»   » ಟಿಕೆಟ್ ಸಿಗದ ನವರಸನಾಯಕನ ಬಂಡಾಯ

ಟಿಕೆಟ್ ಸಿಗದ ನವರಸನಾಯಕನ ಬಂಡಾಯ

Posted By:
Subscribe to Filmibeat Kannada

ಈ ಬಾರಿ ಚುನಾವಣೆಯಲ್ಲಿ ಗೆದ್ದು ಬರುವ ನಿರೀಕ್ಷೆ ಹೊಂದಿದ್ದ ನವರಸ ನಾಯಕ ಜಗ್ಗೇಶ್ ಗೆ ನಿರಾಶೆಯಾಗಿದೆ. ಕಾಂಗ್ರೆಸ್ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಜಗ್ಗೇಶ್ ಅವರಿಗೆ ಟಿಕೆಟ್ ನೀಡದಿರುವುದು ಅವರ ಅಭಿಮಾನಿಗಳಿಗೆ ಅತೀವ ದುಃಖವಾಗಿದೆ. ಮಾಯಾಸಂದ್ರದಲ್ಲಿ ಆಕ್ರೋಶಗೊಂಡ ಜಗ್ಗೇಶ್ ಅಭಿಮಾನಿಗಳು ಕೆ ಎಸ್ .ಆರ್ ಟಿ ಸಿ ಬಸ್ಸುಗಳಿಗೆ ಕಲ್ಲು ತೂರಿ, ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಪ್ರತಿಭಟನಾ ಮೆರವಣಿಗೆ ನಡೆಸಿದ ಜಗ್ಗೇಶ್ ಅಭಿಮಾನಿಗಳ ಮುಂದೆ ಕಣ್ಣೀರು ಸುರಿಸಿ ದುಃಖ ತೊಡಿಕೊಂಡಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

"ಕಷ್ಟಪಟ್ಟು 6 ವರ್ಷದಿಂದ ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಮನೆಗೆ ಕೊಡದೇ ಪಕ್ಷದ ಹಿತಕ್ಕೆ ನೀಡಿದ ನಿಷ್ಠೆಗೆ ಕಾಂಗ್ರೆಸ್ ಮಸಿ ಬಳಿದಿದೆ. ನಮ್ಮ ಜಿಲ್ಲಾಧ್ಯಕ್ಷರು ನಾನು 3 ಬಾರಿ ಸೋತಿರುವುದಾಗಿ ಸುಳ್ಳು ವರದಿ ನೀಡಿ ಟಿಕೆಟ್ ತಪ್ಪಿಸಿದ್ದಾರೆ. ಹಣಕ್ಕಾಗಿ ಟಿಕೇಟ್ ಮಾರಾಟ ಮಾಡಲಾಗಿದೆ. ಜನರ ಮೇಲೆ ನನಗೆ ನಂಬಿಕೆ ಇದೆ. ಅವರೇ ನಿರ್ಧರಿಸಲಿ. ಅಭಿಮಾನಿಗಳ ಹಾಗೂ ಆತ್ಮೀಯರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ಕಾಂಗ್ರೆಸ್ ಗೆ ರಾಜಿನಾಮೆ ನೀಡುವುದಂತೂ ಖಚಿತ" ಎಂದು ಜಗ್ಗೇಶ್ ಹೇಳಿಕೆ ನೀಡಿದ್ದಾರೆ.

ಕಳೆದ ಬಾರಿ ತುರುವೇಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಜಗ್ಗೇಶ್ ಅವರನ್ನು ನಿರಾಕರಿಸಿ ಕಾಂಗ್ರೆಸ್ ಚೌಧರಿ ರಂಗಪ್ಪ ಅವರಿಗೆ ಅವಕಾಶ ನೀಡಿದೆ. ಪ್ರಸ್ತುತ ಜಗ್ಗೇಶ್ ಅವರ ತಂದೆ ಮಂಡಲ್ ಪಂಚಾಯತಿ ಅಧ್ಯಕ್ಷ ಹಾಗೂ ಅವರ ತಾಯಿ ತುಮಕೂರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದಾರೆ. ಈ ರಾಜಕೀಯ ಹಿನ್ನಲೆ ಜತೆಗೆ ಅಪಾರ ಅಭಿಮಾನಗಳ ಬೆಂಬಲ ಇದ್ದರೂ ಜಗ್ಗೇಶ್‌ಗೆ ಹೈಕಮಾಂಡ್ ನ ವರ ಸಿಕ್ಕಿಲ್ಲ. ನಗರದಲ್ಲಿನ ಜಗ್ಗೇಶ್ ಅಭಿಮಾನಿಗಳು ನಟನೆಯಲ್ಲೇ ಮುಂದುವರೆಯಲಿ ಎಂದು ಕೋರಿದ್ದಾರೆ. ಆದರೆ ತುಮಕೂರು, ತುರುವೇಕೆರೆ, ಮಾಯಸಂದ್ರದಲ್ಲಿನ ಅಭಿಮಾನಗಳ ಆಕ್ರೋಶ ಮುಗಿಲು ಮುಟ್ಟಿದೆ.

ಮಂಕಾದ ತಾರೆಯರು: ಕಾಂಗ್ರೆಸ್ ನಲ್ಲಿ ಈ ಬಾರಿ ಸಂಸದ ಅಂಬರೀಷ್ ಅವರಿಗೆ ಶ್ರೀರಂಗಪಟ್ಟಣ ಅಥವಾ ಮಂಡ್ಯ ಕ್ಷೇತ್ರದಲ್ಲಿ ಟಿಕೆಟ್ ಖಚಿತ ಎಂಬ ಸುದ್ದಿ ಹಬ್ಬಿತ್ತು. ಆದರೆ ಅಂಬರೀಷ್ ಅವರಿಗೆ ಟಿಕೆಟ್ ದಕ್ಕಿಲ್ಲ. ಶ್ರೀರಂಗಪಟ್ಟಣದಿಂದ ರವೀಂದ್ರ ಶ್ರೀಕಂಠಯ್ಯ ನಿಂತಿದ್ದಾರೆ. ನಟ ಸಿ.ಪಿ. ಯೋಗೀಶ್ವರ್ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಿದ್ದಾರೆ. ನಟಿ ಉಮಾಶ್ರೀ ಸ್ಪರ್ಧಾ ಕಣದಲ್ಲಿ ಆಸಕ್ತಿ ತೋರಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಜೆಡಿಎಸ್. ಬಿಜೆಪಿ ನಿರ್ಮಾಪಕರು, ನಟ, ನಿರ್ದೇಶಕರಿಗೆ ಸ್ಥಾನ ನೀಡಿದೆ. ನಿರ್ದೇಶಕ ಸಿ.ಕೆ.ಮಹೇಂದರ್(ಕೊಳ್ಳೇಗಾಲ) ಮತ್ತು ನಟ ಸಾಯಿಕುಮಾರ್(ಬಾಗೇಪಲ್ಲಿ) ಬಿಜೆಪಿ ಪರ ಇದ್ದರೆ, ಮುಂಗಾರು ಮಳೆ ನಿರ್ಮಾಪಕ ಇ. ಕೃಷ್ಣಪ್ಪ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada