ದರು. ತೆಲುಗು ರೀಮೇಕ್‌ನಲ್ಲಿ ರವಿತೇಜ ತಂಗಿಯಾಗಿ ನಟಿಸಿದ್ದರು. ಈಗ ಕನ್ನಡಕ್ಕೆ ಪದಾರ್ಪಣೆ ಮಾಡುವ ಮೂಲಕ ಹ್ಯಾಟ್ರಿಕ್ ದಾಖಲೆ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಈಕೆಯದು ಮೂಕ ಮತ್ತು ಕಿವುಡ ಪಾತ್ರ.
ರೆಡ್ಡಿ ಲ್ಯಾಬ್ಸ್ , ಜಿಎಂಆರ್, ಓಹ್ರಿ ಉತ್ಪನ್ನಗಳ ರೂಪದರ್ಶಿಯಾಗಿ ಅಭಿನಯ ಕಾಣಿಸಿದ್ದಾರೆ. ಮೂರು ವರ್ಷದ ಮಗುವಾಗಿದ್ದಾಗಲೇ ಈಕೆ ಜಾಹೀರಾತು ರಂಗಕ್ಕೆ ಅಡಿಯಿಟ್ಟದ್ದರು. ಮಾತು ಬಾರದಿದ್ದರೂ ನೃತ್ಯ ವಿಶಾರದೆ. ಪೋಷಕರ ಬೆಂಬಲ, ಪ್ರೋತ್ಸಾಹಗಳೇ ಈಕೆಗೆ ಸ್ಫೂರ್ತಿ. ಕಂಠೀರವ ಸ್ಟುಡಿಯೋದಲ್ಲಿ 'ನಾಡೋಡಿಗಳ್' ಮುಹೂರ್ತಕ್ಕೆ ಆಗಮಿಸಿದ್ದ ಈಕೆ ಲಂಗಾ ದಾವಣಿ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದರು.


Click it and Unblock the Notifications











