ಬೆಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ತಾರೆ ಜಮೀನ್ ಪರ್

By Staff

ಬೆಂಗಳೂರಿನಲ್ಲಿರುವ ವೃತ್ತಿನಿರತರ ಕ್ಲಬ್ಬುಗಳಲ್ಲಿ ಕುಡಿತ ಮತ್ತು ಇಸ್ಪೀಟು ಆಟಕ್ಕೆ ಹೆಚ್ಚು ಪ್ರಾಧಾನ್ಯತೆ. ವಿಶೇಷ ಸಂದರ್ಭಗಳಲ್ಲಿ, ವಾರಾಂತ್ಯಗಳಲ್ಲಿ ಸದಸ್ಯರ ಕುಟುಂಬಗಳು ಕಲೆತು ಕಾಲಕಳೆಯುವಂತಹ ವಾತಾವರಣ ಬೆಂಗಳೂರು ಕ್ಲಬ್ ಸಂಸ್ಕೃತಿಯಲ್ಲಿ ತೀರ ಕಡಿಮೆ. ನ್ಯೂಸ್ ಪೆಗ್ಗಿಗೋಸ್ಕರ ಒಂದೆರಡು ಪೆಗ್ಗು ಹಾಗೂ ಉದ್ಯೋಗ ಮಿತ್ರರೊಡನೆ ಅನೌಪಚಾರಿಕ ಹರಟೆ ಮಾತ್ರವಲ್ಲದೆ ಇನ್ನಿತರ ಉಲ್ಲಾಸದಾಯಕ, ಆರೋಗ್ಯಕರ ಚಟುವಟಿಕೆಗಳನ್ನು ರೂಪಿಸುವುದರಲ್ಲಿ ಕ್ಲಬ್ ಆಡಳಿತ ವರ್ಗಗಳು ಹಿಂದೆ ಬಿದ್ದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪೇಜ್ ತ್ರೀ ಲಲನೆಯರನ್ನು ಹೊರತು ಪಡಿಸಿದರೆ ಗೃಹಿಣಿಯರು ಮತ್ತು ಅವರ ಮನೆಮಂದಿ ಕ್ಲಬ್ ಅಂಗಳಕ್ಕೆ ಕಾಲಿಡುವುದು ತುಂಬಾ ಕಡಿಮೆ.

ಈ ವಿದ್ಯಮಾನಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ಹೊರತಲ್ಲ. ಆದರೆ, ಕ್ಲಬ್ ಎಂದರೆ ಗುಂಡುಗೋವಿಗಳ ಅಡಗುದಾಣ ಎಂಬ ಕುಖ್ಯಾತಿಯನ್ನು ಹೋಗಲಾಡಿಸುವಲ್ಲಿ ಪ್ರೆಸ್ ಕ್ಲಬ್ಬನ್ನು ಆಳಿದ ಅನೇಕ ಆಡಳಿತ ಮಂಡಳಿ ಸದಸ್ಯರು ಶ್ರಮಿಸಿಕೊಂಡೇ ಬಂದಿದ್ದಾರೆ. ಪ್ರಸಕ್ತ ವರ್ಷದ ಆಡಳಿತ ವರ್ಗಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉಮೇದು ಹೆಚ್ಚಾಗಿರುವುದರಿಂದ ಸದಸ್ಯರು ಸಹಜವಾಗಿಯೇ ಹೆಚ್ಚು ಉಲ್ಲಸಿತರಾಗಿದ್ದಾರೆ.

ಕಳೆದ ವರ್ಷ ಆರಂಭವಾದ 'ವಾರಕ್ಕೊಂದು ಸಿನಿಮಾ' ಕಾರ್ಯಕ್ರಮ ಹಲವರನ್ನು ಸಂತುಷ್ಟಗೊಳಿಸಿದೆ. ಈ ದಿಕ್ಕಿನಲ್ಲಿ ಸದ್ಯದ ಆಡಳಿತ ಮಂಡಳಿಯು ಮುಂದುವರೆಯುತ್ತಿದ್ದು ಸಿನಿಮಾ ಸಂಸ್ಕೃತಿಯನ್ನು ಜೀವಂತವಿಡಲು ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ವಾರಕ್ಕೊಂದು ಸಿನಿಮಾ ಮಾಲಿಕೆಯಲ್ಲಿ ನಾಳೆ ಅಂದರೆ ಶನಿವಾರ ನವೆಂಬರ್ 21 ರಂದು ಕಬ್ಬನ್ ಪಾರ್ಕ್ ನಲ್ಲಿರುವ ಕ್ಲಬ್ಬ್ ಆವರಣದಲ್ಲಿ ಅಮೀರ್ ಖಾನ್ ಅಭಿನಯದ ತಾರೆ ಜಮೀನ್ ಪರ್ ಪ್ರದರ್ಶನ ಇಟ್ಟುಕೊಳ್ಳಲಾಗಿದೆ. ಇತ್ತೀಚೆಗೆ ತೆರೆಕಂಡ ಭಾರತೀಯ ಚಿತ್ರಗಳ ಪೈಕಿ ಇದಕ್ಕಿಂತ ಒಳ್ಳೆ ಸಿನಿಮಾ ಇನ್ನಿಲ್ಲ ಎಂದು ದಟ್ಸ್ ಕನ್ನಡ ಡಂಗುರ ಸಾರುತ್ತದೆ.

ತಂದೆ ತಾಯಿಯರು ತಮ್ಮಮಕ್ಕಳೊಂದಿಗೆ ಆಗಮಿಸಿ ನೋಡಲೇಬೇಕಾದ ಚಿತ್ರವಿದು. ಕ್ಲಬ್ಬಿನ ಸದಸ್ಯರಿಗೆ ಮಾತ್ರ ಪ್ರವೇಶವಿದೆ. ಆದರೆ, ಸದಸ್ಯರ ಸಂಗಡ ಬರುವ ಅತಿಥಿಗಳಿಗೆ ನೊಂದಾವಣೆ ಸಮೇತ ಪ್ರವೇಶಾವಕಾಶವಿರುತ್ತದೆ. ಸಿನಿಮಾ ಸಂಜೆ 7 ಕ್ಕೆ ಶುರು. ಈ ಸಂದರ್ಭವನ್ನು ಸಿನಿಮಾಸಕ್ತ ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಅಧ್ಯಕ್ಷ ಎಂ ಎ ಪೊನ್ನಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಕೆ. ಸದಾಶಿವಶೆಣೈ ಕೋರಿದ್ದಾರೆ.

ಸಿನಿಮಾ ಜತೆಗೆ ಆರೋಗ್ಯ ಕಳಕಳಿಯೂ ಉಂಟು. ಇದೇ ಭಾನುವಾರ 22 ರಂದು ಬೆಳಗ್ಗೆ 9.30 ರಿಂದ 2 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ. ತಜ್ಞ ವೈದ್ಯರ ತಂಡ ಪತ್ರಕರ್ತರು ಮತ್ತವರ ಕುಟುಂಬವರ್ಗದವರ ಆರೋಗ್ಯ ಕ್ಷೇಮ ವಿಚಾರಿಸಿ ಸೂಕ್ತ ಸಲಹೆ ನೀಡುವರು. ಇದೇ ವೇಳೆ, ಒಂದು ಪೆಗ್ ಕಡಿಮೆ ಕುಡಿದರೆ ಸುದ್ದಿದಾಹಿಯ ದೈಹಿಕ,ಮಾನಸಿಕ ಆರೋಗ್ಯ ಮತ್ತವನ ಸಂಸಾರದ ಆರೋಗ್ಯ ತಂತಾನೆ ಸುಧಾರಿಸುತ್ತದೆ ಎಂಬ ಪ್ರಿಸ್ ಕ್ರಿಷ್ಷನ್ ಅನ್ನು ದಟ್ಸ್ ಕನ್ನಡ ಬರೆದುಕೊಡುತ್ತದೆ. ಬಳಸಿರಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X