ಮುತ್ತು'ರಾಜ'ನಿಲ್ಲದ ರಾಜ್ಯಕ್ಕೆ ಈಗ 20 ವರ್ಷ..
ಇವತ್ತಿಗೆ(ಏಪ್ರಿಲ್ 2) ಸರಿಯಾಗಿ 20 ವರ್ಷಗಳ ಹಿಂದೆ ರಾಜ್ಯಕ್ಕೆ ಬರಸಿಡಿಲು ಬಂದೆರಗಿತ್ತು. ಕನ್ನಡ ಕಣ್ಮಣಿ ಡಾ. ರಾಜ್‌ಕುಮಾರ್ ಇನ್ನಿಲ್ಲ ಎನ್ನುವ ಶೋಕ ವಾರ್ತೆ ರಾಜ್ಯವನ್ನೇ ಸ್ತಬ್ಧ ಮಾಡಿತ್ತು. ರಾಷ್ಟ್ರ, ಅಂತರಾಷ್ಟ್ರೀಯಮಟ್ಟದಲ್ಲಿ ಸುದ್ದಿ ಆಗಿತ್ತು. ಏಪ್ರಿಲ್ 12, 2006ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಅಣ್ಣಾವ್ರು ನಿಧನರಾಗಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಿರಲಿಲ್ಲ. ಕನ್ನಡಕ್ಕೊಬ್ಬನೇ ಮುತ್ತುರಾಜ.
ವರನಟ ಡಾ. ರಾಜ್‌ಕುಮಾರ್ ಅಗಲಿ 20 ವರ್ಷಗಳು ಕಳೆದಿದೆ. ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿಗೆ ಪ್ರತಿದಿನ ಅಭಿಮಾನಿಗಳು ಬಂದು ನಮಿಸುತ್ತಿದ್ದಾರೆ. 20ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ರಾಜ್ ಪುಣ್ಯಭೂಮಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ.

ಆ ದಿನ ನಿಜಕ್ಕೂ ಕರ್ನಾಟಕ ಶೋಕಸಾಗರದಲ್ಲಿ ಮುಳುಗಿತ್ತು. ರಾಜ್ಯದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಭಿಮಾನಿಗಳು ಬೀದಿಗಿಳಿದು ಅಣ್ಣಾವ್ರ ಅಗಲಿಕೆಯ ನೋವು ತೋಡಿಕೊಂಡಿದ್ದರು. ಶಾಂತಿಯುತವಾಗಿ ಅಂತಿಮ ಯಾತ್ರೆ, ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳ ಅಭಿಮಾನದ ಮುಂದೆ ಪೊಲೀಸ್ ಇಲಾಖೆ ಕೈಚೆಲ್ಲುವಂತಾಗಿತ್ತು. ಕೊನೆಗೆ ಒಂದರ್ಥದಲ್ಲಿ ಅಭಿಮಾನಿಗಳೇ ಮುತ್ತುರಾಜನ ಅಂತ್ಯಕ್ರಿಯೆ ಮಾಡಿಬಿಟ್ಟರು. ಆ ಅಭಿಮಾನ, ಆ ಜನಸಾಗರ ಮತ್ತೆ ರಾಜ್ಯದಲ್ಲಿ ನೋಡಲು ಸಾಧ್ಯವಿಲ್ಲ. ಮುತ್ತುರಾಜನನ್ನು ಸ್ಮರಿಸುತ್ತಿದ್ದಾರೆ.
ಬರೀ ನಟನಾಗಿ ಮಾತ್ರವಲ್ಲದೇ ಕರ್ನಾಟಕ ರಾಜ್ಯಕ್ಕೆ ಅಣ್ಣಾವ್ರ ಕೊಡುಗೆ ಅಪಾರ. ಕನ್ನಡ ನಾಡು, ನುಡಿ, ನೆಲ ಜಲದ ವಿಚಾರ ಬಂದಾಗ ಡಾ. ರಾಜ್‌ಕುಮಾರ್ ಸದಾ ಮುಂದೆ ನಿಲ್ಲುತ್ತಿದ್ದರು. ಅಣ್ಣಾವ್ರು ಧುಮುಕಿದ ಬಳಿಕವೇ ಗೋಕಾಕ್ ಚಳುವಳಿ ಯಶಸ್ವಿಯಾಗಿದ್ದು. ಇನ್ನು ಕಾವೇರಿ ಹೋರಾಟ ಸೇರಿದಂತೆ ಸಾಕಷ್ಟು ಸಂದರ್ಭಗಳಲ್ಲಿ ಡಾ. ರಾಜ್‌ಕುಮಾರ್ ಬೀದಿಗಿಳಿದು ದನಿ ಎತ್ತಿದ್ದರು. ರಾಜ್ಯನಿಲ್ಲದ 20 ವರ್ಷಗಳಲ್ಲಿ ಆ ಕೂಗು ಇಲ್ಲದಂತಾಗಿದೆ. ಅಣ್ಣಾವ್ರ ಬಳಿಕ ವಿಷ್ಣುವರ್ಧನ್, ಅಂಬರೀಶ್ ಕೂಡ ದೂರಾಗಿ ಕರ್ನಾಟಕದ ಸಾಂಸ್ಕೃತಿಕ ಶಕ್ತಿಯೇ ಕಳೆಗುಂದಿದೆ.

ಚಿತ್ರರಂಗ ನಾವಿಕನಿಲ್ಲದ ದೋಣಿಯಂತಾಗಿದೆ. ವಿವಾದಗಳ ಪಟ್ಟಿ ಬೆಳೆಯುತ್ತಿದೆ. ಯಾರೂ ಯಾರ ಮಾತು ಕೇಳುತ್ತಿಲ್ಲ. ಚಿತ್ರರಂಗದ ನಾಯಕನ ಸ್ಥಾನ ಖಾಲಿಯಾಗಿದೆ. ಅದನ್ನು ಪಡೆಯಲು ಯಾರು ಮುಂದೆ ಬರ್ತಿಲ್ಲ. ಶಿವಣ್ಣ ಚಿತ್ರರಂಗದ ನಾಯಕತ್ವ ವಹಿಸಬೇಕು ಎನ್ನುವುದು ಕೆಲವರ ಆಗ್ರಹ. ಆದರೆ ಅವರು ಅದಕ್ಕೆ ಸಿದ್ಧರಿದ್ದಂತೆ ಕಾಣುತ್ತಿಲ್ಲ. ಇನ್ನು ರಾಜ್ಯದಲ್ಲಿ ಭಾಷೆ, ನೆಲ, ಜಲದ ವಿಚಾರ ಬಂದಾಗ ಆಗಾಗ್ಗೆ ಪ್ರತಿಭಟನೆ, ಹೋರಾಟಗಳು ನಡೆಯುತ್ತದೆ. ಅಷ್ಟೇ ಬೇಗ ತಣ್ಣಗಾಗಿಬಿಡುತ್ತವೆ. ಅಂತಹ ಸಮಯದಲ್ಲಿ ಅಣ್ಣಾವ್ರು ಇದ್ದಿದ್ರೆ, ಎನ್ನುವ ನೆನೆಪು ಕಾಡುತ್ತದೆ.
ದೈಹಿಕವಾಗಿ ಡಾ. ರಾಜ್‌ಕುಮಾರ್ ನಮ್ಮೊಂದಿಗೆ ಇಲ್ಲದೇ ಇದ್ದರೂ ತಮ್ಮ ಸಿನಿಮಾಗಳು, ಹಾಡುಗಳು ಹಾಗೂ ಆದರ್ಶ ವ್ಯಕ್ತಿತ್ವದಿಂದ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತಸ್ಥಾನ ಸಂಪಾದಿಸಿದ್ದಾರೆ. ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ರಾಜನಾಗಿ ಮೆರೆಯುತ್ತಿದ್ದಾರೆ. ವರನಟನ ನಗು, ಧ್ವನಿ, ಮತ್ತು ನಟನೆ ಕನ್ನಡಿಗರ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಗೊತ್ತಾಗಬಾರದು ಎನ್ನುವಂತೆ ಇದ್ದವರು ಡಾ. ರಾಜ್‌ಕುಮಾರ್. ಸಾಕಷ್ಟು ಜನರಿಗೆ ನೇರವಾಗಿ, ಪರೋಕ್ಷವಾಗಿ ಸಹಾಯ ಮಾಡಿದ್ದರು.
ಅಣ್ಣಾವ್ರನ್ನು ಹೊರತುಪಡಿಸಿ ಕನ್ನಡ ಚಿತ್ರರಂಗವನ್ನು ಊಹಿಸಿಕೊಳ್ಳುವುದು ಕಷ್ಟ. ಕನ್ನಡ ಚಿತ್ರರಂಗದ ಇತಿಹಾಸದ ಪುಸ್ತಕದಲ್ಲಿ 50% ಪುಟಗಳು ಮುತ್ತುರಾಜನಿಗೆ ಸೀಮಿತ. 1953ರಲ್ಲಿ ಡಾ. ರಾಜ್‌ಕುಮಾರ್ ಚಿತ್ರರಂಗ ಪ್ರವೇಶಿಸಿದ್ದರು. ಅದಕ್ಕೂ ಮುನ್ನ ಕನ್ನಡದಲ್ಲಿ ಒಟ್ಟು 30 ಸಿನಿಮಾಗಳು ನಿರ್ಮಾಣವಾಗಿದ್ದವು. ಮುತ್ತುರಾಜನ ಆಗಮನದ ಬಳಿಕ ಚಿತ್ರರಂಗ ವೇಗ ಪಡೆದಿತ್ತು. ಸ್ವತಃ ಅಣ್ಣಾವ್ರು ವರ್ಷಕ್ಕೆ 10ರಿಂದ 15 ಸಿನಿಮಾಗಳಲ್ಲಿ ನಟಿಸಿದ ಉದಾಹಣೆಯಿದೆ. ತಾನು ಬೆಳೆದು ಚಿತ್ರರಂಗವನ್ನು ಬೆಳೆಸಿದವರು ನಟಸಾರ್ವಭೌಮ. ಈಗ ವರ್ಷಕ್ಕೆ 200ಕ್ಕೂ ಅಧಿಕ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ. ಇಂತಾದೊಂದು ಉದ್ಯಮ ನಿರ್ಮಾಣದಲ್ಲಿ ಅಣ್ಣಾವ್ರ ಕೊಡುಗೆ ಅಪಾರ.


Click it and Unblock the Notifications











