ಪ್ರಣೀತಾಗೆ ಇಲ್ಲೂ ವಿಜಯ್ ಅಲ್ಲೂ ವಿಜಯ್ ಏನು ಲಕ್ ಅಂತೀರಾ!
ಬಟ್ಟಲ ಕಂಗಳ ಬೆಂಗಳೂರು ಚೆಲುವೆ ಪ್ರಣೀತಾಳ ಪೊರ್ಕಿ ನಂತರ ಲಕ್ ಸಕತ್ ಕ್ಲಿಕ್ ಆಗಿದೆ. ಕನ್ನಡ ಸಿನಿಮಾ ಸ್ವಲ್ಪ ದಿನ ಸೈಡ್ ನಲ್ಲಿಟ್ಟು ಕಾಲಿವುಡ್ ಗೆ ಕಾಲಿಟ್ಟಿದ್ದ ಬೆಡಗಿಗೆ ಸನ್ ಬ್ಯಾನರ್ ನಲ್ಲಿ ಅವಕಾಶ ಸಿಕ್ಕಿತ್ತು. ಉದಯನ್ ಚಿತ್ರದಲ್ಲಿ ಕರುಣಾನಿಧಿ ಮೊಮ್ಮಗ ಅರುಳ್ ನಿಧಿ ಜೋಡಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಳು.
ತಮಿಳು ಮಾಧ್ಯಮಗಳು ಟಾಪ್ ಹೀರೋಯಿನ್ ಗಳಿಗೆ ಪೈಪೋಟಿ ನೀಡಬಲ್ಲ ಪ್ರತಿಭಾವಂತೆ ಎಂದು ಹಾಡಿ ಹೊಗಳಿ ಬರೆದಿದ್ದವು. ಆಮೇಲೆ ಕಾರ್ತಿ ಜೊತೆ ಶಕುನಿ ಚಿತ್ರಕ್ಕೆ ಆಯ್ಕೆಯಾಗಿದ್ದೆ ಬಂಪರ್ ಛಾನ್ಸ್ ಎನ್ನಲಾಯಿತು.
ಇದಾದ ನಂತರ ಒಳ್ಳೊಳ್ಳೆ ಆಫರ್ ಗಳು ಪ್ರಣೀತಾಳನ್ನು ಹುಡುಕಿಕೊಂಡು ಬರುತ್ತಿದೆಯಂತೆ. ಸದ್ಯ ಇಲ್ಲಿ ನಮ್ಮ ಕರಿಯ ವಿಜಯ್ ಜೊತೆ ಜರಾಸಂಧದಲ್ಲಿ ಜರತಾರಿ ಲಂಗ ದಾವಣಿ ಕಟ್ಟಿಕೊಂಡು ಕುಪ್ಪಳಿಸುತ್ತಿರುವ ಪ್ರಣೀತಾ ಸದ್ಯದಲ್ಲೇ ಮತ್ತೊಬ್ಬ ವಿಜಯ್ ಜೊತೆ ನಟಿಸುವ ಸಾಧ್ಯತೆಯಿದೆ.
ಆದರೆ,ಇಲ್ಲಲ್ಲ ತಮಿಳರ ನೆಚ್ಚಿನ ನಟ ವಿಜಯ್ ನಾಯಕತ್ವದ ಹೊಸ ಚಿತ್ರಕ್ಕೆ ಪ್ರಣೀತಾ ನಾಯಕಿಯಾಗಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಗಜನಿ ಖ್ಯಾತಿಯ ಎಆರ್ ಮುರುಗದಾಸ್ ನಿರ್ದೇಶನವಿರುವ ಈ ಮಹತ್ವದ ಚಿತ್ರದಲ್ಲಿ ಪ್ರಣೀತಾ ನಟಿಸಿದ್ದೇ ಆದ್ದಲ್ಲಿ ಆಕೆಗೆ ಭಾಗ್ಯದ ಬಾಗಿಲು ತೆರೆದಂತೆ ಎಂದು ಕಾಲಿವುಡ್ ಖಾಲಿ ಬಾಯಿಗಳು ಮಾತಾಡುತ್ತಿವೆ.


Click it and Unblock the Notifications











