»   » 'ವಂಶಿ' ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಸ್ಪಷ್ಟೀಕರಣ

'ವಂಶಿ' ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಸ್ಪಷ್ಟೀಕರಣ

Subscribe to Filmibeat Kannada

ಪಾರ್ವತಮ್ಮ ರಾಜಕುಮಾರ್ ಸ್ವಂತ ಬ್ಯಾನರ್ ನಲ್ಲಿ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿರುವ 'ವಂಶಿ' ಚಿತ್ರ ರಿಮೇಕೋ ಅಥವಾ ಸ್ವಮೇಕೋ ಎನ್ನುವ ಚರ್ಚೆಗೆ ವಜ್ರೇಶ್ವರಿ ಕಂಬೈನ್ಸ್ ಅಂತ್ಯ ಹಾಡಲು ಪ್ರಯತ್ನಿಸಿದೆ. ಇದು ತಮಿಳಿನ 'ನಂದ' ಚಿತ್ರದ ರಿಮೇಕ್ ಅಲ್ಲ ಎಂದು ರಾಘವೇಂದ್ರ ರಾಜಕುಮಾರ್ ಸ್ಪಷ್ಟ ಪಡಿಸಿದ್ದಾರೆ.''ನಂದ ಚಿತ್ರದಲ್ಲಿ ತಾಯಿಯೇ ಮಗನಿಗೆ ವಿಷ ಹಾಕಿ ಸಾಯಿಸುತ್ತಾಳೆ. ಆ ಕಾರಣಕ್ಕಾಗಿ ಆ ಸುದ್ದಿ ಹಬ್ಬಿರಬಹುದು.

ತಾಯಿ ಮಗನನ್ನು ಸಾಯಿಸುವ ಎಷ್ಟೊಂದು ಸಿನಿಮಾ ಕಥೆಗಳು ತೆರೆಗೆ ಬಂದಿಲ್ಲ. ಹಾಗಂತ ಇದನ್ನ ರಿಮೇಕ್ ಎಂದು ಹೇಳುವುದು ನ್ಯಾಯವೇ'' ಎನ್ನುವುದು ಅವರ ಪ್ರಶ್ನೆ. ಇಡೀ ಸಿನಿಮಾಕ್ಕೆ ಕೂತು ಒಳ್ಳೆಯ ಸ್ಕ್ರಿಪ್ಟ್ ಸಿದ್ಧಪಡಿಸಿದ್ದನ್ನ ಲೆಕ್ಕಿಸದೆ ಕೊನೆಯ ದೃಶ್ಯವನ್ನು ಗಮನದಲ್ಲಿಟ್ಟುಕೊಂಡು ವಂಶಿ ರಿಮೇಕ್ ಚಿತ್ರ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ರಾಘವೇಂದ್ರ ರಾಜ್ ಕುಮಾರ್ ದೊಡ್ಡ ಪ್ರಶ್ನೆಯನ್ನು ಎತ್ತಿದ್ದಾರೆ.

ರಿಮೇಕ್ ಮಾಡಿದರೆ ಅದು ರಿಮೇಕ್ ಎಂದು ಹೇಳಿಯೇ ಚಿತ್ರವನ್ನು ಶುರುಮಾಡುತ್ತೇವೆ. ಈ ಹಿಂದೆ ಪುನಿತ್ ಅಭಿನಯದ 'ಅಜಯ್' ಚಿತ್ರ ಮಾಡಿದಾಗ ಅದು ತೆಲುಗಿನ 'ಒಕ್ಕಡು' ವಿನ ರಿಮೇಕ್ ಎಂದು ಹೇಳಿಯೇ ಮಾಡಿರಲಿಲ್ಲವೇ? ಅದರಲ್ಲಿ ಯಾವುದೇ ಮುಚ್ಚು ಮರೆ ಮಾಡುವ ಉದ್ದೇಶ ನಮ್ಮ ಸಂಸ್ಥೆಗೆ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

'ವಂಶಿ' ಚಿತ್ರಕ್ಕೆ 'ಅಪ್ಪು' ತರಹ ಉತ್ತಮ ಓಪನಿಂಗ್ ಸಿಕ್ಕಿದೆಯಂತೆ. ಕಳೆದ ವರ್ಷದ ಬ್ಲಾಕ್ ಬಸ್ಟರ್ 'ಮಿಲನ'ಕ್ಕೂ ಈ ತರದ ಓಪನಿಂಗ್ ಸಿಕ್ಕಿರಲ್ಲಿವಂತೆ. ಮೊದಲ ವಾರದಲ್ಲೇ ವಂಶಿ ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿತ್ತು. ಇಂಥ ಸಂದರ್ಭದಲ್ಲಿ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಪ್ರತಿಕ್ರಿಯೆ ನಿಜಕ್ಕೂ ಖುಷಿ ತರುತ್ತಿದೆ ಎನ್ನುತ್ತಾರೆ ರಾಘವೇಂದ್ರ ರಾಜ್ ಕುಮಾರ್.

ಓದುಗರ ಗಮನಕ್ಕೆ: ರಾಜ್ ಕುಮಾರ್ ಅವರ ಬ್ಯಾನರ್ ನ ಅಷ್ಟೂ ಚಿತ್ರಗಳಿಗೆ ಸುಂದರ ಕಥೆಗಳನ್ನು ಆಯ್ಕೆ ಮಾಡಿ ಸದಭಿರುಚಿಯ ಸಾಂಸಾರಿಕ ಚಿತ್ರವನ್ನು ತೆರೆಯ ಮೇಲೆ ಪ್ರೇಕ್ಷಕರು ನೋಡುವಂತೆ ಮಾಡಿದ ಕೀರ್ತಿ ಡಾ. ರಾಜ್ ಅವರ ಸೋದರ ವರದರಾಜ್(ವರದಪ್ಪ) ಅವರಿಗೆ ಸಲ್ಲುತ್ತದೆ. ಅವರು ಕಾಲವಾದ ನಂತರ ಈ ಜವಾಬ್ದಾರಿ ರಾಘವೇಂದ್ರ ರಾಜ್ ಕುಮಾರ್ ಅವರ ಹೆಗಲ ಮೇಲೆ ಬಿದ್ದಿದೆ. ಕಥೆ ಆಯ್ಕೆಯಾಗಿ ರಾಘಣ್ಣ ಅವರ ಒಪ್ಪಿಗೆ ಪಡೆದ ನಂತರವಷ್ಟೇ ಮುಂದಿನ ಹೆಜ್ಜೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಪೂರಕ ಸಿನಿಮಾ ಸುದ್ದಿಗಳು
'ವಂಶಿ' ಪ್ರಚಾರ ತಂತ್ರಕ್ಕೆ ಸುವರ್ಣ ಲಕ್ಸುರಿ ಬಸ್ ಗಳು
ಕನ್ನಡದ ಕರಣ್ ಜೋಹರ್, ಬರಿಸಿದ ಜ್ವರ !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada