For Quick Alerts
ALLOW NOTIFICATIONS  
For Daily Alerts

ಶಿವಣ್ಣ ಕೊಟ್ಟ ಸಾಲ ಸಾಯಿ ಬದುಕು ನೀರು ಪಾಲಾ?

By *ಮಹೇಶ್ ದೇವಶೆಟ್ಟಿ
|

ಸಾಯಿಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಭವಿಷ್ಯ ಇನ್ನೂ ಅಪಾಯದಿಂದ ಪಾರಾಗಿಲ್ಲ...! ಮೂರು ದಿನಗಳ ಹಿಂದೆ ನಿದ್ದೆ ಗುಳಿಗೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು. ಹೀಗಾಗಿ ಬದುಕು ಇನ್ನೊಮ್ಮೆ ಇವರನ್ನು ಹುಡುಕಿಕೊಂಡು ಬಂತು. ಸದ್ಯಕ್ಕೆ ಈ ಹಿರಿಯ ಜೀವ ಚೇತರಿಸಿಕೊಳ್ಳುತ್ತಿದೆ. ಆದರೆ ಮನಸು ಮಾತ್ರ ಇನ್ನೂ ಅದೇ ನೋವು, ಹತಾಶೆ ಮತ್ತು ಭಯದಿಂದ ಹೊರಗೆ ಬಂದಿಲ್ಲ. ಸದ್ಯಕ್ಕೆ ಹೊರಗೆ ಬರುವ ಲಕ್ಷಣ ಗಳೂ ಕಾಣುತ್ತಿಲ್ಲ. ಕಾರಣ ಕಣ್ಣ ಮುಂದಿದೆ ಭರ್ತಿ ಎರಡು ಕೋಟಿ ಸಾಲ...!

ಇದು ಇವರಿಗೆ ಶಿವಣ್ಣ ಕೊಟ್ಟ ಸಾಲ...ಅಂದರೆ ಶಿವಣ್ಣ ಅಭಿನಯದ ದೇವರು ಕೊಟ್ಟ ತಂಗಿ ಚಿತ್ರದಿಂದಾದ ನಷ್ಟದಿಂದ ಸಾಯಿಗೆ ಬಯಸದೆ ಬಂದ ಭಾಗ್ಯ. ಈ ಚಿತ್ರವನ್ನು ಸ್ವತಃ ಸಾಯಿ ನಿರ್ಮಿಸಿ, ನಿರ್ದೇಶನ ಮಾಡಿದ್ದರು. ಸುಮಾರು ಐವತ್ತು ವರ್ಷಗಳ ಹಿಂದೆ ಡಾ.ರಾಜ್ ಅಭಿನಯದ ಇದೇ ಹೆಸರಿನ ಚಿತ್ರವನ್ನು ಇಟ್ಟು ಒಂದು ಕೈ ನೋಡಲು ಹೋಗಿದ್ದರು. ಆದರೆ ಜನರು ಇವರಿಗೆ ಕೈ ಕೈ ಮುಗಿದು ಬಿಟ್ಟರು. ಕಾರಣ ಏನೇ ಇರಲಿ...ಫಲಿತಾಂಶ ಮಾತ್ರ : ಸಾಯಿ ಬದುಕು ನೀರು ಪಾಲು...

ಈಗಾಗಲೇ ಎಂಬತ್ತೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಸಾಯಿ ಮೂಲತಃ ಆಂಧ್ರದಿಂದ ಬಂದವರು. ಅಲ್ಲಿ ಕೆಲವು ಚಿತ್ರಗಳನ್ನು ನಿರ್ದೇಶನ ಮಾಡಿ ನಂತರ ಕನ್ನಡ ನಾಡಿಗೆ ಬಂದರು. ರಿಮೇಕ್ ಚಿತ್ರಗಳನ್ನು ಮಾಡಿದರು. ಹದಿನೆಂಟು ದಿನಗಳಲ್ಲಿ ರೀಲು ಸುತ್ತಿ ಕೋಟಿ ಕೋಟಿ ಬಾಚುವ ಮಾಲಾಶ್ರೀ ಚಿತ್ರಗಳನ್ನು ನಿರ್ದೇಶಿಸಿದರು. ಯಾರು ಏನೇ ಅಂದರೂ ಇವರ ಕೆಲಸ ಮತ್ತು ಸಿನಿಮಾ ಪ್ರೀತಿಯ ಬಗ್ಗೆ ಮಾತಾಡದಂತೆ ನೋಡಿಕೊಂಡರು. ಸಾಯಿ ಬಾಬಾ ಭಕ್ತರಾಗಿದ್ದರು. ನಿಯತ್ತನ್ನು ಎಂದೂ ಮರೆಯದೆ ಕೆಲಸ ಮಾಡಿದರು.

