ಹ್ಯಾಟ್ರಿಕ್ ಹೀರೋಗೆ ಒಲಿಯಿತು ಅಶ್ವಿನಿ ರಾಂ 'ಪ್ರಸಾದ'
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಮೈಲಾರಿ' ಶೀರ್ಷಿಕೆ ವಿವಾದ ಕಡೆಗೂ ಸುಖಾಂತ್ಯ ಕಂಡಿದೆ. 'ಮೈಲಾರಿ' ಶೀರ್ಷಿಕೆ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಪಾಲಾಗಿರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ತಿಳಿಸಿದ್ದಾರೆ.
'ಮೈಲಾರಿ' ಎಂಬ ಒಂದೇ ಶೀರ್ಷಿಕೆಯನ್ನು ಇಬ್ಬರು ನಿರ್ಮಾಪಕರು ನೋಂದಾಯಿಸಿಕೊಂಡ ಕಾರಣ ಶೀರ್ಷಿಕೆ ವಿವಾದ ತಲೆದೋರಿತ್ತು. ಮೈಲಾರಿ ಶೀರ್ಷಿಕೆಯನ್ನು ಮೊದಲು ನೋಂದಾಯಿಸಿಕೊಂಡವರು ಅಶ್ವಿನಿ ರಾಂ ಪ್ರಸಾದ್. ಬಳಿಕ ಇದೇ ಶೀರ್ಷಿಕೆಯನ್ನು ತಾಜ್ ಮಹಲ್ ಚಂದ್ರು ನೋಂದಾಯಿಸಿಕೊಂಡಿದ್ದರು.
ಚಿತ್ರದ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟುಹಿಡಿದಿದ್ದ ರಾಂ ಪ್ರಸಾದ್ 'ಮೈಲಾರಿ' ಶೀರ್ಷಿಕೆಯಲ್ಲಿ ತಾವೇ ಚಿತ್ರವನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ನನ್ನ ಅನುಮತಿ ಇಲ್ಲದೆ ಮೈಲಾರಿ ಶೀರ್ಷಿಕೆಯನ್ನು ಬಳಸಿಕೊಂಡಿದ್ದಾರೆ ಎಂದು ಅಶ್ವಿನಿ ರಾಂ ಪ್ರಸಾದ್ ಛೇಂಬರ್ ಮೆಟ್ಟಿಲು ಹತ್ತಿದ್ದರು.ಇದೆಲ್ಲದರ ಪರಿಣಾಮವಾಗಿ 'ಮೈಲಾರಿ' ಶೀರ್ಷಿಕೆಯನ್ನು ಪತ್ರಿಕೆಯ ಜಾಹೀರಾತುಗಳಲ್ಲಿ ಬಳಸುವಂತಿಲ್ಲ ಎಂದು ಮಂಡಳಿ ತಾಕೀತು ಮಾಡಿತ್ತು.
ಕಡೆಗೆ 'ಮೈಲಾರಿ' ಶೀರ್ಷಿಕೆ ಶಿವಣ್ಣನ ಪಾಲಾಗಿದೆ. ಈ ಸಂಬಂಧ ಅಶ್ವಿನಿ ರಾಂ ಪ್ರಸಾದ್ ಮಾತನಾಡುತ್ತಾ, ಈ ಶೀರ್ಷಿಕೆಯಲ್ಲೆ ಸಿನಿಮಾ ಮಾಡಬೇಕೆಂದು ಆಶಿಸಿದ್ದೆ. ಆದರೆ ಶೀರ್ಷಿಕೆ ಬಿಟ್ಟು ಕೊಡುವಂತೆ ನನ್ನ ಸಹೋದರ ಸಾಕಷ್ಟು ವಿನಂತಿಸಿಕೊಂಡ. ಆ ಕಾರಣಕ್ಕೆ ನಾನು ಶೀರ್ಷಿಕೆಯನ್ನು ಬಿಟ್ಟುಕೊಟ್ಟಿದ್ದೇನೆ. ಮುಂದೆ ಇದಕ್ಕಿಂತಲೂ ಉತ್ತಮ ಶೀರ್ಷಿಕೆ ಸಿಗಬಹುದು ಎಂಬ ಆಶಾಭಾವವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಂದಹಾಗೆ 'ಮೈಲಾರಿ' ಶಿವರಾಜ್ ಕುಮಾರ್ ಅವರ 99ನೇ ಚಿತ್ರ.


Click it and Unblock the Notifications











