ಮುಂಬೈನಲ್ಲಿ ಪೋನಿ ಜತೆ ಪ್ರಕಾಶ್ ರೈ ಎರಡನೆ ಮದುವೆ
ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹೆಸರಾಂತ ನಟ ಪ್ರಕಾಶ್ ರೈ ಅವರ ಮದುವೆ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ಮುಂಬೈನಲ್ಲಿ ಆಗಸ್ಟ್ 24ರಂದು ನೆರವೇರಲಿದೆ. ಬಾಲಿವುಡ್ ಸೇರಿದಂತೆ ತೆಲುಗು, ತಮಿಳು ಚಿತ್ರರಂಗದ ತಾರೆಗಳ ಸಮ್ಮುಖದಲ್ಲಿ ಪ್ರಕಾಶ್ ರೈ ನೂತನ ದಾಂಪತ್ಯಕ್ಕೆ ಅಡಿಯಿಡಲಿದ್ದಾರೆ.
ಪ್ರಕಾಶ್ ರೈ ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿ ಅವರಿಂದ ವಿವಾಹ ವಿಚ್ಛೇದನ ಪಡೆದಿದ್ದರು. ಇತ್ತೀಚೆಗಷ್ಟೆ ಅವರು ಪೋನಿ ವರ್ಮ ಜೊತೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದರು. ಆಕೆ "ನನ್ನ ಆಪ್ತ ಗೆಳತಿ" ಎಂದು ಮಾಧ್ಯಮಗಳಿಗೆ ಪರಿಚಯಿಸಿದ್ದರು. ಮುಂಬೈನಲ್ಲಿ ಈಕೆಯನ್ನು ಮದುವೆ ಮಾಡಿಕೊಳ್ಳುತ್ತಿದ್ದೇನೆ. ಮದುವೆ ದಿನಾಂಕವನ್ನು ಶೀಘ್ರದಲ್ಲೆ ತಿಳಿಸುವುದಾಗಿ ಹೇಳಿದ್ದರು.
ಸದ್ಯಕ್ಕೆ ಪ್ರಕಾಶ್ ರೈ ತಮ್ಮ ಸ್ವತಃ ನಿರ್ಮಾಣ ಸಂಸ್ಥೆ ಡ್ಯುಯೆಟ್ ಮೂವೀಸ್ ಮೂಲಕ ನಿರ್ಮಿಸಿರುವ ತಮಿಳು ಚಿತ್ರ 'ಇನಿಧು ಇನಿಧು' ಪ್ರಚಾರಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ 'ಹ್ಯಾಪಿ ಡೇಸ್' ಚಿತ್ರದ ರೀಮೇಕ್ ಆಗಿರುವ ಈ ಚಿತ್ರವನ್ನು ಅವರು ಹೊಸಬರ ತಂಡದೊಂದಿಗೆ ನಿರ್ಮಿಸಿದ್ದಾರೆ. ಅಂದಹಾಗೆ ಪೋನಿ ವರ್ಮ ಅವರೊಂದಿಗಿನ ಪ್ರಕಾಶ್ ರೈ ಮಧುಚಂದ್ರ ಕುಲು ಮನಾಲಿಯಲ್ಲಿ ನಡೆಯಲಿದೆ ಎನ್ನುತ್ತವೆ ಮೂಲಗಳು.


Click it and Unblock the Notifications