ಎಲ್ಲವೂ ಚೆನ್ನಾಗಿತ್ತು ಎಂದುಕೊಳ್ಳುವಾಗ ದೇವರು ಕೊಟ್ಟ ತಂಗಿಗೆ ಶಿವಣ್ಣನನ್ನು ನಂಬಿ ಕಾಸು ಸುರಿದರು. ಈಗ ಈ ಸ್ಥಿತಿಗೆ ತಲುಪಿದ್ದಾರೆ. ಇವರ ಸಾಲದ ವಿಷಯ ಗೊತ್ತಾಗಿ ಶಿವಣ್ಣ ಕೂಡ ' ಏನಾದರೂ ಮಾಡೋಣ ಅಂಕಲ್..." ಎಂದು ಭರವಸೆ ನೀಡಿದ್ದಾರೆ. ಆತ್ಮಹತ್ಯೆ ಯತ್ನ ನಡೆದ ನಂತರವೂ ಶಿವಣ್ಣ ಇದೇ ಮಾತನ್ನು ಹೇಳಿದ್ದಾರೆ. ಆದರೆ ಅವರು ಏನು ಮಾಡಲಿದ್ದಾರೆ ಎನ್ನುವುದು ಸಸ್ಪೆನ್ಸ್ ಸಿನಿಮಾ.

ಇಲ್ಲ...ಶಿವಣ್ಣ ಮಾಡಲೇಬೇಕು. ಸುಮಾರು ಎಂಬತ್ತೈದು ಲಕ್ಷ ಸಂಭಾವನೆ ಪಡೆಯುವ ಇವರು ಅದನ್ನು ಪಡೆಯದೇ ಕಾಲ್ ಶೀಟ್ ಕೊಡಬೇಕು. ಅವರದೇ ಔಟ್ ಡೋರ್ ಯುನಿಟ್ ಕೂಡ

ಮುಂದಿನ ಸಾಯಿ ಸಿನಿಮಾಕ್ಕೆ ಉಚಿತವಾಗಿ ಕೆಲಸ ಮಾಡಬೇಕು.ಶಿವಣ್ಣ ಹೇಳಿದರೆ ನಟಿಸಲಿರುವ ಯಾವ ನಟ ನಟಿ ಮತ್ತು ತಂತ್ರಜ್ಞರೂ ಕಾಸಿಲ್ಲದೆ ಸಿನಿಮಾ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಉಳಿದ ಖರ್ಚನ್ನು ಹೇಗಾದರೂ ಮಾಡಿ ಹೊಂದಿಸುವ ಕೆಲಸವನ್ನು ಸ್ವತಃ ಇವರೇ ಹೊತ್ತುಕೊಳ್ಳಬೇಕು. ವಿಡಿಯೊ ಮತ್ತು ಆಡಿಯೊ ಹಕ್ಕುಗಳನ್ನು ಒಳ್ಳೆ ರೇಟಿಗೆ ಮಾರಿಸಿಕೊಡುವ ವ್ಯವಸ್ಥೆಯನ್ನು ಮಾಡಿದರೆ ಶಿವಣ್ಣನ ಅರ್ಧ ಕೆಲಸ ಮುಗಿಯುತ್ತದೆ.

ಉಳಿದದ್ದನ್ನು ಜನರು ನೋಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಶಿವಣ್ಣನೇ ಯಾಕೆ ಮಾಡಬೇಕು ಅಂದರೆ ಇಲ್ಲಿದೆ ಓದಿ... ಕೆಲವು ವರ್ಷಗಳ ಹಿಂದೆ ಶಿವಣ್ಣ ಅಭಿನಯದ ಹದಿನೆಂಟು ಚಿತ್ರಗಳು ಸತತವಾಗಿ ಸೋತಿದ್ದವು. ಒಬ್ಬ ನಾಯಕನ ಒಂದು ಚಿತ್ರ ಸೋತರೇ ಇಲ್ಲಿ ಅವರನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಹೀಗಿದ್ದರೂ ಶಿವಣ್ಣನನ್ನು ಕಂಡರೆ ಕೆಲವು ನಿರ್ಮಾಪಕರಿಗೆ ಏನೋ ಪ್ರೀತಿ. ಆ ಪ್ರೀತಿಗೆ ಬೇಕಾದದ್ದು ಹತ್ತು ಚಿತ್ರಗಳಲ್ಲಿ ಒಂದೇ ಒಂದು ಚಿತ್ರದ ಗೆಲುವು. ಆಗ ಸಾಯಿ ನಿರ್ದೇಶನದ 'ತವರಿಗೆ ಬಾ ತಂಗಿ' ಚಿತ್ರ ಬಂತು. ಮತ್ತೆ ಕನ್ನಡ ಚಿತ್ರತಂಗಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿತು. ಹಾಗೇ ಶಿವಣ್ಣನ ವೃತ್ತಿಬದುಕಿಗೂ...ಅದಾದ ವರ್ಷಗಳ ನಂತರ ಬಂದದ್ದು ಅಣ್ಣ ತಂಗಿ. ಅದೂ ಸೂಪರ್ ಹಿಟ್ ಆಯಿತು.

ಒಂದು ಮೂಲದ ಪ್ರಕಾರ ಜೋಗಿ ಚಿತ್ರಕ್ಕಿಂತ ಇದು ಹೆಚ್ಚು ಕಲೆಕ್ಷನ್ ಮಾಡಿತು. ಇದರಿಂದ ಶಿವಣ್ಣನ ಜೋಳಿಗೆಗೆ ಇನ್ನಷ್ಟು ಚಿತ್ರಗಳು ಬಂದು ಬಿದ್ದವು. ಆದರೂ ಸಾಯಿ ಪ್ರಕಾಶ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೆ ? ಒಂದೇ ಕೈಯ ಬೆರಳುಗಳನ್ನು ಎಣಿಸುವ ಲಕ್ಷಗಳಷ್ಟೇ...ಈಗ ನೀವೇ ಹೇಳಿ...ಶಿವಣ್ಣ ಸೋತ ಸಮಯದಲ್ಲಿ ಅವರಿಗೆ ಬ್ರೇಕ್ ಕೊಟ್ಟು ಇನ್ನಷ್ಟು ಚಿತ್ರಗಳಲ್ಲಿ

ಪರೋಕ್ಷವಾಗಿ ನಟಿಸುವಂತೆ ಮಾಡಿದ ಸಾಯಿ ಪ್ರಕಾಶ್ ಗೆ ಶಿವಣ್ಣ ಇಷ್ಟೂ ಮಾಡದಿದ್ದರೆ ಹೇಗೆ ?

ಎಲ್ಲ ನಟರೂ ಹೀಗೇ ಮಾಡುತ್ತಾ ಹೋದರೆ ನಾವೇನು ಹೊಟ್ಟೆಗೆ ಮಣ್ಣು ತಿನ್ನಬೇಕಾ ಎಂದು ಸ್ಟಾರ್ ಗಳು ಕೇಳಬಹುದು. ಇಲ್ಲ...ಅದು ಹಾಗಲ್ಲ...ಎಲ್ಲರೂ ಎಲ್ಲ ಹೊತ್ತಿನಲ್ಲೂ ಹೀಗೆ ಮಾಡಬೇಕಾಗಿಲ್ಲ. ಹಾಗೇ ಕೇಳುವುದು ವ್ಯವಹಾರಿಕವೂ ಅಲ್ಲ. ಆದರೆ ಇಲ್ಲಿ ಸಂದರ್ಭ ಬೇರೆ ಇದೆ. ಶಿವಣ್ಣನ ಕನಿಷ್ಟ ಹತ್ತು ಚಿತ್ರಗಳ ಸಂಭಾವನೆಗೆ ಸಾಯಿ ನಿರ್ದೇಶನದ ಒಂದು ಚಿತ್ರ ಕಾರಣವಾಗಿದೆ. ಸೋ...ಶಿವಣ್ಣನ ಜೀವಮಾನದ ಮೂವತ್ತೈದು ದಿನ ಹೆಚ್ಚೋ...ಸಾಯಿಪ್ರಕಾಶ್ ಅವರ ಬದುಕು ಹೆಚ್ಚೋ...?

ಅವರ ಜೀವ ಹೋದರೆ ನಾನೇನು ಮಾಡಲಿ ಎನ್ನುವಷ್ಟು ಶಿವಣ್ಣ ಕಟುಕರಲ್ಲ...ಅವರ ಪತ್ನಿ ಗೀತಾ ಕಾಸಿಗೆ ಕಾಸು ಲೆಕ್ಕ ಹಾಕುತ್ತಾರೆಂಬುದು ನಿಜ. ಆದರೆ ಇಂಥ ಹೊತ್ತಿನಲ್ಲಿ ಅವರನ್ನು ಕನ್ವಿನ್ಸ್ ಮಾಡುವುದು ಹ್ಯಾಟ್ರಿಕ್ ಹೀರೊಗೆ ದೊಡ್ಡದಲ್ಲ...ಸದ್ಯದಲ್ಲೇ ಸೆಂಚುರಿ ಹೀರೊ ಆಗುತ್ತಿರುವ ಶಿವಣ್ಣ ಆ ಕೃತಕ ಸಂಭ್ರಮಕ್ಕಿಂತ ಸಾಯಿ ಬದುಕನ್ನು ರೂಪಿಸುವ ನಿಜವಾದ ಸಂಭ್ರಮಕ್ಕೆ ಮುನ್ನುಡಿ ಬರೆಯಲಿ... ಎಲ್ಲೋ ಇರುವ ಅಣ್ಣಾವ್ರ ಆತ್ಮ ತೃಪ್ತಿಪಡುತ್ತದೆ... ಶಿವಣ್ಣ ನಿಜಕ್ಕೂ ಜಗ ಮೆಚ್ಚಿದ ಮಗನಾಗುತ್ತಾರೆ...ಆಗಲಿ ಎನ್ನುವುದು ಆಸೆ, ಆಗುತ್ತಾರಾ ಎನ್ನುವುದು ಪ್ರಶ್ನೆ...ಓವರ್ ಟು ಶಿವಣ್ಣ...(ಸ್ನೇಹಸೇತು: ವಿಜಯ ಕರ್ನಾಟಕ)

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more