»   » ನಟಿ ಸರೋಜಾದೇವಿಗೆ ಜೀವಮಾನ ಸಾಧನೆ ಪ್ರಶಸ್ತಿ

ನಟಿ ಸರೋಜಾದೇವಿಗೆ ಜೀವಮಾನ ಸಾಧನೆ ಪ್ರಶಸ್ತಿ

Subscribe to Filmibeat Kannada

ನವದೆಹಲಿ, ಜೂ.20: ಚತುರ್ಭಾಷಾ ತಾರೆ, ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಬಿ.ಸರೋಜದೇವಿ ಸೇರಿದಂತೆ ಚಿತ್ರರಂಗದ ನಾಲ್ವರಿಗೆ ಕೇಂದ್ರ ಸರ್ಕಾರ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ.

60ನೇ ಸ್ವಾತಂತ್ರ್ಯೋತ್ಸವದ ವರ್ಷಾಚರಣೆ ಅಂಗವಾಗಿ ಈ ಪ್ರಶಸ್ತಿ ನೀಡಲಾಗುತ್ತ್ತಿದೆ. ಇದೇ ಪ್ರಶಸ್ತಿಗೆ ಗಾನ ಕೋಗಿಲೆ ಲತಾ ಮಂಗೇಶ್ಕರ್, ನಟ ದಿಲೀಪ್ ಕುಮಾರ್ ಹಾಗೂ ನಿರ್ದೇಶಕ ತಪನ್ ಸಿನ್ಹಾ ಪಾತ್ರರಾಗಿದ್ದಾರೆ.ತಪನ್ ಅವರಿಗೆ ಶುಕ್ರವಾರ(ಜೂ.20) ಪ್ರಶಸ್ತಿ ನೀಡಲಾಗುತ್ತಿದ್ದು ಉಳಿದ ಕಲಾವಿದರಿಗೆ ಪ್ರಶಸ್ತಿ ನೀಡುವ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ.

1955ರಲ್ಲಿ ಹೊನ್ನಪ್ಪ ಭಾಗವತರ್ ನಿರ್ದೇಶನದ 'ಮಹಾಕವಿ ಕಾಳಿದಾಸ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸರೋಜಾದೇವಿ ಕನ್ನಡ, ತೆಲುಗು, ತಮಿಳು,ಹಿಂದಿ ಸೇರಿದಂತೆ 180 ಚಿತ್ರಗಳಲ್ಲಿ ನಟಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಮಲ್ಲಮ್ಮನ ಪವಾಡ, ಬಭ್ರುವಾಹನ, ರತ್ನಗಿರಿ ರಹಸ್ಯ, ಚಿಂತಾಮಣಿ ಸೇರಿದಂತೆ 80ಕ್ಕೂ ಹೆಚ್ಚು ಚಿತ್ರಗಳ ಮನೋಜ್ಞ ಅಭಿನಯ ಮನ ಮಿಡಿಯುತ್ತದೆ.

ಬಾಲಿವುಡ್‌ನ ದಿಲೀಪ್ ಕುಮಾರ್ ಸೇರಿದಂತೆ ದಕ್ಷಿಣದ ಖ್ಯಾತ ನಟರಾದ ಡಾ.ರಾಜ್‌ಕುಮಾರ್, ತಮಿಳಿನ ಶಿವಾಜಿ ಗಣೇಶನ್, ಜೆಮಿನಿ ಗಣೇಶ್, ತೆಲುಗಿನ ಎನ್.ಟಿ.ರಾಮಾರಾವ್ ಅವರೊಂದಿಗೆ ನಟಿಸಿದ ಹೆಗ್ಗಳಿಗೆ ಸರೋಜಾದೇವಿ ಅವರದು. ಪದ್ಮಶ್ರೀ (1969), ಪದ್ಮಭೂಷಣ(1992), ಫಿಲ್ಮ್‌‍ಫೇರ್ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ(1989), ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ, ಆಂಧ್ರದ ಎನ್‌ಟಿಆರ್ ಪ್ರಶಸ್ತಿ(2001) ಸೇರಿದಂತೆ ಹಲವಾರು ಪ್ರಶಸ್ತಿಗಳು ಸರೋಜದೇವಿ ಮುಡಿಗೇರಿವೆ.

(ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada