ಪುನೀತ್ ಜೊತೆ ಯೋಗರಾಜ್ ಭಟ್ ಮುಂದಿನ ಚಿತ್ರ
ಯೋಗರಾಜ್ ಭಟ್ ನಿರ್ದೇಶನದ 'ಮನಸಾರೆ' ಚಿತ್ರ ಸೌತ್ ಸ್ಕೋಪ್ ಸಿನೆ ಪ್ರಶಸ್ತಿ 2010ರಲ್ಲಿ ಪ್ರಶಸ್ತಿಗಳ ಕೊಳ್ಳೆ ಹೊಡೆದಿದೆ. ಇದೇ ಸಂತಸದಲ್ಲಿ ಭಟ್ಟರು ಪುನೀತ್ ಜೊತೆ ಚಿತ್ರ ಮಾಡುವ ತಯಾರಿಯೂ ನಡೆದಿದೆ. 'ಲಗೋರಿ' ಚಿತ್ರದ ಮೂಲಕ ಯೋಗರಾಜ್ ಭಟ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಚಿತ್ರ ಈಗಾಗಲೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ 'ಲಗೋರಿ' ಚಿತ್ರದ ಕನಸು ಕೈಗೂಡಿರಲಿಲ್ಲ.
ಈಗ ಪುನೀತ್‌ಗಾಗಿ ಯೋಗರಾಜ್ ಭಟ್ಟರು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸದ್ಯಕ್ಕೆ 'ಪಂಚರಂಗಿ' ಮುಗಿಸಿರುವ ಯೋಗರಾಜ್ ಭಟ್ ತಮ್ಮ ಮುಂದಿನ ಯೋಜನೆಯನ್ನು ರೂಪಿಸುತ್ತಿದ್ದಾರೆ. ಕತೆ, ಚಿತ್ರಕತೆ ಹೆಣೆಯುತ್ತಿದ್ದು ಪುನೀತ್ ರಾಜ್ ಕುಮಾರ್ ಅವರ 'ಜಾಕಿ' ಚಿತ್ರದ ಬಳಿಕ ಭಟ್ ಮತ್ತು ಪುನೀತ್ ಕಾಂಬಿನೇಷನ್ ಚಿತ್ರದ ವಿವರಗಳು ಲಭ್ಯವಾಗಲಿವೆ.
ಯುವಕರು ಮತ್ತು ಕುಟುಂಬವನ್ನು ಉದ್ದೇಶವಾಗಿಟ್ಟುಕೊಂಡು ಈ ಬಾರಿ ಯೋಗರಾಜ್ ಭಟ್ಟರ ಕತೆ ಹೆಣೆಯುತ್ತಿದ್ದಾರೆ. ಈ ಹಿಂದೆ ತಾವು 'ಲಗೋರಿ' ಚಿತ್ರವನ್ನು ಪುನೀತ್ ಜೊತೆ ಮಾಡಬೇಕೆಂದಿದುಕೊಂಡಿದ್ದೆ. ಆದರೆ ನನ್ನ ಎಣಿಕೆಯ ಪ್ರಕಾರ ಆಗದ ಕಾರಣ ಚಿತ್ರವನ್ನು ಮಧ್ಯದಲ್ಲೆ ಕೈಬಿಟ್ಟೆ. ಈಗ ಹೊಸ ಸಬ್ಜೆಕ್ಟ್‌ನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಯೋಗರಾಜ್ ಭಟ್.
ತಮ್ಮ 'ಪಂಚರಂಗಿ' ಚಿತ್ರ 'ಮನಸಾರೆ' ಚಿತ್ರಕ್ಕಿಂತಲೂ ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿದೆ. 'ಮುಂಗಾರು ಮಳೆ' ಚಿತ್ರದ ಅತ್ಯಧಿಕ ಪ್ರೇಕ್ಷಕರಲ್ಲಿ 14 ರಿಂದ 15 ವರ್ಷ ವಯೋಮಾನದವರಿದ್ದರು. ಮುಂಗಾರು ಮಳೆ ಬಿಡುಗಡೆಯಾಗಿದ್ದಾಗ ಇದ್ದಂತಹ ಪ್ರೇಕ್ಷಕ ವರ್ಗ 'ಪಂಚರಂಗಿ' ಚಿತ್ರಕ್ಕೂ ಇದೆ ಎಂದಿದ್ದಾರೆ.


Click it and Unblock the Notifications











