ಮಂಡ್ಯ ಬೆಡಗಿ ಹಾಲುಗಲ್ಲದ ಕೀರ್ತಿ ಹೇಳಿದ ಮಾತಿದು
ಇದೊಂದು ಪಕ್ಕಾ ಮಾಸ್ ಚಿತ್ರ. ಹೆಸರೇ ಹೇಳುವಂತೆ ಪ್ರೀತಿ, ಪ್ರೇಮ ಕುರಿತಾದ ಕತೆ. ಚಿತ್ರದಲ್ಲಿ ಹೊಡೆದಾಟ ಬಡಿದಾಟಗಳಿಗೂ ಸ್ಥಾನವಿದೆ. ಮಾಸ್ ಜೊತೆಗೆ ಪೆಪ್ಪರ್ ಮಿಂಟ್ ತರಹ ಸೆಂಟಿಮೆಂಟು ಇದೆಯಂತೆ. ಚಿತ್ರದ ನಾಯಕಿ ಕೀರ್ತಿ. ಈಗಾಗಲೆ ಈಕೆ 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಪತಾಕೆ ಹಾರಿಸಿದ್ದಾಗಿದೆ.
ಪ್ರೇಮ್ ನಿರ್ದೇಶಿಸಿ, ನಟಿಸಿದ್ದ 'ಪ್ರೀತಿ ಏಕೆ' ಚಿತ್ರದಲ್ಲಿ ಈಕೆಯದು ಎರಡನೆ ನಾಯಕಿ ಪಾತ್ರ. ತಮ್ಮ ಚಿತ್ರಕ್ಕೆ ಮಂಡ್ಯ ಹುಡುಗಿಯೇ ಆಗಬೇಕು ಎಂದು ಪಟ್ಟುಹಿಡಿದು ಪ್ರೇಮ್ ಈಕೆಯನ್ನು ಪರಿಚಯಿಸಿದ್ದರು. ಗಾಂಧಿನಗರಕ್ಕೆ ಅಡಿಯಿಟ್ಟ ಮಂಡ್ಯ ಬೆಡಗಿ ಕೀರ್ತಿ ಈಗ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಲ್ಲುವ ಕನಸು ಕಾಣುತ್ತಿದ್ದಾರೆ.
'ಲೋಕವೇ ಹೇಳಿದ ಮಾತಿದು' ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನುತ್ತಾರೆ ಹಾಲುಗಲ್ಲದ ಕೀರ್ತಿ. ಚಿತ್ರದಲ್ಲಿ ರಿಯಲ್ ರೌಡಿಗಳು ಅಭಿನಯಿಸುತ್ತಿದ್ದಾರೆ. ಅವರೊಂದಿಗಿನ ಅಭಿನಯ ಹೊಸ ಅನುಭವ ನೀಡಿದೆ ಅಂತಾರೆ ಮಂಡ್ಯ ಬೆಡಗಿ. ಸದ್ಯಕ್ಕೆ ಈಕೆಗೆ ತೆಲುಗು ಚಿತ್ರವೊಂದರಲ್ಲಿ ನಟಿಸುವ ಅವಕಾಶವೂ ಹುಡುಕಿಕೊಂಡು ಬಂದಿದೆ.


Click it and Unblock the Notifications











