»   » ರಿಲಾಯನ್ಸ್‌ನಿಂದ ಸಿನೆಮಾ ವಿಸಿಡಿ ಬಾಡಿಗೆ ಮಳಿಗೆ ಆರಂಭ

ರಿಲಾಯನ್ಸ್‌ನಿಂದ ಸಿನೆಮಾ ವಿಸಿಡಿ ಬಾಡಿಗೆ ಮಳಿಗೆ ಆರಂಭ

Subscribe to Filmibeat Kannada

ಸಣ್ಣ ಅಂಗಡಿಗಳನ್ನು ತೆರೆದು ವಿಸಿಡಿ, ಡಿವಿಡಿಗಳ ಮುಖಾಂತರ ಬಣ್ಣದ ಲೋಕದ ರಂಗುಗಳನ್ನು ಹಂಚುವ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಶಾಕ್ ಕಾದಿದೆ. ಪೆಟ್ರೋಲಿಯಂ ಉತ್ಪಾದನೆ ಸೇರಿದಂತೆ ಚಲನಚಿತ್ರ ನಿರ್ಮಾಣ, ತರಕಾರಿ ಮಾರಾಟಕ್ಕೂ ಕೈಹಾಕಿರುವ ರಿಲಾಯನ್ಸ್ ಅನಿಲ್ ಧೀರೂಭಾಯಿ ಗ್ರುಪ್ ಮತ್ತೊಂದು ವ್ಯಾಪಾರಿ ಕ್ಷೇತ್ರದ ಮೇಲೆ ಸಾರ್ವಭೌಮತ್ವ ಸ್ಥಾಪಿಸಲು ಮುಂದಾಗಿದೆ.

ರಿಲಾಯನ್ಸ್ ಗ್ರುಪ್‌ನ ಅಂಗ ಸಂಸ್ಥೆಯಾದ ಬಿಗ್‌ಫ್ಲಿಕ್ಸ್ ವಿಸಿಡಿ ಮತ್ತು ಡಿವಿಡಿಗಳನ್ನು ಬಾಡಿಗೆ ನೀಡುವ ಅಂಗಡಿಗಳನ್ನು ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಹೈದರಾಬಾದ್ ಮತ್ತು ಚಂಡೀಗಢಗಳಲ್ಲಿ ತೆರೆದಿದೆ. ಬಿಗ್‌ಫ್ಲಿಕ್ಸ್‌ನ ಚೀಫ್ ಆಪರೇಟಿಂಗ್ ಆಫೀಸರ್ ಆಗಿರುವ ಕಮಲ್ ಗಿಯನ್‌ಚಂದಾನಿ ಅವರ ಪ್ರಕಾರ, 2009ರ ಮಾರ್ಚ್‌ದೊಳಗೆ 30 ನಗರಗಳಲ್ಲಿ 500ಕ್ಕೂ ಹೆಚ್ಚು ಅಂಗಡಿಗಳನ್ನು ತೆರೆಯುವ ಗುರಿಯನ್ನು ಇಟ್ಟುಕೊಂಡಿದೆ.

ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಪಂಜಾಬಿ ಭಾಷೆಗಳಲ್ಲಿ ಸಿನೆಮಾ ವಿಸಿಡಿ, ಡಿವಿಡಿಗಳನ್ನು ಬಾಡಿಗೆ ನೀಡುತ್ತಿರುವ ಬಿಗ್‌ಫ್ಲಿಕ್ಸ್ ಅಂತಾರಾಷ್ಟ್ರೀಯ ಚಿತ್ರಗಳೂ ಸೇರಿದಂತೆ 14 ಸಾವಿರಕ್ಕೂ ಹೆಚ್ಚಿನ ಸಿಡಿಗಳನ್ನು ಬಾಡಿಗೆಗೆ ನೀಡಲಿದೆ. ಅಂತರ್ಜಾಲ ತಾಣದ ಮುಖಾಂತರವೂ ಆನ್‌ಲೈನ್ ಬಳಕೆದಾರರಿಗೆ ಸಿಡಿಗಳನ್ನು ವಿತರಿಸುತ್ತಿವ ಬಿಗ್‌ಫ್ಲಿಕ್ಸ್,ಆಫ್‌ಲೈನ್‌ನಲ್ಲಿಯೂ ಭಾರತದಲ್ಲಿ ಸಿನೆಮಾ ಸಿಡಿ ವಿತರಣಾ ಕ್ಷೇತ್ರದಲ್ಲಿ ಅತಿ ದೊಡ್ಡ ಸಂಸ್ಥೆ ಎಂಬ ಖ್ಯಾತಿಯತ್ತ ದಾಪುಗಾಲು ಹಾಕುತ್ತಿದೆ.

ರಿಲಾಯನ್ಸ್ ಫ್ರೆಷ್ ಮಳಿಗೆಗಳನ್ನು ದೇಶದೆಲ್ಲೆಡೆ ತೆರೆದಾಗ ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ನಗರಗಳಲ್ಲಿ ಸಗಟು ಮಾರಾಟಗಾರರಿಂದ ಭಾರೀ ಪ್ರತಿಭಟನೆ ಎದುರಿಸಿತ್ತು. ದೆಹಲಿಯಲ್ಲಿನ ಎಲ್ಲ ಮಳಿಗೆಗಳನ್ನು ಬಲವಂತವಾಗಿ ಮುಚ್ಚಬೇಕಾಯಿತು. ಈಗ ಸಿಡಿ ಕ್ಷೇತ್ರದಲ್ಲಿಯೂ ಪ್ರಭುತ್ವ ಸ್ಥಾಪಿಸಲು ಮುಂದಾಗಿರುವುದು ಬಿಗ್‌ಫ್ಲಿಕ್ಸ್ ಸಣ್ಣ ವ್ಯಾಪಾರಿಗಳಿಂದ ಸಿಡಿದೇಳುವ ಸಾಧ್ಯತೆಯಿದೆ. ಪೈರಸಿ ಮಣ್ಣುಮಸಿ ಮಾಡಿ 10 ಅಥವಾ 15 ರುಪಾಯಿಗೆ ಸಿಡಿಗಳನ್ನು ಬಾಡಿಗೆ ನೀಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ವ್ಯಾಪಾರಿಗಳು ಮತ್ತೊಮ್ಮೆ ರಿಲಾಯನ್ಸ್ ವಿರುದ್ಧ ಕಿಡಿಕಾರಲಿದ್ದಾರೆಯೇ? ಕಾಲವೇ ಉತ್ತರಿಸಬೇಕು. ಅಥವಾ ರಿಲಾಯನ್ಸ್‌ನ ಬಿಗ್ ಪ್ರಭಾವದೆದಿರು ಸ್ಮಾಲ್ ವ್ಯಾಪಾರಿಗಳು ಫ್ಲಿಕ್ ಆದರೂ ಆಶ್ಚರ್ಯವಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada