ಮಡಿಕೇರಿಯಲ್ಲಿ ಕೋತಿ ಕೋಳಿ ಆಟ ಬಲು ಜೋರು
ವಿಶಿಷ್ಟ ಹಾಗೂ ವಿಭಿನ್ನ ಟೈಟಲ್‌ನ ಚಿತ್ರ 'ಕೋ ಕೋ'. ಈ ರೀತಿಯ ವಿಶಿಷ್ಟ ಟೈಟಲ್ ಭಾರತೀಯ ಚಿತ್ರರಂಗದಲ್ಲೆ ಹೊಸದು ಎನ್ನುತ್ತಾರೆ ಅದರ ಸೃಷ್ಟಿಕರ್ತ ಆರ್ ಚಂದ್ರು. ಖೋ ಖೋ ಆಟದಂತೆಯೇ ಚಿತ್ರದ ಕತೆ ಕೂಡ ಇರುತ್ತದಂತೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಮಡಿಕೇರಿಯಲ್ಲಿ 'ಕೋತಿ ಕೋಳಿ' ಆಟದ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮಾತಿನ ಭಾಗದ ಸನ್ನಿವೇಶ ಹಾಗೂ ಎರಡು ಹಾಡುಗಳು ಈ ಹಂತದಲ್ಲಿ ಚಿತ್ರೀಕರಣಗೊಳ್ಳಲಿವೆ. ಶ್ರೀನಗರಕಿಟ್ಟಿ, ಪ್ರಿಯಾಮಣಿ, ಬುಲೆಟ್ ಪ್ರಕಾಶ್ ಹಾಗೂ ಸಹ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಸಕಲೇಶಪುರ ಹಾಗೂ ಕುಕ್ಕೆಸುಬ್ರಹ್ಮಣ್ಯದಲ್ಲೂ ಚಿತ್ರೀಕರಣ ನಡೆಯಲಿದೆ.
ತಮ್ಮ ಚಿತ್ರದ ಅಡಿಬರಹ ಕೋತಿ ಕೋಳಿ ಎಂದಿದ್ದರೂ ಎಲ್ಲೂ ಜೀವಂತ ಪ್ರಾಣಿ ಪಕ್ಷಿಗಳನ್ನು ಬಳಸಿಕೊಂಡಿಲ್ಲ ಎನ್ನುತ್ತಾರೆ ಚಂದ್ರು. ಕೋತಿ ಕೋಳಿ ಜಗಳದ ಹಿನ್ನೆಲೆಯಲ್ಲಿ ಕತೆ ಸಾಗುತ್ತದಂತೆ. ಆರ್.ಚಂದ್ರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಆದಿ ಅವರ ಸಹ ನಿರ್ಮಾಣವಿದೆ. ರಮಣಗೋಕುಲ ಅವರ ಸಂಗೀತ ನಿರ್ದೇಶನವಿರುವ 'ಕೋಕೋ'ಗೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ.
ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಶ್ರೀಹರಿ, ಅನುಪ್ರಭಾಕರ್, ಹರ್ಷಿಕಾ ಪೂಣಚ್ಛ, ರವಿಕಾಳೆ, ರಂಗಾಯಣ ರಘು, ಸಂಪತ್‌ಕುಮಾರ್, ಸುರೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ, ರಾಜು ತಾಳಿಕೋಟೆ, ಮಿತ್ರಾ, ರಘುರಾಂ, ಮೋಹನ್ ಜುನೇಜಾ, ಬಿರಾದಾರ್, ಜಿಮ್‌ರವಿ, ಪದ್ಮಜಾರಾವ್, ವಿಜಯಸಾರಥಿ, ಯತಿರಾಜ್, ಸ್ವಯಂವರ ಚಂದ್ರು ಮುಂತಾದವರಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











